ಮಂಗಳವಾರ, ಮಾರ್ಚ್ 2, 2021
23 °C
ಬಾದಾಮಿ, ಬೀಳಗಿಯಲ್ಲಿ ಸಾಮಾನ್ಯ ಸೋಂಕಿತರ ಸಂಖ್ಯೆ ಹೆಚ್ಚಳ

ಎಚ್‌ಐವಿ: ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಹೊಸದಾಗಿ ಎಚ್.ಐ.ವಿ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಆದರೆ ಬಾದಾಮಿ ಮತ್ತು ಬೀಳಗಿ ತಾಲ್ಲೂಕಿನಲ್ಲಿ ಏರಿಕೆಯಾಗಿದ್ದು, ಮುಧೋಳ ಮತ್ತು ಜಮಖಂಡಿ ತಾಲ್ಲೂಕುಗಳಲ್ಲಿ ಕಡಿಮೆಯಾಗಿದೆ.

ಆರೋಗ್ಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ–ಅಂಶದ ಪ್ರಕಾರ, ಕಳೆದ ವರ್ಷ ಹೊಸದಾಗಿ ಸೋಂಕಿತರ ಪ್ರಮಾಣ ಶೇ 2.7ರಷ್ಟಿದ್ದರೆ ಈ ವರ್ಷ ಅದು 2.6ಕ್ಕೆ ಇಳಿಕೆಯಾಗಿದೆ. ಅಲ್ಪ ನೆಮ್ಮದಿಗೆ ಕಾರಣವಾಗಿದೆ.

ಗರ್ಭಿಣಿಯರಲ್ಲೂ ಶೇ 0.16 ರಿಂದ ಶೇ 0.09ಕ್ಕೆ ಇಳಿಮುಖವಾಗಿದೆ. ಇದೊಂದು ಸಮಾಧಾನಕರ ಸಂಗತಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎ.ಎನ್.ದೇಸಾಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 12 ಐಸಿಟಿಸಿ ಕೇಂದ್ರಗಳು, 4 ಎ.ಆರ್.ಟಿ ಕೇಂದ್ರಗಳು ಮತ್ತು 9 ಲಿಂಕ್ ಎ.ಆರ್.ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 15,793 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ ತಾಲ್ಲೂಕಿನಲ್ಲಿ ಸಾಮಾನ್ಯರಲ್ಲಿ ಶೇ 3.1 ರಿಂದ 2.48 ಮತ್ತು ಗರ್ಭಿಣಿಯರಲ್ಲಿ ಶೇ 0.13 ರಿಂದ 0.07 ಇಳಿಮುಖವಾಗಿದೆ. ಜಮಖಂಡಿ ತಾಲ್ಲೂಕಿನಲ್ಲಿ ಸಾಮಾನ್ಯ ಜನರಲ್ಲಿ ಶೇ 3.73 ರಿಂದ ಶೇ 3.35 ಹಾಗೂ ಗರ್ಭಿಣಿಯರಲ್ಲಿ ಶೇ 0.16 ರಿಂದ ಶೇ0.11, ಮುಧೋಳದಲ್ಲಿ ಸಾಮಾನ್ಯರಲ್ಲಿ ಶೇ 4.20 ರಿಂದ ಶೇ 4.14, ಗರ್ಭಿಣಿಯರಲ್ಲಿ ಶೇ 0.16 ರಿಂದ ಶೇ 0.08, ಹುನಗುಂದದಲ್ಲಿ ಸಾಮಾನ್ಯರಲ್ಲಿ ಶೇ1.15 ರಿಂದ ಶೇ0.98 ಮತ್ತು ಗರ್ಭಿಣಿಯರಲ್ಲಿ ಶೇ 0.09 ರಿಂದ ಶೇ 0.04 ಇದ್ದು, ಇಳಿಕೆ ಹಾದಿಯಲ್ಲಿ ಸಾಗಿದೆ.

ಬಾದಾಮಿ ತಾಲ್ಲೂಕಿನ ಸಾಮಾನ್ಯರಲ್ಲಿ ಶೇ 1.13 ರಿಂದ ಶೇ 1.46ಕ್ಕೆ ಏರಿಕೆ ಕಂಡುಬಂದಿದೆ. ಆದರೆ ಗರ್ಭಿಣಿಯರಲ್ಲಿ ಈ ಪ್ರಮಾಣ ಶೇ 0.11 ರಿಂದ ಶೇ 0.06 ಇಳಿಮುಖವಾಗಿದೆ.

ಬೀಳಗಿ ತಾಲೂಕಿನ ಸಾಮಾನ್ಯರಲ್ಲಿ ಶೇ 1.78 ರಿಂದ ಶೇ 2.02ಕ್ಕೆ ಏರಿಕೆಯಾಗಿದೆ. ಗರ್ಭಿಣಿಯರಲ್ಲಿ ಶೇ 0.13 ರಿಂದ ಶೇ 0.3ಕ್ಕೆ ಇಳಿದಿದೆ. ಒಟ್ಟಾರೆ ಜಿಲ್ಲಾವಾರು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಈ ವರ್ಷ ‘ನಿಮ್ಮ ಎಚ್.ಐ.ವಿ ಸ್ಥಿತಿಯನ್ನು ತಿಳಿಯಿರಿ’ ಘೋಷಣೆಯಡಿ ಏಡ್ಸ್ ದಿನ ಆಚರಿಸಲಾಗುತ್ತಿದೆ. ಎಚ್ಐವಿ ಸೋಂಕಿತರ ಜೀವನದಲ್ಲಿ, ಸಮಾಜದಲ್ಲಿ ಹಾಗೂ ವಿಶ್ವದಲ್ಲಿ ಇತರೆಡೆ ಆಗುತ್ತಿರುವ ಆಗು ಹೋಗುಗಳ ಬಗ್ಗೆ ನಾವೆಲ್ಲಾ ತಿಳಿಯಲು ಇದು ವೇದಿಕೆಯಾಗಲಿದೆ ಎಂದು ದೇಸಾಯಿ ತಿಳಿಸಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.