ಭಾನುವಾರ, ಡಿಸೆಂಬರ್ 8, 2019
19 °C

ಕಸರತ್ತಿಗೆ ಗ್ಯಾಜೆಟ್‌ ಬಲ

Published:
Updated:
Deccan Herald

ಹೊಸ ಆವಿಷ್ಕಾರಗಳ ಮೂಲಕ ಜೀವನ ನಿರ್ವಹಣೆ ಮತ್ತಷ್ಟು ಸುಲಭವಾಗಿಸಬೇಕು ಎಂಬ ಬಯಕೆ ಮಾನವನಲ್ಲಿ ತುಡಿಯುತ್ತಲೇ ಇರುತ್ತದೆ. ಈ ಪ್ರಯತ್ನಗಳ ಫಲವಾಗಿಯೇ ವಿಶೇಷ ಯಂತ್ರೋಪಕರಣಗಳು ಮಾರುಕಟ್ಟೆಗೆ ಬರುತ್ತಿವೆ. ಅಂತಹ ಕೆಲವು ಉಪಕರಣಗಳು ಇಲ್ಲಿವೆ.

ಸ್ಟೇರ್ ಕ್ಲೈಂಬರ್

ದೇಹದ ತೂಕ ಹೆಚ್ಚಾಗಬಾರದು, ಫಿಟ್ ಆಗಿರಬೇಕು ಎನ್ನುವವರಿಗೆ ನಿತ್ಯ ವ್ಯಾಯಾಮ ಮಾಡುವುದು ಹವ್ಯಾಸವಾಗಿರುತ್ತದೆ. ಹಲವು ವಿಧದಲ್ಲಿ ವ್ಯಾಯಾಮ ಮಾಡಬಹುದು. ಮೆಟ್ಟಿಲು ಹತ್ತಿ ಇಳಿಯುವುದೂ ವ್ಯಾಯಾಮದ ಒಂದು ಭಾಗವೇ.

ಈ ಯೋಚನೆಯಲ್ಲೇ ರೂಪ ತಳೆದಿದೆ ಸ್ಟೇರ್ ಕ್ಲೈಂಬರ್. ಇದ್ದಲ್ಲಿಯೇ ಇದ್ದರೂ ಓಡುತ್ತಿರುವಂತೆ ನೈಜ ಅನುಭವ ನೀಡುವ ಟ್ರೆಡ್‌ಮಿಲ್‌ನಂತೆಯೇ ಈ ಉಪಕರಣವನ್ನೂ ತಯಾರಿಸಲಾಗಿದೆ. ವ್ಯತ್ಯಾಸವೇನೆಂದರೆ ಇದಕ್ಕೆ ಮೆಟ್ಟಿಲುಗಳು ಇರುತ್ತವೆ. ಇದು ಷಾಪಿಂಗ್ ಮಾಲ್‌ಗಳಲ್ಲಿ ಅಳವಡಿಸಿರುವ ಎಸ್ಕಲೇಟರ್‌ನಂತೆ ಇದೆ. ಇದರಲ್ಲಿ ಮೂರು ಮೆಟ್ಟಿಲುಗಳು ಇವೆ. ಕಂಪ್ಯೂಟರ್ ಪರದೆಯನ್ನೂ ಅಳವಡಿಸಲಾಗಿದ್ದು, ಕೆಲವು ಕಿರು ತಂತ್ರಾಂಶಗಳನ್ನೂ ಜೋಡಿಸಲಾಗಿದೆ. ಇವುಗಳ ಸಹಾಯದಿಂದ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದು. ಅವರೊಂದಿಗೆ ಮಾತನಾಡಿಸುತ್ತ, ಚರ್ಚಿಸುತ್ತ ವ್ಯಾಯಾಮ ಮಾಡಬಹುದು. 

ಸ್ಮಾರ್ಟ್ ಸಾಕ್ಸ್

ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಪಾದಗಳಲ್ಲಿ ಉರಿ, ಪಾದಗಳ ಅಲ್ಸರ್ಸ್‌ನಂತಹ ಸಮಸ್ಯೆಗಳು ಕಾಡುತ್ತಿರುತ್ತಿವೆ. ಈ ಸಮಸ್ಯೆ ದೇಹವನ್ನು ಪ್ರವೇಶಿಸಿದ ನಂತರ ಗುಣಪಡಿಸುವುದಕ್ಕಿಂತ, ಬರುವುದಕ್ಕೂ ಮೊದಲೇ ಎಚ್ಚರ ವಹಿಸುವುದು ಒಳ್ಳೆಯದು. ಹೀಗಾಗಿಯೇ ಪಾದಗಳ ಅಲ್ಸರ್ಸ್ ಸಮಸ್ಯೆಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುವ ಸಾಕ್ಸ್‌ಗಳು ಬಂದಿವೆ. ನ್ಯೂರೊ ಫ್ಯಾಬ್ರಿಕ್ ವಸ್ತುಗಳನ್ನು ಬಳಸಿ ಅಮೆರಿಕದ ಸಂಸ್ಥೆಯೊಂದು ಇದನ್ನು ತಯಾರಿಸಿದೆ.

ಈ ಸಾಕ್ಸ್‌ಗಳಲ್ಲಿ ಪುಟ್ಟ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಇವು ಆಗಾಗ್ಗೆ ಪಾದಗಳ ಉಷ್ಣಾಂಶ ಪರೀಕ್ಷಿಸುತ್ತಿರುತ್ತವೆ. ಉಷ್ಣಾಂಶ ಸ್ವಲ್ಪ ಹೆಚ್ಚಾದರೂ, ಅಲ್ಸರ್ಸ್‌ ಬರುವ ಲಕ್ಷಣಗಳು ಕಾಣಿಸಿಕೊಂಡರೂ ಕೂಡಲೇ ಮೊಬೈಲ್‌ಗೆ ಸಂದೇಶ ಬರುತ್ತದೆ. ಆದರೆ ಆರು ತಿಂಗಳಿಗೊಮ್ಮೆ ಈ ಸಾಕ್ಸ್‌ಗಳನ್ನು ಬದಲಾಯಿಸುವುದು ಅನಿವಾರ್ಯ.

ನೋಕಿಯಾ ತೂಕ!

ಸ್ಮಾರ್ಟ್ ಸಾಧನಗಳು ಎಂದ ಕೂಡಲೇ, ಟಿವಿ. ಮೊಬೈಲ್‌ಫೋನ್‌ಗಳೇ ನೆನಪಾಗುತ್ತವೆ. ಆದರೆ ನೊಕಿಯಾ ಸಂಸ್ಥೆ ತೂಕ ತಿಳಿಸುವಂತ ವಿಶೇಷ ತಕ್ಕಡಿಯನ್ನು (ವೆಯಿಟ್ ಸ್ಕೇಲ್‌) ಪರಿಚಯಿಸಿದೆ. ಇದರ ಹೆಸರು ನೊಕಿಯಾ ಬಾಡಿ ರೆಷಿಯೊ ಇದು ತೂಕ ತಿಳಿಸುವುದಕ್ಕಷ್ಟೇ ಸೀಮಿತವಾಗದೆ, ದೇಹದ ಎದೆ ಬಡಿತಿ, ನಾಡಿಮಿಡಿತ, ನೀರಿನ ಪ್ರಮಾಣವನ್ನೂ ತಿಳಿಸುತ್ತದೆ.

ಸ್ಕಲ್ಟ್ ಸ್ಕ್ಯಾನರ್‌

ದೇಹ ಫಿಟ್‌ ಆಗಿರಬೇಕು, ಕೊಬ್ಬಿನಾಂಶ ದೇಹಕ್ಕೆ ಸೇರಬಾರದು, ದೃಢಕಾಯ ಹೊಂದಿರಬೇಕು ಎಂದು ಯೋಚಿಸುವವರು ಸ್ಕಲ್ಟ್ ಸ್ಕ್ಯಾನರ್‌ ಮೇಲೆ ಕಣ್ಣು ಹಾಯಿಸಬಹುದು. ಕೈಯಲ್ಲಿ ಹಿಡಿದುಕೊಳ್ಳಬಹುದಾದ ಈ ಸಾಧನವನ್ನು ದೇಹದ ಮೇಲೆ ತಾಕಿಸಿ ಪರೀಕ್ಷಿಸಬಹುದು. ಇದರಿಂದ ಮಾಂಸಖಂಡಗಳ ಸಾಮರ್ಥ್ಯ, ದೇಹದಲ್ಲಿರುವ ಕೊಬ್ಬಿನಾಂಶ ಇತ್ಯಾದಿ ಮಾಹಿತಿ ಸಿಗುತ್ತದೆ. ಇದರ ಜತೆಗೆ ಜೋಡಿಸಿರುವ ಆ್ಯಪ್‌ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಸಂಪೂರ್ಣ ವಿಶ್ಲೇಷಣೆಯೂ ಸಿಗುತ್ತದೆ. ಫಿಟ್‌ನೆಸ್‌ ಮತ್ತು ಆರೋಗ್ಯಕ್ಕೆ ಬೇಕಾದ ಸಲಹೆಗಳೂ ಸಿಗುತ್ತವೆ.

ಸ್ಮಾರ್ಟ್‌ ಜಂಪ್‌ ರೋಪ್‌

ಜಿಗಿಯುವುರಿಂದ ಆರೋಗ್ಯಕ್ಕೆ ಹಲವು ಅನುಕೂಲಗಳು. ಹೀಗಾಗಿಯೇ ಹಲವು ಫಿಟ್‌ನೆಸ್‌ ಪ್ರಿಯರು ಜಂಪ್‌ ರೋಪ್‌ ಬಳಸಿ ನಿತ್ಯ ಕೆಲ ನಿಮಿಷ ಜಿಗಿಯುತ್ತಾರೆ. ಅವರಿಗಾಗಿಯೇ ಸ್ಮಾರ್ಟ್‌ ಜಂಪ್‌ ರೋಲ್ ತಯಾರಿಸಿದೆ. ಇದು ಎಷ್ಟು ಬಾರಿ ಜಿಗಿದಿದ್ದೀರಿ ಎಂಬ ಮಾಹಿತಿ ತಿಳಿಸುತ್ತದೆ. ಇದರಲ್ಲಿರುವ ಸೆನ್ಸರ್‌ಗಳು, ಜಿಗಿದ ನಂತರ ನಿಮ್ಮ ದೇಹದಲ್ಲಿ ಎಷ್ಟು ಕ್ಯಾಲೊರಿ ಖರ್ಚಾಗಿದೆ ಎಂಬ ಮಾಹಿತಿಯನ್ನೂ ನೀಡುತ್ತವೆ. ಇದಕ್ಕಾಗಿಯೇ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಸ್ಮಾರ್ಟ್‌ಫೋನ್ ಮೂಲಕ ಈ ಮಾಹಿತಿ ಪಡೆಯಬಹುದು.⇒v

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು