ಗುರುವಾರ , ಆಗಸ್ಟ್ 18, 2022
23 °C
ಸಂಸದನಾಗಿ ಮೂರು ಬಾರಿ ಆಯ್ಕೆ, ಒಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು

‘ಕಾವೇರಿ’ಗಾಗಿ ರಾಜೀನಾಮೆ ಕೊಟ್ಟಿದ್ದ ಮಂಡ್ಯದಗಂಡು

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Deccan Herald

ಮಂಡ್ಯ: ಕಾವೇರಿ ಹೋರಾಟ ಬೆಂಬಲಿಸಿ 2007ರಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ರಾಜೀನಾಮೆ ಸಲ್ಲಿಸಿದ್ದ ಮಂಡ್ಯದಗಂಡು ಅಂಬರೀಷ್‌ ಅವರ ಹೆಸರು ಜಿಲ್ಲೆಯಲ್ಲಿ ಮತ್ತಷ್ಟು ಎತ್ತರಕ್ಕೆ ತಲುಪಿತ್ತು.

‘ಅಂಬರೀಷಣ್ಣ’ ಎಂದರೆ ಕಲಿಯುಗದ ಕರ್ಣ ಎಂದೇ ಪ್ರೀತಿಸುವ ಜನರಿಗೆ ಜಿಲ್ಲೆಯಲ್ಲಿ ಕೊರತೆ ಇಲ್ಲ. ಅವರ ಪ್ರತಿ ಜನ್ಮದಿನದಲ್ಲಿ ಅವರ ಭಾವಚಿತ್ರಕ್ಕೆ ಅಭಿಮಾನಿಗಳು, ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ ಪ್ರೀತಿ ತೋರುತ್ತಾರೆ. ಪಿಟೀಲು ಚೌಡಯ್ಯ ಅವರ ಮೊಮ್ಮಗನಾಗಿದ್ದ ಅವರು ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಹುಟ್ಟಿದರು. ಪ್ರತಿ ಚುನಾವಣೆಯಲ್ಲಿ ಅವರು ಗ್ರಾಮಕ್ಕೆ ಬಂದು ಮತದಾನ ಮಾಡುವುದನ್ನು ಮರೆಯುತ್ತಿರಲಿಲ್ಲ.

ಜುಲೈ 26ರಂದು ಅವರು ದೊಡ್ಡರಸಿನಕೆರೆ ಗ್ರಾಮದಲ್ಲಿರುವ ತಮ್ಮ 7 ಎಕರೆ ಜಮೀನನ್ನು ಪುತ್ರ ಅಭಿಷೇಕ್‌ ಅವರಿಗೆ ವಿಲ್‌ ಮಾಡಿದ್ದರು. ಅವರ ಸೋದರ ಸಂಬಂಧಿ ಕೆ.ಎಲ್‌.ಗೌಡ ಜಮೀನು ನೋಡಿಕೊಳ್ಳುತ್ತಿದ್ದರು. ಹುಟ್ಟೂರಿನ ಅನ್ನ ಎಂಬ ಕಾರಣಕ್ಕೆ ಪ್ರತಿ ವರ್ಷ ಒಂದು ಚೀಲ ಅಕ್ಕಿಯನ್ನಷ್ಟೇ ಅಂಬರೀಷ್‌ ಪಡೆಯುತ್ತಿದ್ದರು.

ರಾಜಕೀಯ ಹಾದಿ: 1996ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಜನತಾದಳದಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಲಿಂಗಪ್ಪ ಅವರ ಎದುರು ಸೋಲು ಕಂಡರು. 1998ರ ಲೋಕಸಭಾ ಚುನಾವಣೆ ವೇಳೆ ಅಂಬರೀಷ್‌ ಜನತಾದಳ ಸೇರ್ಪಡೆಯಾದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಮಾದೇಗೌಡ ವಿರುದ್ಧ ಸ್ಪರ್ಧಿಸಿದ್ದ ಅಂಬರೀಷ್‌ 80,523 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಗುರು–ಶಿಷ್ಯರ ಕಾಳಗದಲ್ಲಿ ಅಂಬರೀಷ್‌ ಗುರುವನ್ನೇ ಸೋಲಿಸಿದರು. ನಂತರ ಬದಲಾದ ರಾಜಕೀಯ ಸ್ಥಿತಿಯಲ್ಲಿ ಜನತಾದಳ ಛಿದ್ರವಾಯಿತು. ನಂತರ ಅವರು ಕಾಂಗ್ರೆಸ್‌ ಅಂಗಳಕ್ಕೆ ಕಾಲಿಟ್ಟರು. 1999ರ ಚುನಾವಣೆಯಲ್ಲಿ ಅಂಬರೀಷ್‌ 1,62,280 ಮತಗಳ ಅಂತದರಿಂದ ಗೆದ್ದರು. 2004ರಲ್ಲಿ ಮತ್ತೆ ಗೆಲುವು ಸಾಧಿಸಿ ಯುಪಿಎ–1 ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರಾದರು.ನಂತರ ಕಾವೇರಿ ಹೋರಾಟಕ್ಕಿಳಿದು ರಾಜೀನಾಮೆ ಸಲ್ಲಿಸಿದರು.

ವಿಧಾನಸಭೆಗೆ ಬಂದರು: 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಷ್‌ ರಾಜ್ಯ ರಾಜಕಾರಣಕ್ಕೆ ಮರಳಿದರು. ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್‌ನಲ್ಲಿದ್ದ ರಮೇಶ್‌ ಬಂಡಿಸಿದ್ದೇಗೌಡ ವಿರುದ್ಧ ಸೋಲು ಕಂಡರು. ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್‌ನಲ್ಲಿದ್ದ ಎನ್‌.ಚಲುವರಾಯಸ್ವಾಮಿ ವಿರುದ್ಧ ಸೋಲು ಕಂಡರು. ಮತ್ತೆ 2013ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 1.80 ಲಕ್ಷ ಮತಗಳ ಅಂತರದಿಂದ ಗೆಲುವು ಕಂಡರು. ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಸಚಿವರಾದರು. ಸಿದ್ದರಾಮಯ್ಯ ಸರ್ಕಾರ ಅವರನ್ನು ಸಚಿವ ಸ್ಥಾನದಿಂದ ಅರ್ಧದಲ್ಲೇ ಕೈಬಿಟ್ಟಿತು. ಆಗ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾಗಿದ್ದರು.

ಇನ್ನಷ್ಟು ಓದು

ಅಂಬಿಗೆ ನಿಜಕ್ಕೂ ವಯಸ್ಸಾಯ್ತಾ?  ಅಭಿಮಾನಿಗಳಿಗೆ ಅಂಬರೀಷ್ ಬರೆದಿದ್ದ ಪತ್ರ
‘ಕಾವೇರಿ’ಗಾಗಿ ರಾಜೀನಾಮೆ ಕೊಟ್ಟಿದ್ದ ಮಂಡ್ಯದ ಗಂಡು
ಗೆಳೆಯನ ಸಾವು; ಕಂಬನಿ ಮಿಡಿದ ರಜನಿಕಾಂತ್‌
ಗ್ಲ್ಯಾಮರ್–ಗ್ರ್ಯಾಮರ್ ಸೂತ್ರ ಸಿನಿಮಾ-ರಾಜಕಾರಣದ ಪಾತ್ರ

ನಟ ಅಂಬರೀಷ್‌ ನಿಧನ

2018ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ನೀಡಲು ಸಿದ್ಧವಿತ್ತು. ಕಡೇಕ್ಷಣದವರೆಗೂ ಕಾಂಗ್ರೆಸ್‌ ಮುಖಂಡರು ಕಾದರು. ಕೊನೆಗೆ ಅಂಬರೀಷ್‌ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಮಾಡಿದರು. ಅ.30 ಲೋಕಸಭಾ ಉಪ ಚುನಾವಣೆ ದಿನ ಮತ ಚಲಾವಣೆ ಮಾಡಲು ದೊಡ್ಡರಸಿನಕೆರೆ ಗ್ರಾಮಕ್ಕೆ ಬಂದಿದ್ದರು.

ರಾಜಕೀಯ ಹಾದಿ

* 1996ರಲ್ಲಿ ಜನತಾದಳದಿಂದ ರಾಮನಗರ ವಿಧಾನಸಭೆಗೆ ಸ್ಪರ್ಧೆ– ಸೋಲು
*1998ರಲ್ಲಿ ಮಂಡ್ಯ ಲೋಕಸಭೆಗೆ ಜನತಾದಳದಿಂದ ಸ್ಪರ್ಧೆ– ಗೆಲುವು
* 1999 ಮಂಡ್ಯ ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ– ಗೆಲುವು
* 2004 ಮಂಡ್ಯ ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆ– ಗೆಲುವು, ಕೇಂದ್ರ ಮಂತ್ರಿ
* 2008ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧೆ– ಸೋಲು
* 2008ರಲ್ಲಿ ಮಂಡ್ಯ ಲೋಕಸಭೆಗೆ ಸ್ಪರ್ಧೆ– ಸೋಲು
* 2013ರಲ್ಲಿ ಮಂಡ್ಯ ವಿಧಾನಸಭೆಗೆ ಸ್ಪರ್ಧೆ– ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು