ಇತಿಹಾಸ ಬರೆಯಿತು ಬೆಂಗಳೂರು ಸಮ್ಮೇಳನ

7

ಇತಿಹಾಸ ಬರೆಯಿತು ಬೆಂಗಳೂರು ಸಮ್ಮೇಳನ

Published:
Updated:

ಇದು ಒಂದು ಇತಿಹಾಸ. ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದಾಗ ಅದು ಖಂಡಿತ ಯಶಸ್ವಿಯಾಗುವುದಿಲ್ಲ ಎಂದು ಬೆಟ್ ಕಟ್ಟಿದವರೇ ಹೆಚ್ಚು. ಬೇರೆ ಊರಿನಲ್ಲಿ ಆದರೆ, ಊರಿನ ಮರ್ಯಾದೆ ಹೋಗುತ್ತದೆ ಎಂದು ಅಂಜಿ, ಅಳುಕಿ ಸಮ್ಮೇಳನದ ಯಶಸ್ಸಿಗೆ  ದುಡಿಯುವವರ ಪಡೆಯೇ ಹುಟ್ಟಿಕೊಳ್ಳುತ್ತದೆ.ಅಲ್ಲಿನ ಮಠ ಮಾನ್ಯಗಳು ನೇತೃತ್ವ ವಹಿಸುತ್ತವೆ. ಬೆಂಗಳೂರಿನಲ್ಲಿ ಹಾಗೆ ಊರಿನ ಮರ್ಯಾದೆಗೆ ಹೆದರುವವರು ಯಾರು? ಹಾಗೆ ಹೆದರುತ್ತಿದ್ದರೆ ಚುನಾವಣೆ ನಡೆದಾಗಲೆಲ್ಲ ಕೇವಲ ಶೇ 40ರಷ್ಟು ಮಂದಿ ಮಾತ್ರ ಯಾಕೆ ಮತ ಚಲಾವಣೆ ಮಾಡುತ್ತಿದ್ದರು? ನಿಜ, ಬೆಂಗಳೂರು ಯಾರಿಗೆ  ಸೇರಿದ್ದು ಎಂದು ಕೇಳಿದರೆ ಉತ್ತರ ಕೊಡುವುದು ಕಷ್ಟ. ನಾನಾ ಕಾರಣಗಳಿಂದಾಗಿ ಇಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು. ಹೊರಗಿನ ಊರಿನಿಂದ ಬಂದವರಿಗೆ ಬೆಂಗಳೂರಿನ ಬಗ್ಗೆ ಪ್ರೀತಿ ಇರುವುದು ಕಷ್ಟ.

 

ಅಂಥವರ ಸಂಖ್ಯೆಯೇ ಹೆಚ್ಚು! ಅಂಥ ಒಂದು ಕಡೆಯಲ್ಲಿ 40 ವರ್ಷಗಳ ಹಿಂದೆ ಸಮ್ಮೇಳನ ಸಂಘಟಿಸುವುದಕ್ಕೂ ಈಗ ಸಂಘಟಿಸುವುದಕ್ಕೂ ಅಂತರ ಬಹಳ. ಅದಕ್ಕಾಗಿಯೇ, ಗದಗ ಸಮ್ಮೇಳನದಲ್ಲಿ ‘ಬೆಂಗಳೂರಿನಲ್ಲಿ ಮುಂದಿನ ಸಮ್ಮೇಳನ’ ಎಂದು ಘೋಷಿಸಿದಾಗ ಮೇಲೆ ಏರಿದ ಹುಬ್ಬುಗಳು ಮೊನ್ನೆ ಸಮ್ಮೇಳನ ಮುಗಿಯುವ ವರೆಗೂ ಕೆಳಗೆ ಇಳಿದಿರಲಿಲ್ಲ! ಫೆಬ್ರುವರಿ 4 ರಿಂದ 6 ರವರೆಗೆ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಗಿಯಿತು. ಅರೆಕೊರೆಗಳು ಎಲ್ಲ ಕಡೆಯೂ ಇದ್ದೇ ಇರುತ್ತವೆ. ಇಲ್ಲಿಯೂ ಇದ್ದುವು. ಊಟದ್ದೇ ದೊಡ್ಡ ಸಮಸ್ಯೆ.ಅದಕ್ಕೆ ಪರದಾಟ ಮುಗಿಯುವುದೇ ಇಲ್ಲ. ಅನ್ನಬ್ರಹ್ಮನ ಅಗ್ನಿದಾಹವನ್ನು ತಣಿಸುವುದು ಯಾರಿಗೂ ಕಷ್ಟವೇ. ಗೋಷ್ಠಿಗಳ ವಿಷಯ ಇನ್ನಷ್ಟು ಉತ್ತಮವಾಗಿ ಇರಬಹುದಿತ್ತು ಎಂಬ ಆಕ್ಷೇಪವೂ ನಿಜವೇ. ಗದಗಿನಲ್ಲಿ ಇದ್ದ ಕನ್ನಡ ಸರಿಯಾಗಿ ಬಾರದ ನಿರೂಪಕರ ಹಾವಳಿ ಇಲ್ಲಿಯೂ ಮುಂದುವರಿದಿತ್ತು. ಅದು ಬಿಟ್ಟರೆ ಬೆಂಗಳೂರು ಸಮ್ಮೇಳನದ ಬಗ್ಗೆ ವಿಶೇಷ ದೂರುಗಳು ಇದ್ದುವು ಎಂದು ಅನಿಸುವುದಿಲ್ಲ. ಮೊದಲ ದಿನ ಇದ್ದ ಸಂಭ್ರಮ ಕೊನೆಯ ದಿನದವರೆಗೂ ಇತ್ತು. ಒಂದು ಅಂದಾಜಿನ ಪ್ರಕಾರ ಮೂರೂ ದಿನಗಳ ಸಮ್ಮೇಳನಕ್ಕೆ ಬಂದ ಸಭಿಕರ ಸಂಖ್ಯೆ ಐದು ಲಕ್ಷ ದಾಟಿತ್ತು.

 

ಇಷ್ಟು ಮಂದಿ ಕನ್ನಡಿಗರು ಎಲ್ಲಿ ಅಡಗಿದ್ದರು? ಬೆಂಗಳೂರು ಸಮ್ಮೇಳನ ಎಂದು ಅವರೆಲ್ಲ ಬಂದರೇ? ಅಥವಾ ಬೆಂಗಳೂರಿನ ಮೂಲೆ ಮೂಲೆಯ ಕನ್ನಡಿಗರ ಮನಸ್ಸಿನಲ್ಲಿ ಒಂದೇ ಸಾರಿ ಕನ್ನಡ ಪ್ರಜ್ಞೆ ಜಾಗೃತವಾಯಿತೇ? ಎರಡೂ ನಿಜ. ಮೊದಲ ದಿನ ನಾನು, ನನ್ನ ಸಂಪಾದಕರು ಮತ್ತು ಗೆಳೆಯ ಪೊನ್ನಪ್ಪ ಸಮ್ಮೇಳನಕ್ಕೆ ಹೋಗಿದ್ದೆವು. ಅಲ್ಲಿನ ಜನ ಜಾತ್ರೆ ನೋಡಿ ಸಂಪಾದಕರು, ‘ಆಫೀಸ್ ಮರೆತು ಇಲ್ಲಿಯೇ ಇದ್ದು ಬಿಡೋಣ’ ಎಂದರು. ಮನಸ್ಸು ಹಾಗೆ ತುಂಬಿ ಬರಲು ಪುಸ್ತಕದ ಮಳಿಗೆಗಳಲ್ಲಿ, ಸಭಾಂಗಣದಲ್ಲಿ, ರಸ್ತೆಗಳಲ್ಲಿ ತುಂಬಿ ತುಳುಕುತ್ತಿದ್ದ ಜನರ ಗಿಜಿ, ಗಿಜಿ, ವಾಹನಗಳ ಸಂದಣಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಕನ್ನಡಿಗರ ಸಂಭ್ರಮ. ಎಲ್ಲವೂ ಮೈ ತುಂಬಿ ಬರುವಂತೆ ಇತ್ತು. ಅದು ನಿಜಕ್ಕೂ ಕನ್ನಡದ ಹಬ್ಬ.ಈ ಸಮ್ಮೇಳನದ ಮುಖ್ಯ ಯಶಸ್ಸು ದಾಖಲೆ ಪ್ರಮಾಣದಲ್ಲಿ ಆದ ಪುಸ್ತಕ ಮಾರಾಟದಲ್ಲಿ ಎದ್ದು ಕಂಡಿತು. ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರ ಪ್ರಕಾರ ಒಂಬತ್ತು ಕೋಟಿ ರೂಪಾಯಿಗಳ ಪುಸ್ತಕಗಳು ಮಾರಾಟ ಆಗಿವೆ. ಪರಿಷತ್ತಿನ ಪ್ರಕಟಣೆಗಳ ಮಾರಾಟವೇ ಒಂಬತ್ತು ಲಕ್ಷ ರೂಪಾಯಿ ಮೀರಿದೆ. ‘ಸಪ್ನ’ ಮಳಿಗೆಯಲ್ಲಿ 11 ಲಕ್ಷ ರೂಪಾಯಿ ಮೊತ್ತದ ಪುಸ್ತಕಗಳು ಮಾರಾಟಗೊಂಡುವು. ಹಾಗಾದರೆ, ಕನ್ನಡ ಪುಸ್ತಕಗಳಿಗೆ ಬೇಡಿಕೆ ಇಲ್ಲ ಎಂಬುದು ಸುಳ್ಳೇ? ಸುಳ್ಳು ಎನಿಸುತ್ತದೆ. ಗುಣಮಟ್ಟದ ಪುಸ್ತಕಗಳಿಗೆ, ಒಂದೇ ಕಡೆ ಹಲವು ಬಗೆಯ ಪುಸ್ತಕಗಳ ಮಾರಾಟಕ್ಕೆ ವ್ಯವಸ್ಥೆ ಇದ್ದರೆ ಹಾಗೂ ಕನ್ನಡಿಗರ ಸಹಜ ಸ್ವಭಾವಕ್ಕೆ ಪೂರಕವಾಗಿ ರಿಯಾಯಿತಿ ಇದ್ದರೆ ಪುಸ್ತಕಗಳ ಮಾರಾಟ ಆಗಿಯೇ ಆಗುತ್ತದೆ.ಶೇ 50ರ ಸೋಡಿ ಇದ್ದರೆ ‘ಮನಗಂಡ’ ವ್ಯಾಪಾರ ಆಗುತ್ತದೆ ಎಂಬುದಕ್ಕೆ ಕನ್ನಡ ವಿಶ್ವವಿದ್ಯಾಲಯದ ಮಳಿಗೆಯೇ ಸಾಕ್ಷಿಯಾಗಿತ್ತು. ಹಾಗೆ ನೋಡಿದರೆ ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಪ್ರಸಾರಾಂಗಕ್ಕಿಂತ ಒಳ್ಳೆಯ ಗುಣಮಟ್ಟದ ಪುಸ್ತಕಗಳನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ವಸ್ತು ಮತ್ತು ಉತ್ಪಾದನೆಯಲ್ಲಿ ಶ್ರೇಷ್ಠವಾಗಿದ್ದ ಅಲ್ಲಿನ ಎಲ್ಲ ಪುಸ್ತಕಗಳು ಕಡಲೆ ಪುರಿಯ ಹಾಗೆ ಮಾರಾಟವಾಗಿ ಹೋದುವು. ಆ ದೃಷ್ಟಿಯಿಂದ ಆ ವಿಶ್ವವಿದ್ಯಾಲಯ ಹಾಕಿದ ಮಾದರಿಯನ್ನು ಇತರ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳೂ ಅನುಸರಿಸಬೇಕು. ಪರಿಷತ್ತಿನ ಪ್ರಕಟಣೆಗಳಿಗೂ, ಸುವರ್ಣ ಕರ್ನಾಟಕ ವರ್ಷದಲ್ಲಿ ಪ್ರಕಟಗೊಂಡ ಸರ್ಕಾರದ ಕನ್ನಡ ಪುಸ್ತಕಗಳಿಗೂ ಇದು ಅನ್ವಯಿಸುವ ಮಾತು.

 

ಈ ಸಾರಿ ಸಮ್ಮೇಳನದಲ್ಲಿ ಆದ ಪುಸ್ತಕಗಳ ಭರ್ಜರಿ ಮಾರಾಟ ನೋಡಿ ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯದ ಎಲ್ಲ ನಗರ-ಪಟ್ಟಣಗಳಲ್ಲಿ ಇದೇ ಬಗೆಯ ಪುಸ್ತಕ ಪ್ರದರ್ಶನ ಏರ್ಪಡಿಸಿದರೆ ಓದುವ ಹಸಿವಿನ ಕನ್ನಡಿಗ ಖಂಡಿತವಾಗಿಯೂ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಾನೆ. ಅದು ಕನ್ನಡ ಪುಸ್ತಕ ಪ್ರಕಾಶನಕ್ಕೆ ನವಚೈತನ್ಯವನ್ನೂ ತುಂಬುತ್ತದೆ. ಬೆಂಗಳೂರು ಸಮ್ಮೇಳನ ಭಾವನಾತ್ಮಕವಾಗಿ ಕನ್ನಡಿಗರನ್ನು ಬಡಿದೆಬ್ಬಿಸಲು ರಾಜ್ಯಪಾಲರೂ ತಮ್ಮ ಕಾಣಿಕೆ ಸಲ್ಲಿಸಿದರು. ಅವರು ಏನು ಅಂದುಕೊಂಡಿದ್ದರೋ ಅಥವಾ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರೋಡಾ.ಎಂ.ಚಿದಾನಂದಮೂರ್ತಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಕೊಡಲು ಬಯಸಿದ್ದ ಗೌರವ ಡಾಕ್ಟರೇಟ್‌ಗೆ ಸಮ್ಮತಿ ನೀಡಲು ನಿರಾಕರಿಸಿದರು. ಆಮೇಲೆ, ‘ತಡೆ ಹಿಡಿಯಲಾಗಿತ್ತು’ ಎಂದು ತಿದ್ದಿಕೊಂಡರು. ಅದು ಏನೇ ಇದ್ದರೂ ಮೂರ್ತಿಯವರ ಪರವಾಗಿ ಇಡೀ ಕನ್ನಡ ನಾಡು ನಿಂತ ಬಗೆ ಐತಿಹಾಸಿಕವಾದುದು. ಗಾತ್ರದಲ್ಲಿ ಚಿಕ್ಕವರಾದ ಮೂರ್ತಿಯವರ ‘ಪ್ರತಿಮೆ’ ಅಗಾಧವಾಗಿ ಎದ್ದು ನಿಂತಂತೆ ಭಾಸವಾಯಿತು. ಮೂರ್ತಿಯವರ ಜತೆಗೆ ಭಿನ್ನಾಭಿಪ್ರಾಯ ಇದ್ದವರೂ ರಾಜ್ಯಪಾಲರ ತೀರ್ಮಾನವನ್ನು ಉಗ್ರವಾಗಿ ಖಂಡಿಸಿದರು. ಅಷ್ಟು ಸಾಕಿತ್ತು ಇಡೀ ಸಮ್ಮೇಳನದಲ್ಲಿ ಕನ್ನಡ ಭಾವನೆ ಉದ್ದೀಪ್ತವಾಗಲು.ಒಬ್ಬ ವ್ಯಕ್ತಿಯ ಪರವಾಗಿ ಸಮ್ಮೇಳನ ನಿರ್ಣಯವನ್ನೇ ಅಂಗೀಕರಿಸಿತು. ಅಲ್ಲಿಗೆ ಒಂದು ಇತಿಹಾಸ ಸೃಷ್ಟಿಯಾಯಿತು. ರಾಜ್ಯಪಾಲರು ಮಣಿದರು. ಚಿದಾನಂದಮೂರ್ತಿಯವರು ಮಾಡಿದ ಅವಿಶ್ರಾಂತ, ನಿಷ್ಕಳಂಕ ಕನ್ನಡ ಸೇವೆ ಅವರ ಕೈ ಹಿಡಿಯಿತು. ಬೆಂಗಳೂರು ಸಮ್ಮೇಳನ ಬರೀ ಒಕ್ಕಲಿಗರ ಸಮ್ಮೇಳನವಾಗಿತ್ತೇ? ಟಿ.ಎ.ನಾರಾಯಣಗೌಡರಿಗೆ ಮೆರವಣಿಗೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಬೇಕಿತ್ತೇ? ಹೀಗಾದರೆ ಒಂದು ದಿನ ನಾರಾಯಣಗೌಡರು ಪರಿಷತ್ತಿನ ಅಧ್ಯಕ್ಷರೇ ಆಗಿ ಬಿಡಬಹುದೇ? ಇವು ಈ ಸಮ್ಮೇಳನ ಎತ್ತಿದ ಕೆಲವು ಪ್ರಶ್ನೆಗಳು. ಇದಕ್ಕೆ ಪರಿಷತ್ತು ಸಕಾರಣ ಉತ್ತರಗಳನ್ನೂ ಕೊಡಬಹುದು. ಅದು ಪ್ರಶ್ನೆ ಎತ್ತಿದವರಿಗೆ ಸಮಾಧಾನ ತರಬಹುದು. ತರದೆಯೂ ಇರಬಹುದು.ರಾಜಕಾರಣಿಗಳನ್ನು ಸಮ್ಮೇಳನದಿಂದ ದೂರ ಇಡಬೇಕೇ ಇಡಬಾರದೇ ಎಂಬ ಪ್ರಶ್ನೆಯ ಹಾಗೆಯೇ ಇದು ಕೂಡ. ಈ ಸಾರಿಯ ಸಮ್ಮೇಳನದ ಅಧ್ಯಕ್ಷರು, ‘ರಾಜಕಾರಣಿಗಳನ್ನು ಏಕೆ ದೂರ ಇಡಬೇಕು’ ಎಂಬ ಪ್ರಶ್ನೆ ಕೇಳಿದ್ದಾರೆ. ಬಹುಶಃ ಅದು ನಿಜ ಅನಿಸುತ್ತದೆ. ಈ ಪ್ರಶ್ನೆ ಪ್ರತಿ ಸಾರಿ ಸಮ್ಮೇಳನ ನಡೆದಾಗಲೂ ಎದ್ದಿದೆ. ಆದರೆ, ಕರ್ನಾಟಕದಲ್ಲಿ ರಾಜಕಾರಣಿಗಳನ್ನು ದೂರವಿಟ್ಟು ಸಮ್ಮೇಳನ ಮಾಡುವುದು ಸದ್ಯೋಭವಿಷ್ಯದಲ್ಲಿ ಸಾಧ್ಯವಿಲ್ಲ ಅನಿಸುತ್ತದೆ. ಆದರೆ, ಸಮ್ಮೇಳನದ ಅಧ್ಯಕ್ಷರು ಇದಕ್ಕಿಂತ ದೊಡ್ಡ ಕಾಳಜಿಯೊಂದನ್ನು ವ್ಯಕ್ತಪಡಿಸಿದ್ದಾರೆ. ಅದು ಪರಿಷತ್ತಿನ ಅಧ್ಯಕ್ಷತೆಯ ಚುನಾವಣೆಗೆ ಸಂಬಂಧಪಟ್ಟುದು.ಈಗ ಪರಿಷತ್ತಿನಲ್ಲಿ 1.20 ಲಕ್ಷ ಸದಸ್ಯರು ಇದ್ದಾರೆ. ಚುನಾವಣೆ ನಡೆಯುವಾಗ ಅವರಿಗೆಲ್ಲ ಎರಡು ಸಾರಿ ಪತ್ರ ಬರೆದರೂ ಕನಿಷ್ಠ ಹತ್ತು ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಇಷ್ಟು ಖರ್ಚು ಮಾಡಲು ಸಿದ್ಧರಾಗಿ ಯಾರಾದರೂ ಚುನಾವಣೆಗೆ ನಿಲ್ಲಲು ಆಗುತ್ತದೆಯೇ? ಹಣವಂತರು ಮಾತ್ರ ಚುನಾವಣೆಗೆ ನಿಂತರೆ ಪರಿಷತ್ತಿನ ಸಾಹಿತ್ಯ ಸ್ವರೂಪಕ್ಕೆ ಧಕ್ಕೆ ಆಗುತ್ತದೆಯೇ? ಅಥವಾ ಪರಿಷತ್ತಿನ ಮತದಾರರು ಅಭ್ಯರ್ಥಿಯ ಅರ್ಹತೆಯನ್ನು ಮಾತ್ರ ನೋಡಿ, ಪತ್ರ ಬರೆಯಲಿ ಬಿಡಲಿ. ಮತ ಹಾಕುವುದು ಒಳ್ಳೆಯದೇ? ಈಗಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರ ಪ್ರಕಾರ, ‘ಪರಿಷತ್ತಿನ ಮತದಾರರಲ್ಲಿ ಅಂಥ ಜಾಗೃತಿ ಇದೆ.ಯಾರು ಯಾರೋ ಅಧ್ಯಕ್ಷರು ಆಗಲು ಇಲ್ಲಿ ಸಾಧ್ಯವಿಲ್ಲ.’ ಯಾರು ಯಾರೋ ಅಧ್ಯಕ್ಷರಾಗಿ ಬಿಡಬಹುದು ಎಂಬ ಭಯ ಇರುವವರಿಗೆ ಇದು ಒಂದು ಅಭಯ! ಪರಿಷತ್ತಿನ ಅಧ್ಯಕ್ಷರ ಪಟ್ಟಿಯನ್ನು ನೋಡಿದರೆ ಈ ಅಭಯಕ್ಕೆ ಆಧಾರ ಇದೆ ಎಂದೇನೂ ಅನಿಸುವುದಿಲ್ಲ. ಚುನಾವಣೆ ಎಂಬುದು ಒಂದು ನಡೆಯುವಲ್ಲಿ ಇಂಥ ಆಭಾಸ, ಅಪಭೃಂಶಗಳಿಗೆ ಅವಕಾಶ ಇದ್ದೇ ಇರುತ್ತದೆ ಅನಿಸುತ್ತದೆ. ಗದಗ ಸಮ್ಮೇಳನದಲ್ಲಿ ಅಧ್ಯಕ್ಷರಿಗೆ ದೊಡ್ಡ ಮೊತ್ತದ ಹಮ್ಮಿಣಿ ಸಲ್ಲಿಸಿದ ನಂತರ ಸೃಷ್ಟಿಯಾದ ಆಭಾಸ ಇಲ್ಲಿ ಆಗಲಿಲ್ಲ ಎಂಬುದೊಂದೇ ಸಮಾಧಾನ. ಪರಿಷತ್ತಿನ ಅಧ್ಯಕ್ಷರು ತಕ್ಷಣ ಮುತುವರ್ಜಿ ವಹಿಸಿದ್ದೂ ಇದಕ್ಕೆ ಕಾರಣವಿರಬೇಕು.ಆದರೆ, ಮುಖ್ಯಮಂತ್ರಿಗಳು ಉದ್ಘಾಟನಾ ಸಮಾರಂಭದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಿಸುವ ಪ್ರಕಟಣೆ ಮಾಡಿದ್ದು ಕೊಂಚ ಅತ್ಯುತ್ಸಾಹದ ಮಾತು. ಅದು ಆಗುವ ಹೋಗುವ ಕೆಲಸವಲ್ಲವಾದ್ದರಿಂದ ಭುವನೇಶ್ವರಿ ನೆಮ್ಮದಿಯಿಂದ ಇರಬಹುದು! ಕನ್ನಡದ ಹೆಸರಾಂತ ಕವಿಗಳ, ಲೇಖಕರ ಕೃತಿಗಳನ್ನು ಕಡಿಮೆ ಬೆಲೆಗೆ ಕನ್ನಡಿಗರ ಮನೆ ಮನೆಗೆ ತಲುಪಿಸಿ ಅವರ ಮನಸ್ಸಿನಲ್ಲಿ ತಾಯಿ ಭುವನೇಶ್ವರಿಯ ‘ಪ್ರತಿಮೆ’ ನೆಲೆಗೊಳಿಸುವಂತೆ ಮಾಡುವುದೇ ಇದಕ್ಕಿಂತ ದೊಡ್ಡ ಕೆಲಸ. 25 ಕೋಟಿ ರೂಪಾಯಿ ವೆಚ್ಚದಲ್ಲಿ ಆ ಕೆಲಸವನ್ನು ಸರ್ಕಾರ ಖಂಡಿತ ಮಾಡಬಹುದು.ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ ವೇಳೆಯಲ್ಲಿ ವಸ್ತು ಮತ್ತು ಗುಣಮಟ್ಟದ ದೃಷ್ಟಿಯಿಂದ ಉತ್ತಮ ಪುಸ್ತಕಗಳು ಕನ್ನಡಿಗರಿಗೆ ಸಿಕ್ಕಾವು ಎಂಬ ಆಸೆ ಅತಿಯಾದುದೇನೂ ಆಗಿರಲಿಕ್ಕಿಲ್ಲ. ಬೆಂಗಳೂರಿನ ಸಮ್ಮೇಳನ ಕನ್ನಡಿಗರಲ್ಲಿ ಈಗ ಮೂಡಿಸಿರುವ ಜಾಗೃತಿ, ಅಭಿಮಾನ ಒಂದು ತಾತ್ಕಾಲಿಕ ಗುಳ್ಳೆ ಎಂದು ಅನಿಸಬಾರದು. ಹಾಗೆ ಅನಿಸಬಾರದು ಎನ್ನುವುದಾದರೆ ಮತ್ತೆ ಮತ್ತೆ ರಾಜಧಾನಿಯಲ್ಲಿ ಸಮ್ಮೇಳನ ನಡೆಯುವಂತೆ ಆಗಬೇಕು...ಗಂಗಾವತಿಯಲ್ಲಿ 79ನೇ ಸಮ್ಮೇಳನ ನಡೆಸುವುದಕ್ಕಿಂತ ಮುಂಚೆಯೇ ಈಗಿನ ಪದಾಧಿಕಾರಿಗಳ ಅಧಿಕಾರ ಅವಧಿ ಮುಗಿಯುತ್ತದೆ. ಆರು ತಿಂಗಳು ಅಧಿಕಾರ ಮುಂದುವರಿಸಿಕೊಂಡು ಮುಂದಿನ ಸಮ್ಮೇಳನ ನಡೆಸಲು ಅವರ ಮೇಲೆ ಒತ್ತಡ ಇದೆ. ಅವರು ಏನು ಮಾಡುತ್ತಾರೆ ತಿಳಿಯದು. ಆದರೆ, ಬೆಂಗಳೂರು ಸಮ್ಮೇಳನದ ಯಶಸ್ಸಿಗಾಗಿ ದುಡಿದ ನಲ್ಲೂರು ಪ್ರಸಾದ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry