169 ನಕಲಿ ವೈದ್ಯರ ಕ್ಲಿನಿಕ್‌ಗೆ ಬೀಗಮುದ್ರೆ

7
4 ದಿನ ನಿರಂತರ ಕಾರ್ಯಾಚರಣೆ: ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

169 ನಕಲಿ ವೈದ್ಯರ ಕ್ಲಿನಿಕ್‌ಗೆ ಬೀಗಮುದ್ರೆ

Published:
Updated:

ಕೋಲಾರ: ‘ಜಿಲ್ಲೆಯಲ್ಲಿ 4 ದಿನಗಳಲ್ಲಿ 169 ನಕಲಿ ವೈದ್ಯರ ಕ್ಲಿನಿಕ್‌ಗಳಿಗೆ ಬೀಗಮುದ್ರೆ ಹಾಕಿದ್ದೇವೆ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ನೋಂದಾಯಿತ ವೈದ್ಯರಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ (ಕೆಪಿಎಂಇ) 2007ರ ತಿದ್ದುಪಡಿ ಆದೇಶ, 2009 ಹಾಗೂ 2018ರ ನಿಯಮದನ್ವಯ ಈಗಾಗಲೇ ಜಿಲ್ಲೆಯಲ್ಲಿ ಕ್ಲಿನಿಕ್‌ಗಳು, ವೈದ್ಯಕೀಯ ಪ್ರಯೋಗಾಲಯ ಮತ್ತು ನರ್ಸಿಂಗ್ ಹೋಂಗಳ ಮಾಲೀಕರು ನೋಂದಣಿ ಮಾಡಿಕೊಂಡು ಖಾಸಗಿಯಾಗಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ’ ಎಂದರು.

‘ಕೆಲ ನಕಲಿ ವೈದ್ಯರು ಕೆಪಿಎಂಇ ನೋಂದಣಿ ಪ್ರಮಾಣಪತ್ರ ಇಲ್ಲದೆ ಖಾಸಗಿಯಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಕಂಡುಬಂದಿದೆ. ಅನುಮತಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ನಕಲಿ ವೈದ್ಯರಿಗೆ ತಕ್ಷಣವೇ ತಮ್ಮ ಅನಧಿಕೃತ ಕ್ಲಿನಿಕ್‌ಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದೇವೆ’ ಎಂದು ತಿಳಿಸಿದರು.

ತಂಡ ರಚಿಸಲಾಗಿತ್ತು: ‘ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳ ಪತ್ತೆಗಾಗಿ ಕಂದಾಯ ಇಲಾಖೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡದ ಸದಸ್ಯರು 4 ದಿನದಲ್ಲಿ 169 ನಕಲಿ ವೈದ್ಯರ ಕ್ಲಿನಿಕ್‌ ಮುಚ್ಚಿಸಿದ್ದಾರೆ. ಇವರಲ್ಲಿ 65 ಮಂದಿ ಪಾರಂಪರಿಕವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ. ಇವರ ಪ್ರಮಾಣಪತ್ರಗಳನ್ನು ಪರಿಶೀಲನೆಗಾಗಿ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ’ ಎಂದು ವಿವರಿಸಿದರು.

‘ಶೈಕ್ಷಣಿಕ ಅರ್ಹತೆ, ನೋಂದಣಿ ಹಾಗೂ ಅನುಮತಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರಿಗೆ ಈ ಹಿಂದೆ ಹಲವು ಬಾರಿ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದೆವು. ಅಲ್ಲದೇ, ವೈದ್ಯಕೀಯ ವೃತ್ತಿ ಮುಂದುವರಿಸದಂತೆ ಆದೇಶಿಸಲಾಗಿತ್ತು. ಆದರೂ ಆ ನಕಲಿ ವೈದ್ಯರು ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ’ ಎಂದು ಮಾಹಿತಿ ನೀಡಿದರು.

ಕ್ರಿಮಿನಲ್ ಪ್ರಕರಣ: ‘ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಮತ್ತು ಪಾರಂಪರಿಕ ವೈದ್ಯರೆಂದು ಸುಳ್ಳು ಹೇಳಿಕೊಂಡು ನಕಲಿ ವೈದ್ಯರು ಸಾರ್ವಜನಿಕರಿಗೆ ವಂಚಿಸುತ್ತಿರುವುದು ಗೊತ್ತಾಗಿದೆ. ಇವರು ವೈದ್ಯಕೀಯ ವೃತ್ತಿ ಮುಂದುವರಿಸಿದರೆ ಕರ್ನಾಟಕ ಆಯುರ್ವೇದ ನ್ಯಾಚ್ಯೂರೋಪತಿ, ಸಿದ್ದ, ಯುನಾನಿ ಮತ್ತು ಯೋಗ ಪ್ರ್ಯಾಕ್ಟಿಷನರ್ಸ್ ರಿಜಿಸ್ಟ್ರೇಷನ್‌ ಕಾಯ್ದೆ–1961ರಡಿ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !