ಸೋಮವಾರ, ಸೆಪ್ಟೆಂಬರ್ 21, 2020
25 °C

ರಾಷ್ಟ್ರೀಯ ಕುಸ್ತಿ: ವಿನೇಶಾ, ಸಾಕ್ಷಿಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಗೊಂಡಾ, ಉತ್ತರಪ್ರದೇಶ: ವಿನೇಶಾ ಪೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಇಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಶನಿವಾರ ನಡೆದ ಮಹಿಳೆಯರ 57 ಕೆ.ಜಿ.ವಿಭಾಗದಲ್ಲಿ ಹರಿಯಾಣದ ವಿನೇಶಾ ಪೋಗಟ್ ಅವರು ಮೊದಲ ಸುತ್ತಿನಲ್ಲಿ ಚಂಡಿಗಡದ ನೀತು ಅವರ ಎದುರು 13–2ರಿಂದ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಕರ್ನಾಟಕದ ಶ್ವೇತಾ ಬೆಳಗಟ್ಟಿ ಅವರು ವಿನೇಶಾಗೆ ಸುಲಭದ ತುತ್ತಾದರು. ಈ ಸೆಣಸಾಟದಲ್ಲಿ ವಿನೇಶಾ 8–0ಯಿಂದ ಜಯಿಸಿದರು. ಎಂಟರ ಘಟ್ಟದಲ್ಲಿ ವಿನೇಶಾ ಅವರು ಮನೀಷಾ ಅವರ ದಿಟ್ಟ ಪೈಪೋಟಿಯನ್ನು ಎದುರಿಸಿ 6–0ಯಿಂದ ಗೆದ್ದರು. ಸೆಮಿಫೈನಲ್‌ನಲ್ಲಿ ಅವರು ಕೇವಲ 76 ಸೆಕೆಂಡುಗಳಲ್ಲಿ ಹರಿಯಾಣ ಬಿ ತಂಡದ ರವಿತಾ ವಿರುದ್ಧ ಗೆದ್ದರು. ಇದರಲ್ಲಿ ಅವರು ಫೋರ್ ಪಾಯಿಂಟ್ ಥ್ರೋ ಮೂಲಕ ಗಮನ ಸೆಳೆದರು. 

ಫೈನಲ್‌ನಲ್ಲಿ ಅವರು ತಮ್ಮದೇ ರಾಜ್ಯದ ಬಬಿತಾ ಅವರ ಎದುರು ಸೆಣಸಾಡಿದರು. 10 ಪಾಯಿಂಟ್ಸ್‌ ಗಳಿಂದ ಗೆದ್ದ ವಿನೇಶಾ ಪ್ರಶಸ್ತಿ ಪಡೆದರು.

‘15 ದಿನಗಳ ಹಿಂದಷ್ಟೇ ಅಭ್ಯಾಸ ಆರಂಭಿಸಿದ್ದೆ. ಈ ವಿಜಯದಿಂದ ನನಗೆ ಆತ್ಮವಿಶ್ವಾಸ ಮರುಕಳಿಸಿದೆ. ಮುಂಬರುವ ಮಹತ್ವದ ಸ್ಪರ್ಧೆಗಳಲ್ಲಿ ಗೆಲ್ಲುವು ಛಲ ಇದೆ’ ಎಂದು ವಿನೇಶಾ ಹೇಳಿದರು.

ಸಾಕ್ಷಿ ಮಿಂಚು: 2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ಇಲ್ಲಿ 62 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದರು.  ಐದು ಬೌಟ್‌ಗಳಲ್ಲಿ ಅವರು ಒಂದೂ ಪಾಯಿಂಟ್‌ ಕಳೆದುಕೊಳ್ಳದೇ ಪ್ರಶಸ್ತಿಗೆ ಮುತ್ತಿಕ್ಕಿದರು.

ಮೊದಲ ಬೌಟ್‌ನಲ್ಲಿ ಅವರಿಗೆ ರೈಲ್ವೆಯ ಅಪೂರ್ವಾ ಅವರಿಂದ ವಾಕ್‌ ಓವರ್ ದೊರೆಯಿತು. ಎರಡನೇ ಬೌಟ್‌ನಲ್ಲಿ ಉತ್ತರ ಪ್ರದೇಶದ ಪೂಜಾ ತೋಮರ್ ವಿರುದ್ಧ ಟೆಕ್ನಿಕಲ್ ಸುಪಿರಿಯಾರಿಟಿ ಆಧಾರದಲ್ಲಿ  ಜಯಿಸಿದರು. ನಂತರದ ಬೌಟ್‌ನಲ್ಲಿ ಮಣಿಪುರದ ಲುವಾಂಗ್ ಕೊಂಬಿ ವಿರುದ್ಧ  43 ಸೆಕೆಂಡುಗಳಲ್ಲಿ ಮೇಲುಗೈ ಸಾಧಿಸಿದರು.

ಫೈನಲ್‌ನಲ್ಲಿ ಅವರು ಹರಿಯಾಣದ ಪೂನಾ ವಿರುದ್ಧ 11 –0 ಪಾಯಿಂಟ್‌ಗಳಿಂದ ಜಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು