ಉಂಡಿದ್ದೇ ಉಗಾದಿ, ಉಟ್ಟಿದ್ದೇ ದೀವಳಿಗೆ

7

ಉಂಡಿದ್ದೇ ಉಗಾದಿ, ಉಟ್ಟಿದ್ದೇ ದೀವಳಿಗೆ

Published:
Updated:

ನನಗಿನ್ನೂ ಕೆಲಸ ಸಿಕ್ಕಿರಲಿಲ್ಲ. ಡಿಗ್ರಿ ಮುಗಿಸಿ ಕೆಲಸದ ಅನ್ವೇಷಣೆಯಲ್ಲಿದ್ದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅಪ್ಪ ರಂಗಭೂಮಿ ಕಲಾವಿದ. ಆತನ ಷೋಕಿಗಾಗಿ ಮಿಕ್ಕಿದ್ದು ನಮಗೆ ಕಳಿಸುವಾತ. ಒಂದಿನ ಉಪವಾಸ ಒಂದಿನ ವನವಾಸ ಎಂಬಂತೆ ಅಮ್ಮ, ನಮ್ಮನ್ನು ಸಾಕುತ್ತಿದ್ದ ದುರ್ಬರ ದಿನಗಳವು.

ಹಬ್ಬಗಳು ಬಂತೆಂದರೆ ನಮಗೆಲ್ಲಾ ಮುಜುಗರ. ಹೊಸಬಟ್ಟೆ ತೊಡಬೇಕು, ಸಿಹಿ ಅಡಿಗೆ ಮಾಡಬೇಕು, ದೀಪಾವಳಿಗೆ ದೀಪಗಳ ಶೃಂಗಾರ ಪಟಾಕಿಗಳ ಗದ್ದಲ. ಇವೆಲ್ಲಾ ಇದ್ದಂಥವರ ಮನೆಗಳ ಸಂಪ್ರದಾಯ. ಇಲ್ಲದವರಿಗೆ ಅದೇ ತ್ರಾಸದಾಯಕ. ನಾನು ಅಮ್ಮ ತಂಗಿ ತಮ್ಮ ಅನೇಕ ಬಾರಿ ಖಾಲಿ ತಟ್ಟೆಗೆ ನೀರು ಹಾಕಿ ಹೊರಗೆ ತಂದು ಚೆಲ್ಲಿ ಊಟವಾಯಿತೆಂದು ಸುತ್ತಮುತ್ತಲ ಮನೆಯವರೆದುರು ಪ್ರದರ್ಶಿಸುತ್ತಿದ್ದದೂ ಉಂಟು.

ನಮ್ಮದು ಪುಟ್ಟ ಮನೆ. ಮನೆಗೆಲ್ಲಾ ಒಂದೇ ಬಲ್ಬು. ಪುಟ್ಟಮನೆಯಲ್ಲೇ ಒಂದು ಸ್ಕ್ರೀನ್. ಅದರೊಳಗೆ ಅಡಿಗೆ ಮನೆ. ಹೊರಗಿನದು ಹಾಲ್. ನಾವು ಓದುವಾಗ ಸ್ಟಡಿರೂಮ್, ಯಾರಾದರೂ ಆಗಮಿಸಿದರೆ ಹಾಲ್, ರಾತ್ರಿಗೆ ಬೆಡ್‌ರೂಮ್, ಹೀಗೆ ರೂಪಾಂತರ ಹೊಂದುತ್ತಿದ್ದ ಮನೆಯನ್ನು ಅಲಂಕರಿಸುತ್ತಿದ್ದದು 60 ಕ್ಯಾಂಡಲ್ ಬಲ್ಬ್ ಒಂದೇ. ಶೌಚಕ್ಕೆ ಬಯಲು. ಅಡಿಗೆಮನೆ ಆಚೆ ಚಿಕ್ಕ ಬಾತ್ ರೂಮ್. ಹಬ್ಬಗಳು ಬಂದರಂತೂ ನಾವೆಲ್ಲಾ ನೆರೆಯವರ ಎದುರು ಕೀಳಿರಿಮೆಯಿಂದ ಮುದುಡಿದ್ದರೂ ತೋರಿಸಿಕೊಳ್ಳುತ್ತಿರಲಿಲ್ಲವೆನ್ನಿ.
ಇಂತಹ ದಿನಗಳಲ್ಲೇ ಪ್ರತಿವರ್ಷದಂತೆ ದೀಪಾವಳಿ ಬಂತು. ನಮ್ಮದೋ ಮಾಮೂಲಿ ಮುದ್ದೆ ಚಟ್ನಿ ಸಿಕ್ಕರೆ ಅದೇ ದೀಪಾವಳಿ. ಉಂಡಿದ್ದೇ ಉಗಾದಿ ಉಟ್ಟಿದ್ದೇ ದೀಪಾವಳಿ. ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಂಜೆಗತ್ತಲು ಮುಸುಕುತ್ತಿದ್ದಂತೆ ಪ್ರತಿ ಮನೆಗಳ ಮುಂದೆ ದೀಪಗಳ ಝಗಮಗ. ನಕ್ಷತ್ರ ಕಡ್ಡಿಯ ಚಿತ್ತಾರ ಪಟಾಕಿಗಳ ಢಮಢಮ.

ನಮ್ಮಮ್ಮ ಬಾಗಿಲ ಬಳಿ ಎದುರು ಪ್ರಣತೆ ಹಚ್ಚಿಟ್ಟವಳು ದೀಪ ಹಾಕಿದರೆ, ಇದ್ದ ಒಂದೂ ಬಲ್ಬೂ ಬರ‍್ನ್! ಎಲ್ಲರ ಎದೆ ಧಸಕ್. ಬಲ್ಬ್ ತರಲೂ ಕಾಸಿಲ್ಲ. ಕಾಸಿದ್ದರೂ ಸಾಲುತ್ತಿಲ್ಲ. ಎಂದಿನಂತೆ ಸಂಜೆ ಗೆಳೆಯರು ಕರೆಯಲು ಬಂದರು. ಕತ್ತಲಲ್ಲಿ ಇದ್ದೇವೆ. ಯಾರನ್ನಾದರೂ ಸಾಲ ಕೇಳಲು ಅಮ್ಮನಿಗೆ ಹಬ್ಬ ಅಡ್ಡಬಂದಿತ್ತು. ಪೂರಾ ಕತ್ತಲಾದರೆ ನೆರೆಹೊರೆಯವರು ಪ್ರಶ್ನಿಸದೆ ಇರುತ್ತಾರೆಯೆ? ಎಂಬ ಎದೆಗುದಿ. ದೇವರನ್ನು ಶಪಿಸುತ್ತಿದ್ದಳು ಅಮ್ಮ. ಗೆಳೆಯರದ್ದೂ ಹೆಚ್ಚುಕಮ್ಮಿ ನನ್ನದೇ ಸ್ಥಿತಿ.

ಆದರೆ ಬಂದವರಲ್ಲಿ ಶರಭಣ್ಣನೇ ಸಿರಿವಂತ. ಮನೇಲಿ ಇಂತಹ ಪರಿಸ್ಥಿತಿ ಇಟ್ಕೊಂಡು ನಿಮ್ಮ ಅಂಗಡಿಯ ಲಕ್ಷ್ಮಿ ಪೂಜೆಗೆ ಹೇಗಯ್ಯ ಬರಲಿ? ಎಂದು ಅಲವತ್ತುಕೊಂಡೆ. ನೀನು ಬರ‍್ಲೇಬೇಕು ಎಂಬ ಪ್ರೀತಿಯ ಒತ್ತಾಯ ಅವನದು. ಕತ್ತಲೆ ಆವರಿಸುತ್ತಿದ್ದ ಮನೆಯಲ್ಲಿ ಗುಬ್ಬಚ್ಚಿಗಳಂತೆ ಕೂತ ನನ್ನ ತಾಯಿ ತಮ್ಮ ತಂಗಿಯನ್ನು, ಮತ್ತಷ್ಟು ಕಪ್ಪಿಟ್ಟ ನನ್ನ ಮೋರೆಯನ್ನೂ ನೋಡಿದ ಅವನು, ತಡಿಯೋ ಬಂದೆ ಎಂದು ಎಲ್ಲಿಗೋ ಹೋದ. ಉಳಿದವರು ಸಪ್ಪೆ ಮೋರೆ ಹಾಕಿದರು. ಕ್ಷಣದಲ್ಲೇ ಬಂದ ಶರಭಣ್ಣ ಬರ‍್ನ್ ಆಗಿರುವ ಬಲ್ಬ್ ತೆಗೆದು ತಾನು ತಂದಿದ್ದ ಹೊಸ ಬಲ್ಬ್ ಹಾಕಿದ. ಮನೆಯವರೆಲ್ಲರ ಮೋರೆಯಲ್ಲಿ ಹೊಸಬೆಳಕು ಮನೆಯಲ್ಲೂ ಹೊಸಬೆಳಕು ಮೂಡಿತು. ಇದಲ್ಲವೆ ನಿಜವಾದ ದೀಪಾವಳಿ. ಇಂತಹ ಎಷ್ಟೋ ಕಷ್ಟದ ದಿನಗಳಲ್ಲಿ ನನ್ನ ಗೆಳೆಯರು ನನ್ನನ್ನು ಉಳಿಸಿದ್ದಾರೆ. ನಾನು ಬರೆದ ಕಥೆಗಳನ್ನೂ ಪತ್ರಿಕೆಗಳಿಗೆ ಪೋಸ್ಟ್ ಮಾಡಲು ಕಾಸಿಲ್ಲದಿದ್ದಾಗ ಅವರೇ ಸ್ಟಾಂಪ್ ಹಚ್ಚಿ ರಿಜಿಸ್ಟರ‍್ಡ್ ಮಾಡಿದ್ದಾರೆ. ಆವತ್ತಿಗೆ ನನ್ನ ಗೆಳೆಯರೇ ನನ್ನ ಶಕ್ತಿ. ಈವತ್ತಿನ ಪರಿಸ್ಥಿತಿ ಹಾಗಿಲ್ಲವಾದರೂ ಇದೆಲ್ಲಾ ಏಕೋ ನೆನಪಾಯಿತು. ಕತ್ತಲಾದ ಮೇಲೆ ಬೆಳಕು ಖಂಡಿತ ಬಂದೇ ಬರುತ್ತದೆ. ಅಲ್ಲಿಯವರೆಗೆ ನಾವು ಕಾಯಬೇಕಷ್ಟೆ. 1970ರ ದಶಕದಲ್ಲಿ 60 ಕ್ಯಾಂಡಲ್ ಬಲ್ಬ್ ಒಂದರ ಬೆಲೆ ಕೇವಲ ಎರಡು ರೂಪಾಯಿ. ಈಗದು ಕೇವಲ... ಆಗ!?

ಬರಹ ಇಷ್ಟವಾಯಿತೆ?

 • 34

  Happy
 • 1

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !