ಗುರುವಾರ , ಅಕ್ಟೋಬರ್ 29, 2020
21 °C

ಕುಸಿದ ಆವಕ: ಸ್ಥಿರತೆಯತ್ತ ಧಾರಣೆ

ನಾಗರಾಜ ಎನ್‌. Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಜಿಲ್ಲೆಯ ಭದ್ರಾ ಅಚ್ಚುಕಟ್ಟು ಮತ್ತು ಮಳೆಯಾಶ್ರಿತ ಪ್ರದೇಶದ ಪ್ರಮುಖ ಬೆಳೆಯಾದ ಅಡಿಕೆಯ ಇಳುವರಿ ಕುಸಿತ ಕಂಡಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಹಸಿ ಅಡಿಕೆ ಬರುತ್ತಿಲ್ಲ.

ಬಹುತೇಕ ಭಾಗಗಳಲ್ಲಿ ಬೆಳೆಗಾರರು ತೋಟದಲ್ಲೇ ಹಸಿ ಅಡಿಕೆಯನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಇಲ್ಲವೇ ಸ್ವತಃ ಸಂಸ್ಕರಿಸುತ್ತಾರೆ. ಆದರೆ, ದಾವಣಗೆರೆಯಲ್ಲಿ ಹಸಿ ಅಡಿಕೆ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆಯಿದೆ. ಸಹಕಾರ ಸಂಸ್ಥೆಗಳೂ ಅಲ್ಲದೇ ಖಾಸಗಿ ಮಂಡಿಗಳೂ ರೈತರಿಗೆ ಮಾರುಕಟ್ಟೆ ಒದಗಿಸಿವೆ. ಚಿತ್ರದುರ್ಗ, ಹಾವೇರಿ, ತುಮಕೂರು, ಶಿವಮೊಗ್ಗ ಜಿಲ್ಲೆಗಳ ರೈತರು ದಾವಣಗೆರೆಯಲ್ಲಿ ಹಸಿ ಅಡಿಕೆ ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡುತ್ತಾರೆ.

‘ಪ್ರತಿ ವರ್ಷ 1 ಲಕ್ಷ ಚೀಲ ಹಸಿ ಅಡಿಕೆ ಮಾರಾಟವಾಗುತ್ತದೆ. ಆದರೆ, ಈ ಬಾರಿ 30 ಸಾವಿರ ಚೀಲ ಆವಕ ಕುಸಿತ ಕಂಡಿದೆ. ಈಗಾಗಲೇ ಈ ಭಾಗದ ಅಡಿಕೆ ಕೊಯ್ಲು ಮುಗಿಯುತ್ತಾ ಬಂದಿದ್ದು, ಇದುವರೆಗೆ ಮಾರುಕಟ್ಟೆಯಲ್ಲಿ  60 ಸಾವಿರ ಚೀಲ ಅಡಿಕೆ ಮಾರಾಟವಾಗಿದೆ. ಹೆಚ್ಚೆಂದರೆ ಇನ್ನು 10 ಸಾವಿರ ಚೀಲ ಮಾರುಕಟ್ಟೆಗೆ ಬರಬಹುದು’ ಎಂದು ಮಾಹಿತಿ ನೀಡುತ್ತಾರೆ ದಾವಣಗೆರೆ ಅಡಿಕೆ ಅಭಿವೃದ್ಧಿ, ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಲೆಕ್ಕಾಧಿಕಾರಿ ಲಿಂಗರಾಜ್‌.

ಸ್ಥಿರತೆಯತ್ತ ದರ: ಹಸಿ ಅಡಿಕೆ ಇಳುವರಿ ಕುಸಿದರೂ ದರದಲ್ಲಿ ಹೆಚ್ಚು ವ್ಯತ್ಯಾಸ ಆಗದಿರುವುದು ರೈತರನ್ನು ಕೊಂಚ ನಿರಾಳರನ್ನಾಗಿ ಮಾಡಿದೆ.

‘ಕಳೆದ ವರ್ಷ ಹಸಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ₹ 3,800ರಿಂದ ₹ 4,500ರವರೆಗೆ ಮಾರಾಟವಾಗಿತ್ತು. ಈ ವರ್ಷ ₹ 4,500ರಿಂದ 4,700ರವರೆಗೆ ವಹಿವಾಟು ನಡೆದಿದೆ. ಬಿಸಿಲಿನ ವಾತಾವರಣ ಇರುವುದರಿಂದ ಸಂಸ್ಕರಣೆ ಸುಲಭ. ಹೀಗಾಗಿ, ಹಸಿ ಅಡಿಕೆಗೆ ಬೇಡಿಕೆಯೂ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರಿ ಬಸವರಾಜಪ್ಪ.

ಬೆಲೆ ಹೆಚ್ಚಬೇಕಿತ್ತು: ದೇಶದ ಬೇಡಿಕೆ ಪೂರೈಸುವಷ್ಟು ಅಡಿಕೆ ಈ ವರ್ಷ ಉತ್ಪಾದನೆಯಾಗಿಲ್ಲ. ಆದರೆ, ಹೊರ ದೇಶಗಳಿಂದ ಅಕ್ರಮವಾಗಿ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಇಲ್ಲಿನ ಅಡಿಕೆಯ ದರ ಏರಿಕೆಗೆ ತಡೆಯಾಗಿದೆ. ಅಕ್ರಮಗಳಿಗೆ ಕಡಿವಾಣ ಹಾಕಿದರೆ ಬೆಲೆ ಇನ್ನೂ ಹೆಚ್ಚಲಿದೆ. ರೈತರಿಗೆ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ದಾವಣಗೆರೆ ಅಡಿಕೆ ಅಭಿವೃದ್ಧಿ, ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್‌. ಜಯಣ್ಣ.

‘ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಿದ್ದು, ಚನ್ನಗಿರಿ ತಾಲ್ಲೂಕಿನಲ್ಲಿ ಫಸಲು ಕಡಿಮೆಯಾಗಿಲ್ಲ. ದಾವಣಗೆರೆ ತಾಲ್ಲೂಕಿನ 12,500 ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ತಾಲ್ಲೂಕಿನ ಕೆಲವೆಡೆ ಕೊಳವೆಬಾವಿಗಳ ವೈಫಲ್ಯ, ನಾಲೆ ನೀರಾವರಿ ಭಾಗದಲ್ಲಿ ಕೆಲವೆಡೆ ಕಾಣಿಸಿಕೊಂಡಿರುವ ಕೊಳೆರೋಗ, ಅಡಿಕೆ ಗರಿಗೆ ಕಾಡಿರುವ ಹುಳು ಬಾಧೆಯಿಂದಾಗಿ ಅಲ್ಪ ಪ್ರಮಾಣದಲ್ಲಿ ಇಳುವರಿ ಕುಸಿದಿದೆ’ ಎಂದು ಮಾಹಿತಿ ನೀಡುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು