ಶನಿವಾರ, ಮಾರ್ಚ್ 6, 2021
19 °C
ವಿಶ್ವ ಏಡ್ಸ್ ದಿನಾಚರಣೆ

ಏಡ್ಸ್‌ ಪ್ರಕರಣ ಗಣನೀಯ ಇಳಿಕೆ: ಜಿಲ್ಲಾಧಿಕಾರಿ ಮಂಜುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರವು ಎಚ್‌ಐವಿ ಸೋಂಕು ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದರಿಂದ ಏಡ್ಸ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

ಇಲ್ಲಿ ಶನಿವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿ, ‘ದೇಶದಲ್ಲಿ 2005ರ ಸಂದರ್ಭದಲ್ಲಿ ಏಡ್ಸ್ ರೋಗದ ಪ್ರಮಾಣ ತುಂಬಾ ಹೆಚ್ಚಿತ್ತು. ಆಗ ಏಡ್ಸ್‌ ಕಾಯಿಲೆಯಿಂದ ಜಾಗತಿಕವಾಗಿ ವರ್ಷಕ್ಕೆ 19 ಲಕ್ಷ ಮಂದಿ ಮರಣ ಹೊಂದುತ್ತಿದ್ದರು’ ಎಂದರು.

‘2017ರಲ್ಲಿ ಏಡ್ಸ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಈ ಕಾಯಿಲೆಯಿಂದ ಜಾಗತಿಕವಾಗಿ ವರ್ಷಕ್ಕೆ 10 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಆರೋಗ್ಯ ಇಲಾಖೆಯು ಕೈಗೊಂಡ ಜಾಗೃತಿ ಕಾರ್ಯಕ್ರಮಗಳು ಇದಕ್ಕೆ ಪ್ರಮುಖ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರ ಎಚ್‌ಐವಿ ಸೋಂಕಿತರಿಗೆ ಹಲವು ಸೌಲಭ್ಯ ಕಲ್ಪಿಸಿದೆ. ಅವರ ಕುಟುಂಬ ಸದಸ್ಯರಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯ, ಸೋಂಕಿತರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಸೋಂಕಿತರು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆಯಬೇಕು. ಜಿಲ್ಲೆಯಲ್ಲೂ ಇತ್ತೀಚಿನ ವರ್ಷಗಳಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿದಿರುವುದು ಶ್ಲಾಘನೀಯ’ ಎಂದರು.

ಶೇ 0.79ಕ್ಕೆ ಇಳಿಕೆ: ‘ಜಿಲ್ಲೆಯಲ್ಲಿ 2009–10ರಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಶೇ 3.47ರಷ್ಟಿತ್ತು. 2018–19ನೇ ಸಾಲಿಗೆ ಶೇ 0.79ಕ್ಕೆ ಇಳಿದಿದೆ. ತಾಯಿಯಿಂದ ಮಗುವಿಗೆ ಹರಡುವ ಸೋಂಕಿನ ಪ್ರಮಾಣ ಶೇ 0.20ರಿಂದ ಶೇ 0.09ಕ್ಕೆ ಇಳಿದಿದೆ. ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆ, ರೋಗ ಶೀಘ್ರ ಪತ್ತೆ ಹಚ್ಚುವಿಕೆ, ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯುವುದು, ಸೋಂಕಿತರಿಗೆ ಸಾಮಾನ್ಯ ಜನರಂತೆ ಜೀವನ ನಡೆಸಲು ಸೂಕ್ತ ಚಿಕಿತ್ಸೆ ನೀಡುತ್ತಿರುವ ಕಾರಣ ಏಡ್ಸ್‌ ಪ್ರಕರಣಗಳ ಕಡಿಮೆಯಾಗುತ್ತಿವೆ’ ಎಂದರು.

ಅಕ್ಕಿ ವಿತರಣೆ: ‘ಜಿಲ್ಲೆಯಲ್ಲಿ 96 ಮಂದಿ ಎಚ್‌ಐವಿ ಸೋಂಕಿತರಿಗೆ ಅಂತ್ಯೋದಯ ಯೋಜನೆಯಡಿ ಅಕ್ಕಿ ವಿತರಿಸಲಾಗುತ್ತಿದೆ. ಈ ಯೋಜನೆಯಡಿ ಗುರುತಿಸಿರುವ 114 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ವಿಶೇಷ ಪಾಲನಾ ಯೋಜನೆಯಡಿ ಸೋಂಕಿತರ 365 ಮಕ್ಕಳಿಗೆ ತಿಂಗಳಿಗೆ ₹ 1,000 ನೀಡುತ್ತಿದ್ದು, ಇನ್ನೂ 245 ಜನರನ್ನು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘ಚೇತನಾ ಯೋಜನೆಯಡಿ ₹ 50 ಸಾವಿರ ಸಾಲ ಸೌಲಭ್ಯ ಮತ್ತು ₹ 25 ಸಾವಿರ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ 45 ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ಇನ್ನೂ 25 ಮಂದಿಗೆ ನೀಡಲಾಗುವುದು. ವಸತಿ ಯೋಜನೆಯಲ್ಲೂ ಎಚ್‍ಐವಿ ಸೋಂಕಿತರಿಗೆ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಅರಿವೇ ಮದ್ದು: ‘ಎಚ್‍ಐವಿ ಸೋಂಕು ಅರಿವಿಲ್ಲದೆ ಬರುತ್ತದೆ. ಈ ಭಯಂಕರ ಕಾಯಿಲೆಗೆ ಅರಿವೇ ಮದ್ದು. ಸೋಂಕಿತರಿಗೆ ನೈತಿಕ ಬೆಂಬಲ ಸೂಚಿಸಲು, ಎಚ್‍ಐವಿಯಿಂದ ಮರಣ ಹೊಂದಿದವರ ನೆನಪಿಗಾಗಿ ಮತ್ತು ಎಲ್ಲರೂ ಒಂದಾಗಿ ಏಡ್ಸ್ ವಿರುದ್ಧ ಹೋರಾಡುವಂತೆ ಪ್ರೇರೇಪಿಸಲು ಪ್ರತಿ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಗದೀಶ್ ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಸುಧಾಮಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು