ಶುಕ್ರವಾರ, ಅಕ್ಟೋಬರ್ 18, 2019
24 °C
ಟ್ವೆಂಟಿ–20 ಕ್ರಿಕೆಟ್‌: ಸರಣಿಗೆ ಗೆಲುವಿನ ಮೇಲೆ ಆಸ್ಟ್ರೇಲಿಯಾ ಕಣ್ಣು

ಸಮಬಲ ಸಾಧನೆಗೆ ವಿರಾಟ್ ಬಳಗದ ಯೋಜನೆ

Published:
Updated:
Deccan Herald

ಸಿಡ್ನಿ : ಭಾನುವಾರ ಮಳೆಯ ಆಟ ನಡೆಯದಿದ್ದರೆ ಭಾರತ ತಂಡವು ಸರಣಿ ಸಮ ಮಾಡಿಕೊಳ್ಳಲು ಮತ್ತು ಆತಿಥೇಯ ಆಸ್ಟ್ರೇಲಿಯಾ ಸರಣಿ ಗೆಲ್ಲಲು ಹೋರಾಟ ಮಾಡಲಿವೆ. ಒಂದೊಮ್ಮೆ ಮಳೆಯ ಆಟವೇ ಮೇಲುಗೈ ಸಾಧಿಸಿದರೆ, ಸರಣಿ ಆತಿಥೇಯರ ಪಾಲಾಗುವುದು ಖಚಿತ!

ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯ ಮೊದಲೆರಡು ಹಣಾಹಣಿಗಳಲ್ಲಿ ಭಾರತ ಒಂದರಲ್ಲಿ ಸೋತಿತ್ತು. ಆದರೆ ಶುಕ್ರವಾರ ಮೆಲ್ಬರ್ನ್‌ನಲ್ಲಿ ಎರಡನೇ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇದರಿಂದಾಗಿ ಭಾರತ ತಂಡಕ್ಕೆ ಸರಣಿ ಗೆಲುವಿನ ಅವಕಾಶ ಕೈತಪ್ಪಿದೆ. ಆದರೆ, ಈ ಪಂದ್ಯದಲ್ಲಿ ಗೆದ್ದು ಮುಂಬರುವ ಟೆಸ್ಟ್‌ ಸರಣಿಗೆ ಆತ್ಮಬಲ ಹೆಚ್ಚಿಸಿಕೊಳ್ಳುವ ಯೋಜನೆಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಳಗವಿದೆ.

ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 19 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 137 ರನ್‌ ಗಳಿಸಿತ್ತು ಆ ಹಂತದಲ್ಲಿ ಆರಂಭವಾದ ಮಳೆ ಸತತವಾಗಿ ಸುರಿಯಿತು. ಇದರಿಂದಾಗಿ ಭಾರತಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಭಾರತದ ಬೌಲಿಂಗ್ ಪಡೆ ಉತ್ತಮವಾಗಿ ಆಡಿತ್ತು. ಭುವನೇಶ್ವರ್ ಕುಮಾರ್ ಮತ್ತು ಖಲೀಲ್ ಅಹಮದ್ ತಲಾ ಎರಡು, ಬೂಮ್ರಾ, ಕುಲದೀಪ್ ಯಾದವ್ ಮತ್ತು ಕೃಣಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದಿದ್ದರು. ಆತಿಥೇಯ ಬ್ಯಾಟ್ಸ್‌ಮನ್‌ಗಳು ದೊಡ್ ಸ್ಕೋರ್ ಗಳಿಸದಂತೆ ಕಟ್ಟಿಹಾಕುವಲ್ಲಿ ಸಫಲರಾಗಿದ್ದರು.  ಬ್ಯಾಟಿಂಗ್‌ಗೆ ಅವಕಾಶ ಲಭಿಸಿದ್ದರೆ ಶಿಖರ್ ಧವನ್, ವಿರಾಟ್ ಕೊಹ್ಲಿ, ರಾಹುಲ್, ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರು ತಮ್ಮ ಸಾಮರ್ಥ್ಯ ತೋರಿಸುವ ಸಾಧ್ಯತೆ ಇತ್ತು. 

ಮೊದಲ ಪಂದ್ಯದಲ್ಲಿ ಇದ್ದ ತಂಡವನ್ನೇ ಎರಡನೇ ಪಂದ್ಯದಲ್ಲಿಯೂ ಭಾರತ ಉಳಿಸಿಕೊಂಡಿತ್ತು. ಇದೀಗ ಕೊನೆಯ ಪಂದ್ಯದಲ್ಲಿಯೂ ಅದೇ ಹನ್ನೊಂದರ ಬಳಗವು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ರಾಹುಲ್ ಅವರು ಬ್ಯಾಟಿಂಗ್ ಲಯಕ್ಕೆ ಮರಳುವ ಅವಶ್ಯಕತೆ ಇದೆ. ಮನೀಷ್ ಪಾಂಡೆಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಸಿಡ್ನಿಯಲ್ಲಿಯೂ ಮಳೆ ಬರುವ ಸಾಧ್ಯತೆ ಇದೆ. ಆದ್ದರಿಂದ ಟಾಸ್  ಗೆದ್ದ ತಂಡದ ನಿರ್ಣಯವೂ ಪಂದ್ಯದ ಫಲಿತಾಂಶದ ಮೇಲೆ ಪ್ರಮುಖ ಪಾತ್ರವಹಿಸಲಿದೆ.

ತಂಡಗಳು ಇಂತಿವೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್,  ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ರಿಷಭ್ ಪಂತ್ (ವಿಕೆಟ್‌ಕೀಪರ್), ಕೃಣಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಖಲೀಲ್ ಅಹಮದ್, ವಾಷಿಂಗ್ಟನ್ ಸುಂದರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಆ್ಯಷ್ಟನ್ ಆಗರ್, ಜೇಸ್ ಬ್ರೆನ್‌ಡಾರ್ಫ್‌, ಅಲೆಕ್ಸ್‌ ಕ್ಯಾರಿ, ನೇಥನ್ ಕೌಲ್ಟರ್‌ ನೈಲ್, ಕ್ರಿಸ್ ಲಿನ್, ಬೆನ್ ಮೆಕ್‌ಡರ್ಮಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡಾರ್ಸಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಕಸ್ ಸ್ಟೊಯಿನಿಸ್,   ಆ್ಯಡ್ರಯೂ ಟೈ, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.20

ನೇರಪ್ರಸಾರ: ಸೋನಿ ನೆಟ್‌ವರ್ಕ್

Post Comments (+)