ಕೋಚಿಮುಲ್ ತ್ಯಾಜ್ಯ ನೀರು ಹರಿಸಲು ಒತ್ತಾಯ

ಕೋಲಾರ: ‘ಕೋಲಾರ– ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ (ಕೋಚಿಮುಲ್) ಹೊರ ಬರುವ ತ್ಯಾಜ್ಯ ನೀರಿನಿಂದ ಬೆಳೆಗೆ ಯಾವುದೇ ತೊಂದರೆಯಾಗಿಲ್ಲ. ಕೆಲ ವ್ಯಕ್ತಿಗಳು ಸುಳ್ಳು ಹೇಳಿಕೆ ನೀಡಿದ್ದು, ನೀರು ನಿಲ್ಲಿಸಬಾರದು’ ಎಂದು ತಾಲ್ಲೂಕಿನ ಬೆಳಗಾನಹಳ್ಳಿ ಹಾಗೂ ಸುತ್ತಮುತ್ತಲ ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.
ಕೋಚಿಮುಲ್ ತ್ಯಾಜ್ಯ ನೀರು ಸಂಸ್ಕರಿಸದೆ ಹೊರ ಬಿಡಲಾಗುತ್ತಿದೆ. ಇದರಿಂದ ನೆರ್ನಹಳ್ಳಿ, ಬೆಳಗಾನಹಳ್ಳಿಯ ಜಮೀನುಗಳಲ್ಲಿ ಬೆಳೆ ನಾಶವಾಗಿ ರೈತರಿಗೆ ಸಮಸ್ಯೆಯಾಗಿದೆ ಎಂದು ಸುದ್ದಿವಾಹಿನಿಯೊಂದು ಬೆಳಿಗ್ಗೆ ಸುದ್ದಿ ಪ್ರಸಾರ ಮಾಡಿತ್ತು.
ಹೀಗಾಗಿ ಜಮೀನುಗಳಿಗೆ ಭೇಟಿ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೋಚಿಮುಲ್ ಅಧಿಕಾರಿಗಳನ್ನು ಭೇಟಿಯಾದ ರೈತರು, ‘ಕೋಚಿಮುಲ್ನಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು ಬಳಸಿಕೊಂಡು ರಾಗಿ, ಸೀಮೆ ಹುಲ್ಲು, ಹಿಪ್ಪು ನೇರಳೆ, ಜೋಳ ಬೆಳೆಯುತ್ತಿದ್ದೇವೆ. ಈ ನೀರಿನಲ್ಲಿ ಬೆಳೆದ ಮೇವನ್ನು ಜಾನುವಾರುಗಳಿಗೆ ಹಾಕುತ್ತಿದ್ದು, ಈವರೆಗೂ ಯಾವುದೇ ತೊಂದರೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಬೆಳಗಾನಹಳ್ಳಿ, ನೆರ್ನಹಳ್ಳಿ, ಶಿವರಾಮಪುರ, ಸೀಸಂದ್ರ, ರಾಮಸಂದ್ರ ಹಾಗೂ ಮೇಡಿ ತಂಬಿಹಳ್ಳಿಯ ರೈತರು ಕೋಚಿಮುಲ್ನ ತ್ಯಾಜ್ಯ ನೀರಿನಲ್ಲೇ ಮೇವು ಬೆಳೆದು ಹಸು ಸಾಕುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಪ್ರತಿ ಮನೆಯಲ್ಲಿ ಕನಿಷ್ಠ 8 ಹಸುಗಳಿದ್ದು, ಗ್ರಾಮದ ಡೇರಿಗೆ ಹಾಲು ಹಾಕುತ್ತಿದ್ದೇವೆ. 4 ಗ್ರಾಮಗಳಿಗೆ ಸೇರಿರುವ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಜಲಚರಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದರು.
‘ಕೆಲ ಕಿಡಿಗೇಡಿಗಳು ಹೊಟ್ಟೆ ಕಿಚ್ಚಿನಿಂದ ಸುದ್ದಿ ವಾಹಿನಿಯವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ವಾಹಿನಿಯವರು ಸತ್ಯಾಸತ್ಯತೆ ಅರಿಯದೆ ಸುದ್ದಿ ಪ್ರಸಾರ ಮಾಡಿ ನಮ್ಮ ಅನ್ನದ ಮಾರ್ಗಕ್ಕೆ ಕಲ್ಲು ಹಾಕಿದ್ದಾರೆ. ಒಕ್ಕೂಟದಿಂದ ನೀರು ಹೊರ ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು.
ಮೀಟರ್ ಅಳವಡಿಸಿ: ಕೋಚಿಮುಲ್ನ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಪರಿಶೀಲಿಸಿದ ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್, ‘ಪ್ರತಿನಿತ್ಯ ಎಷ್ಟು ಪ್ರಮಾಣದ ನೀರು ಹೊರಗೆ ಹೋಗುತ್ತದೆ ಹಾಗೂ ಎಷ್ಟು ನೀರು ಬಳಸಲಾಗುತ್ತಿದೆ ಎಂಬುದನ್ನು ತಿಳಿಯಲು ಮೀಟರ್ ಅಳವಡಿಸಿ’ ಎಂದು ಕೋಚಿಮಲ್ ಅಧಿಕಾರಿಗಳಿಗೆ ಸೂಚಿಸಿದರು.
‘ತ್ಯಾಜ್ಯ ನೀರನ್ನು ಹೊರಗೆ ಬಿಡುವ ಬದಲು ಆವರಣದಲ್ಲಿನ ಗಿಡ, ಮರಗಳಿಗೆ ಬಳಸಿ. ಇದರಿಂದ ನೀರು ಖರೀದಿ ಪ್ರಮಾಣ ತಗ್ಗಿಸಬಹುದು. ಕಚೇರಿ ಆವರಣದಲ್ಲಿನ ಕೊಳವೆ ಬಾವಿಗಳ ಬಳ ಜಲ ಮರುಪೂರಣ ಘಟಕ ನಿರ್ಮಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದು ಸಲಹೆ ನೀಡಿದರು.
‘ಕೋಚಿಮುಲ್ನ ತ್ಯಾಜ್ಯ ನೀರನ್ನು ಸಮರ್ಪಕವಾಗಿ ರೈತರ ತೋಟಗಳಿಗೆ ಹರಿಸಲು ನರೇಗಾ ಯೋಜನೆಯಡಿ ಕಾಲುವೆ ನಿರ್ಮಿಸಲಾಗುವುದು. ಜತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ನರೇಗಾ ಅಡಿ ಕೂಲಿ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಭರವಸೆ ನೀಡಿದರು.
15 ದಿನದ ಗಡುವು: ‘ರೈತರು ಸ್ವಯಂಪ್ರೇರಿತರಾಗಿ ನೀರು ಹರಿಸುವಂತೆ ಕೇಳುತ್ತಿದ್ದಾರೆ. ಮುಂದೆ ತೊಂದರೆ ಎದುರಾದರೆ ಒಕ್ಕೂಟ ಜವಾಬ್ದಾರಿಯಾಗುವುದಿಲ್ಲ ಎಂದು ರೈತರಿಂದ ಮುಚ್ಚಳಿಕೆ ಬರೆಸಿಕೊಳ್ಳಿ. ನೀರು ಕೆರೆಗೆ ಹೋಗದಂತೆ ಕಾಲುವೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ತ್ಯಾಜ್ಯ ನೀರಿಗೆ ಸಂಬಂಧಿಸಿದ ನ್ಯೂನತೆಗಳನ್ನು 15 ದಿನದೊಳಗೆ ಸರಿಪಡಿಸಿಕೊಳ್ಳಿ’ ಎಂದು ವಲಯ ಪರಿಸರಾಧಿಕಾರಿ ಲಕ್ಷ್ಮಣ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್, ಕೋಚಿಮುಲ್ ವ್ಯವಸ್ಥಾಪಕ ಗೋಪಾಲ್ಮೂರ್ತಿ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.