ಬುಧವಾರ, ಮಾರ್ಚ್ 3, 2021
19 °C
ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಪ್ರಯೋಜನಗಳ ಪರಿಶೀಲನಾ ಸಭೆ

ರೈತರಿಗೆ ತೊಂದರೆ ನೀಡದಿರಿ: ಸಚಿವ ಎಸ್.ಆರ್.ಶ್ರೀನಿವಾಸ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ಎತ್ತಿನಹೊಳೆ ಯೋಜನೆಗೆ ಜಿಲ್ಲೆಯಲ್ಲಿ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಉತ್ತಮ ಪರಿಹಾರ ನೀಡಬೇಕು. ಪುನರ್ವಸತಿ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ನೀಡಬಾರದು ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಮೇಲ್ಗಾಲುವೆ ನಿರ್ಮಾಣದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಪ್ರಯೋಜನಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಮನೆ, ತೋಟ, ಹೊಲಗಳನ್ನು ಕಳೆದುಕೊಳ್ಳುವ ರೈತರಿಗೆ ಉತ್ತಮ ಪರಿಹಾರ ನೀಡಬೇಕು' ಎಂದರು.

‘ಯೋಜನೆಯ 10.47 ಕಿ.ಮೀ ಮೇಲ್ಗಾಲುವೆ ಹಾಗೂ 0.542 ಕಿ.ಮೀ ಉದ್ದದ ಮುಖ್ಯ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ತಿಳಿಸಿದರು. ರೈತರಿಗೆ ನೀಡಬೇಕಾಗಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಯೋಜನೆಗಾಗಿ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ರೈತರಿಗೆ ತಾರತಮ್ಯವಾಗದ ರೀತಿಯಲ್ಲಿ ಕ್ರಮವಹಿಸಿ ಎಂದು ಸಚಿವರು ಸೂಚಿಸಿದರು.

ಹೇಮಾವತಿ ನಾಲೆಯ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಇದಕ್ಕಾಗಿ ಅಗತ್ಯವಿರುವ ಹಣವನ್ನು ಸರ್ಕಾರದಿಂದ ಬೇಗ ಪಡೆದುಕೊಳ್ಳಿ ಎಂದು ಭೂಸ್ವಾಧೀನಾಧಿಕಾರಿಗೆ ನಿರ್ದೇಶನ ನೀಡಿದರು.

ಶಾಸಕ ಡಿ.ಸಿ.ಗೌರಿಶಂಕರ್, ‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಗೆ ರೈತರೊಂದಿಗೆ ಸಭೆ ನಡೆಸದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೊದಲು ರೈತರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಿರಿ. ಅಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಳಿಸಿ’ ಎಂದು ಆಗ್ರಹಿಸಿದರು.

ಆಗ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ‘ರೈತರೊಂದಿಗೆ ಸಭೆ ನಡೆಸಿ ಯೋಜನೆಯ ಕುರಿತಂತೆ ಚರ್ಚಿಸಿ ಅವರ ಒಪ್ಪಿಗೆ ಪಡೆಯಿರಿ’ ಎಂದು ಎತ್ತಿನ ಹೊಳೆ ಯೋಜನೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗುಬ್ಬಿ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೆರೆಗಳಲ್ಲಿ ನೀರಿಲ್ಲ. ಹೇಮಾವತಿ ನಾಲೆಯಿಂದ ನೀರು ಹರಿಸಿ’ ಎಂದು ಜಿಲ್ಲಾಧಿಕಾರಿ ಅವರಿಗೆ ಸಚಿವರು ಹಾಗೂ ಶಾಸಕರು ಕೋರಿದರು.

ಸಭೆಯಲ್ಲಿ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಹಾಗೂ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಹಾಜರಿದ್ದರು.

ನಾನು ರಾಜೀನಾಮೆ ಕೊಡ್ತೇನು; ಬ್ರದರ್ ಕೆಲಸ ಬಿಡ್ತೀಯಾ

ಗ್ರಾಮಾಂತರ ಕ್ಷೇತ್ರದಲ್ಲಿ ರೈತರಿಗೆ ಮಾಹಿತಿಯನ್ನೇ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಗೌರಿಶಂಕರ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಎತ್ತಿನಹೊಳೆ ಯೋಜನೆಯ ಅಧಿಕಾರಿಯೊಬ್ಬರು, ‘ಇಲ್ಲ ಅವರಿಗೆ ಮಾಹಿತಿ ನೀಡಿದ್ದೇವೆ’ ಎಂದರು. ಇದರಿಂದ ಮತ್ತಷ್ಟು ಕೆರಳಿದ ಶಾಸಕರು. ‘ನೀವು ರೈತರನ್ನು ಸಂಪರ್ಕಿಸಿದ್ದೀರಿ ಎಂದು ದಾಖಲೆ ತೋರಿಸಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬ್ರದರ್ ನೀವು ರೈತರನ್ನು ಸಂಪರ್ಕಿಸಿಲ್ಲ ಅವರಿಗೆ ಮಾಹಿತಿ ನೀಡಿಲ್ಲದ್ದು ಸಾಬೀತಾದರೆ ಕೆಲಸಕ್ಕೆ ರಾಜೀನಾಮೆ ಕೊಡುತ್ತಿರಾ’ ಎಂದರು ಗೌರಿಶಂಕರ್.

ಹೆಚ್ಚುವರಿ ಪರಿಹಾರ

ತನ್ನ ಜಮೀನಿನ ಶೇ 50ರಷ್ಟು ಸ್ವತ್ತನ್ನು ಯೋಜನೆಗೆ ಕಳೆದುಕೊಳ್ಳುವ ರೈತರಿಗೆ ಹೆಚ್ಚುವರಿಯಾಗಿ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. ಮನೆ, ಜಮೀನು, ಜಮೀನಿನಲ್ಲಿರುವ ಮರಗಳು ಹೀಗೆ ಎಲ್ಲದಕ್ಕೂ ಪ್ರತ್ಯೇಕವಾಗಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಮನೆಗಳನ್ನು ಕಳೆದುಕೊಳ್ಳುವವರಿಗೆ ಒಂದೇ ಕಡೆ ನಿವೇಶನ ನೀಡುತ್ತೇವೆ ಎಂದು ಹೇಳಿದೆವು. ಆದರೆ ರೈತರು ಒಪ್ಪಲಿಲ್ಲ. ಇದರ ಬದಲು ಪರಿಹಾರ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಕೆ.ಚನ್ನಬಸಪ್ಪ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು