ಸೂರ್ಯ ನಮಸ್ಕಾರದ ಲಾಭಗಳು

7

ಸೂರ್ಯ ನಮಸ್ಕಾರದ ಲಾಭಗಳು

Published:
Updated:

ಜೀವನ ಕ್ರಮದಲ್ಲಿ ಯೋಗವನ್ನು ಅಳವಡಿಸಿಕೊಂಡ ನಮ್ಮ ಪೂರ್ವಜನರು ಸೂರ್ಯನಿಗೇಕೆ ನಮಸ್ಕಾರ ಮಾಡಿದರು? ಎಂಬುದರ ಬಗ್ಗೆ ತಿಳಿದುಕೊಂಡಿದ್ದೇವೆ. ಅದರ ಮುಂದುವರಿದ ಭಾಗ ಇಲ್ಲಿದೆ.

ಇಲ್ಲಿ ಬರುವ ಹಂತಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿಯೋಣ. ಸೂರ್ಯ ನಮಸ್ಕಾರ 12 ಹಂತಗಳನ್ನೊಳಗೊಂಡಿದೆ. ಒಂದು ವಿಶ್ರಾಂತ ಸ್ಥಿತಿಯ ಆಸನ ಸೇರಿದಂತೆ ಏಳು ಆಸನಗಳಿಂದ ಕೂಡಿದೆ. ಪುನರಾವರ್ತನೆಯಾಗುವ ಮೂರು ಆಸನ ಹಾಗೂ ಕೊನೆಯ ಸಮಸ್ಥಿತಿ ಸೇರಿ ಒಂದು ಸುತ್ತು ಪೂರ್ಣಗೊಳ್ಳುತ್ತದೆ.

1) ನಮಸ್ಕಾರಾಸನ

2) ಊರ್ದ್ವಾಸನ

3) ಹಸ್ತಪಾದಾಸನ

4) ಏಕ ಪಾದ ಪ್ರಸರಣಾಸನ

5) ದ್ವಿಪಾದ ಪ್ರಸರಣಾಸನ

6) ಬೂಧರಾಸನ

7)  ಸಾಷ್ಟಾಂಗ ಪ್ರಣಿಪಾದಾಸನ (ದೇಹ ಎಂಟು ಅಂಗಗಳು: ಎರಡು ಪಾದ, ಎರಡು ಮಂಡಿ, ಎರಡು ಅಂಗೈ, ಎದೆ ಮತ್ತು ಹಣೆಯನ್ನು ಭೂಮಿಗೆ ತಾಗಿಸಿ ನಮಸ್ಕರಿಸುವ ವಿಧಾನ)

8) ಭುಜಂಗಾಸನ

9) ಬೂದರಾಸನ

10) ಏಕ ಪಾದ ಪ್ರಸರಣಾಸನ

11) ಹಸ್ತಪಾದಾಸನ

12) ನಮಸ್ಕಾರಾಸನ ಅಥವಾ ಸಮಸ್ಥಿತಿ. ಈ 12 ಹಂತಗಳ ಆವೃತ್ತಿಯ ಅಳವಡಿಕೆಯಲ್ಲಿ ಆಯಾ ಕಾಲ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಕೆಲವು ಸಣ್ಣಪುಟ್ಟ ಬದಲಾವಣೆಗಳೂ ಇವೆ.

* ಎಷ್ಟು ಸುತ್ತು ಅಭ್ಯಾಸ ಮಾಡಬೇಕು ಎಂಬುದು ಅವರವರ ದೇಹ ಸಾಮರ್ಥ್ಯವನ್ನು ಅವಲಂಬಿಸಿದೆ. ಎಲ್ಲವೂ ಸರಳವಾದ ಆಸನಗಳೇ ಆಗಿವೆ. ಕಠಿಣ ಎನಿಸಲಾರವು.

* ಈ 12 ಹಂತಗಳ ಒಂದು ಸುತ್ತನ್ನು ಪೂರ್ಣಗೊಳಿಸಿದರೆ ಒಂದು ಸೂರ್ಯ ನಮಸ್ಕಾರವಾಗುತ್ತದೆ. ಪ್ರತಿ ಸುತ್ತಿನ ಕೊನೆಯಲ್ಲಿ ಸೂರ್ಯನ ಹೆಸರುಗಳನ್ನು ಪಠಣ ಮಾಡಲಾಗುತ್ತದೆ. ಇಲ್ಲಿ ಹಿಂದಿನ ಸುತ್ತಿನಲ್ಲಿ ದೇಹಕ್ಕೆ ಆದ ಆಯಾಸ ಕಡಿಮೆಯಾಗುತ್ತದೆ. ಮುಂದಿನ ಸುತ್ತಿನ ಅಭ್ಯಾಸಕ್ಕೆ ಪೂರಕವಾಗಿ ದೇಹದಲ್ಲಿ ಚೈತನ್ಯ ಲಭಿಸುತ್ತದೆ. ಈ ಉದ್ದೇಶಕ್ಕಾಗಿ ಪಠಣ ಮಾಡಲಾಗುತ್ತದೆ.

ಸೂರ್ಯ ನಮಸ್ಕಾರದ ಪ್ರಯೋಜನಗಳೇನು?

* ದೇಹ ದಂಡನೆಗೆ ಸಹಕಾರಿ.

* ಕತ್ತು, ಬೆನ್ನುಹುರಿ, ತೊಡೆ, ಮೀನುಖಂಡಗಳಲ್ಲಿನ ಅಶಕ್ತತೆ ನಿವಾರಣೆ.

* ದೇಹ ದಂಡನೆ ಮೂಲಕ ಮನಸ್ಸಿನ ಮೇಲೆ ಹತೋಟಿ.

* ದೇಹದ ಎಲ್ಲಾ ಅವಯವಗಳು ಸಡಿಲಗೊಂಡು, ನರ-ನಾಡಿಗಳು ಚೈತನ್ಯ ಪಡೆಯುತ್ತವೆ.

* ಮೆದುಳಿನ ಕಾರ್ಯ ಚುರುಕಾಗುತ್ತದೆ. ಓಜಸ್ಸು, ತೇಜಸ್ಸು ಹೆಚ್ಚುತ್ತದೆ.

* ಪಚನ ಕ್ರಿಯೆಗೆ ಸಹಕಾರಿ. ಮಲಬದ್ಧತೆ ನಿವಾರಣೆ.

* ಉದರ ದೋಷ ನಿವಾರಣೆ.

* ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ.

* ಸ್ವಪ್ನದೋಷ, ವೀರ್ಯಸ್ಖಲನ, ಸಂದಿವಾತ, ಸ್ತ್ರೀಯರಲ್ಲಿ ಸೂತಕ(ಮಾಸಿಕ ಸ್ರಾವ) ದೋಷ, ಗರ್ಭಾಶಯ ವಿಕಾರ ದೋಷಗಳನ್ನು ನಿವಾರಿಸ ಬಲ್ಲ ಶಕ್ತಿ ಸೂರ್ಯನಮಸ್ಕಾರಕ್ಕಿದೆ.

* ಸೂರ್ಯನಿಗೆ ನಮನಗಳನ್ನು ಅರ್ಪಿಸಿದ ಭಾವದಲ್ಲಿ ಮನಸ್ಸು ತಿಳಿಯಾಗಿ ಶಾಂತ ಸ್ವಭಾವ ಪಡೆಯುತ್ತದೆ. ಹತ್ತು ಹಲವು ಕಾಯಿಲೆಗಳಿಂದ ದೂರವಿರಲು ಸಹಕಾರಿ.
ಮಂತ್ರ ಪಠಣ ಅಥವಾ ಶ್ಲೋಕದ ಉಚ್ಛಾರಣೆ ಏಕೆ? ಪತಂಜಲಿಗೆ ನಮನ ಸಲ್ಲಿಸುವ ಶ್ಲೋಕ ಪಠಣವು ವಿವರಿಸುವಂತೆ ಸಂಸ್ಕೃತ ಶ್ಲೋಕಗಳ ಸ್ಪಷ್ಟವಾದ ಉಚ್ಚಾರಣೆಯಿಂದ 'ವಾಕ್ ದೋಷ' ಅಥವಾ 'ವ್ಯಾಕರಣ ದೋಷ' ತಿದ್ದಿ, ಆಂತರಿಕ ಶುದ್ಧಿ ಕ್ರಿಯೆಗೆ ಪೂರಕ ಎಂಬುದು ಪ್ರಮುಖ ಉಲ್ಲೇಖ. ಮಕ್ಕಳಿಗೆ ಭಾಷೆ ಕಲಿಕೆ ವೇಳೆ ಪೂರಕವಾದುದು.

ವಿಶ್ವದ ಚಟುವಟಿಕೆಗೆ ಮೂಲ ಕಾರಣನಾದ ಸೂರ್ಯನ ಉಪಾಸನೆ ಮಾಡುವುದು, ಆ ವೇಳೆ ಸೂರ್ಯನ ಕುರಿತಾಗಿ ಶ್ಲೋಕ ಅಥವಾ ಹೆಸರುಗಳ ಉಚ್ಚಾರಣೆ ಮಾಡುವುದಲ್ಲಿ ಯಾವುದೇ ಧರ್ಮ, ಜಾತಿ, ವಯೋಬೇಧವಿಲ್ಲ. ಇದಕ್ಕೆ ಇಲ್ಲ ಸಲ್ಲದ ಅಂತೆ ಕಂತೆಗಳನ್ನು ಹೆಣೆಯದೆ ಅದರಿಂದಾಗುವ ಪ್ರಯೋಜನ ಪಡೆಯಲು ಮುಂದಾಗಬೇಕಾದ ಅಗತ್ಯವಿದೆ.

(ಅಭ್ಯಾಸಕ್ರಮ: ಮುಂದುವರೆಯುವುದು)

* ಇದನ್ನೂ ಓದಿ...

ಯೋಗ ಶುರು ಮಾಡೋಣ...​

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!​

ಯೋಗಕ್ಕೂ ಮುನ್ನ ಮಾಡಿ ವಾರ್ಮ್‌ ಅಪ್​

ಸೂರ್ಯ ನಮಸ್ಕಾರ ಏಕೆ?​

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !