ಏಡ್ಸ್ ಬಗ್ಗೆ ತಿಳಿವಳಿಕೆ ಕೊರತೆ

ಕೋಲಾರ: ‘ಏಡ್ಸ್ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಕೊರತೆಯಿದೆ. ರೋಗ ಹತೋಟಿ ನಿಟ್ಟಿನಲ್ಲಿ ಜಿಲ್ಲಾಡಳಿತ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.
ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ರಾಜ್ಯ ಏಡ್ಸ್ ನಿರ್ಮೂಲನೆ ಸೊಸೈಟಿ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ‘ಜನ ಅರಿವಿಲ್ಲದೆ ಮಾಡುವ ತಪ್ಪಿನಿಂದ ಮಾರಕ ಏಡ್ಸ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಜಿಲ್ಲೆಯಲ್ಲಿ 8 ಸಾವಿರ ಮಂದಿ ಎಚ್ಐವಿ ಸೋಂಕಿತರಿದ್ದು, ಈ ಪೈಕಿ 7 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್ಐವಿ ಸೋಂಕು ತಗುಲುವ ಮುನ್ನ ಜನರಿಗೆ ರೋಗದ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು’ ಎಂದು ತಿಳಿಸಿದರು.
ಆತ್ಮಸ್ಥೈರ್ಯ ತುಂಬಿ: ‘ಏಡ್ಸ್ ರೋಗ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು. ಏಡ್ಸ್ ಪ್ರಕರಣಗಳು ಹೆಚ್ಚದಂತೆ ಎಚ್ಚರ ವಹಿಸಬೇಕು. ಎಚ್ಐವಿ ಸೋಂಕಿತರನ್ನು ಪ್ರೀತಿ ವಾತ್ಸಲ್ಯದಿಂದ ಕಾಣಬೇಕು. ಅವರಿಗೆ ಪ್ರೋತ್ಸಾಹ ನೀಡಿ ಆತ್ಮಸ್ಥೈರ್ಯ ತುಂಬಬೇಕು’ ಎಂದು ಹೇಳಿದರು.
‘ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕ, ಟ್ರಕ್ಗಳು ಓಡಾಡುವ ಜಾಗಗಳಲ್ಲಿ ಹಾಗೂ ವಾಹನ ಚಾಲಕರು ತಂಗುವ ಸ್ಥಳಗಳಲ್ಲಿ ಹೆಚ್ಚಾಗಿ ಏಡ್ಸ್ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸ್ಥಳಗಳಲ್ಲಿ ಏಡ್ಸ್ ಜಾಗೃತಿ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಬೇಕು’ ಎಂದರು.
ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಪಾಲ್ಗೊಂಡಿದ್ದರು.