ಮೋದಿಗೆ ಟ್ವೀಟ್ ಮಾಡಿ ಸಾಲ ಪಡೆಯಿರಿ

7
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರಿಂದ ಕಾಮಗಾರಿಗಳ ವೀಕ್ಷಣೆ

ಮೋದಿಗೆ ಟ್ವೀಟ್ ಮಾಡಿ ಸಾಲ ಪಡೆಯಿರಿ

Published:
Updated:
Deccan Herald

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಿಂಚಿನ ಸಂಚಾರ ನಡೆಸಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇಲಾಖೆಯ ಪ್ರಗತಿಯ ಕಾಮಗಾರಿಗಳನ್ನು ಪರಿಶೀಲಿಸಿದರು.

ಮೊದಲಿಗೆ ಮೈದಾಳ ಗ್ರಾಮ ಪಂಚಾಯಿತಿ ಕಚೇರಿಗೆ ಬಂದ ಸಚಿವರನ್ನು ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು. ಪಂಚಾಯಿತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಪಿಡಿಒ, ಡಾಟಾ ಆಪರೇಟರ್, ಬಿಲ್‌ಕಲೆಕ್ಟರ್‌ ಅವರಿಂದ ಮಾಹಿತಿ ಕೇಳಿದರು.

ಪಹಣಿಗಳನ್ನು ಪಂಚಾಯಿತಿಯಲ್ಲಿ ವಿತರಿಸುತ್ತಿದ್ದೀರಾ, ಆಧಾರ್ ಕಾರ್ಡ್ ತಿದ್ದುಪಡಿ ತಿಂಗಳಿಗೆ ಕನಿಷ್ಠ ಎಷ್ಟು ಬರುತ್ತವೆ, ಸಾರ್ವಜನಿಕರಿಗೆ ನೀವು ಯಾವ ಯಾವ ಸೇವೆ ನೀಡುತ್ತಿದ್ದೀರಿ. ನಿಮ್ಮಿಂದ ಸಾರ್ವಜನಿಕರು ಹೆಚ್ಚು ಅಪೇಕ್ಷಿಸಿರುವ ಕೆಲಸಗಳು ಏನು, ನರೇಗಾ ಕಾಮಗಾರಿಗಳು ಹೇಗೆ ನಡೆದಿವೆ...ಹೀಗೆ ಒಂದರ ಹಿಂದೆ ಒಂದು ಪ್ರಶ್ನೆಗಳನ್ನು ಕೇಳಿದರು. ಸರಿಯಾದ ಉತ್ತರ ಬಾರದಿದ್ದಾಗ ಅಸಮಾಧಾನ ವ್ಯಕ್ತಪಡಿಸಿದರು.

‘ವಾರ್ಷಿಕ ಒಟ್ಟು 32 ಲಕ್ಷ ತೆರಿಗೆ ಪಂಚಾಯಿತಿಗೆ ಬರುತ್ತದೆ. ಈಗಾಗಲೇ ₹ 16 ಲಕ್ಷ ವಸೂಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅನಧಿಕೃತ ಬಡಾವಣೆಗಳ ಬಗ್ಗೆ ಮಾಹಿತಿ ಕೇಳಿದ ಸಚಿವರು, ‘ಅರ್ಥ ಕಿಲೋಮೀಟರ್‌ಗೆ ಒಂದೊಂದು ಮನೆಗಳನ್ನು ನಿರ್ಮಿಸಿಕೊಂಡರೆ ಜನರಿಗೆ ಸೌಲಭ್ಯಗಳನ್ನು ಒದಗಿಸುವುದು ಕಷ್ಟ. ಇದನ್ನು ಜನರೂ ಮನಗಾಣಬೇಕು’ ಎಂದರು.

ಜನರು ಸಮಸ್ಯೆಗಳ ಪಟ್ಟಿಯನ್ನು ಮುಂದಿಡುವಾಗ, ‘ಸರ್ ನಮಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸರಿಯಾಗಿ ಸಾಲವೇ ದೊರೆಯುತ್ತಿಲ್ಲ’ ಎಂದರು. ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಟ್ವೀಟ್ ಮಾಡಿ. ಇಲ್ಲ ಫೇಸ್‌ಬುಕ್‌ನಲ್ಲಿ ಬರೆದು ಹಾಕಿ. ಗಮನ ಹರಿಸಬಹುದು’ ಎಂದು ಸಚಿವರು ಸಲಹೆ ನೀಡಿದರು.

ಅಲ್ಲಿಂದ ಅಯ್ಯನಪಾಳ್ಯಕ್ಕೆ ಸಾಗುವಾಗ ಬಸವಯ್ಯ ಅವರ ದನದ ಕೊಟ್ಟಿಗೆ ವೀಕ್ಷಿಸಿದರು. ಗಾಳಿ ಬೆಳಕು ಬರುವ ರೀತಿ ಮತ್ತು ಕಡಿಮೆ ವೆಚ್ಚದಲ್ಲಿ ಕೊಟ್ಟಿಗೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ‘ನಾವೂ ಹಸುಗಳನ್ನು ಕಟ್ಟಿದ್ದೀವಿ. ಆ ಅನುಭವದ ಕಾರಣಕ್ಕೆ ಹೇಳುತ್ತಿದ್ದೇನೆ’ ಎಂದರು ಸಚಿವರು.

ಅಯ್ಯನಪಾಳ್ಯದ ಪುಟ್ಟರಂಗಯ್ಯ ಅವರ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆಯನ್ನು ವೀಕ್ಷಿಸಿದರು. ರೇಷ್ಮೆ ಇಲಾಖೆ ಜಿಲ್ಲೆಯಲ್ಲಿ ಎಷ್ಟು ರೈತರಿಗೆ ಸಹಾಯ ಧನ ನೀಡಿದೆ. ರೇಷ್ಮೆ ಬೆಳೆಯಲು ಇರುವ ಅನುಕೂಲಗಳು ಏನು ಎಂದು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪುಟ್ಟರಂಗಯ್ಯ ಅವರ ಪುತ್ರ ತಾವು ಕೈಗೊಂಡ ಹಿಪ್ಪು ನೇರಳೆ ವ್ಯವಸಾಯದ ಬಗ್ಗೆ ವಿವರಿಸಿದರು.

ಅಲ್ಲಿಂದ ಬೆಳ್ಳಾವಿ ಸಮೀಪದ ತಿಮ್ಮಲಾಪುರಕ್ಕೆ ಬಂದ ಸಚಿವರು ಅಲ್ಲಿ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದರು. ನಿತ್ಯ ಎಷ್ಟು ಲೀಟರ್ ನೀರು ಶೇಖರವಾಗುತ್ತದೆ ಎಷ್ಟು ಶುದ್ಧೀಕರಣವಾಗುತ್ತದೆ ಎಂದು ಮಾಹಿತಿ ಪಡೆದರು. ನೀರಿಗಾಗಿ ಬೆಳ್ಳಾವಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರು ಬೆಳ್ಳಾವಿಯ ವ್ಯಾಪ್ತಿಯ ಎಂಟು ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಬೇಕು ಎಂದು ಮನವಿ ಮಾಡಿದರು.

ಟಿ.ಗೊಲ್ಲಹಳ್ಳಿಗೆ ಶಾಲೆಯ ಆವರಣಕ್ಕೆ ಬಂದ ಸಚಿವರು, ನಿರ್ಮಾಣ ಹಂತದ ಕಾಂಪೌಂಡ್ ವೀಕ್ಷಿಸಿದರು. ಕಾಂಪೌಂಡ್ ಅನ್ನು ಅರ್ಧ ಮಾತ್ರ ಕಟ್ಟಲಾಗಿದೆ. ಏಕೆ ಪೂರ್ಣವಾಗಿ ಕಾಂಪೌಂಡ್ ನಿರ್ಮಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಸಾಧ್ಯವಾಗದಿದ್ದಾಗ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಶಾಲೆ ಆವರಣದಲ್ಲಿ ಗಿಡಗಳನ್ನು ನೆಡಿಸಿ ಎಂದು ಪಿಡಿಒಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ಪ್ರಭುಗಳನ್ನು ಏನು ಕೇಳಲು ಸಾಧ್ಯವಿಲ್ಲ!
ಸಚಿವರು ಭೇಟಿ ನೀಡಿದ ಬಹುತೇಕ ಕಡೆಗಳಲ್ಲಿ ಜನರು ಹಾಗೂ ಪಂಚಾಯಿತಿ ಸದಸ್ಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ‘ಕೆಲಸ ಮಾಡಿಕೊಡುವುದಿಲ್ಲ. ಒಂದು ಖಾತೆ ಮಾಡಲು ಎರಡು ವರ್ಷ ತೆಗೆದುಕೊಳ್ಳುವರು. ಅಧಿಕಾರಿಗಳು ನಮ್ಮ ಬಳಿ ಬರುವುದೇ ಇಲ್ಲ. ಯೋಜನೆಗಳ ಬಗ್ಗೆ ಮಾಹಿತಿಯನ್ನೂ ನೀಡುವುದಿಲ್ಲ’ ಎಂದು ದೂರುಗಳ ಸುರಿಮಳೆಯನ್ನೇ ಸುರಿಸಿದರು.

ಆಗ ಪಂಚಾಯಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ಎಲ್ಲವನ್ನೂ ಅಧಿಕಾರಿಗಳ ಮೇಲೆ ಹಾಕಬೇಡಿ. ನಿಮ್ಮನ್ನು ಆಯ್ಕೆ ಮಾಡಿರುವುದು ಅಧಿಕಾರಿಗಳು ಮತ್ತು ಜನರ ನಡುವೆ ಸೇತುವೆಯ ರೀತಿ ಕೆಲಸ ಮಾಡಲು’ ಎಂದರು. ನಂತರ ‘ಜನರನ್ನು ಏನೂ ಕೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಿಕೊಡಬೇಕು ಎನ್ನುವರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು’ ಎಂದು ವಿಡಂಬನೆಯ ರೀತಿ ನುಡಿದರು.

ಎಲ್ಲರದ್ದೂ ನೆಪ ನೆಪ...
ಟಿ.ಗೊಲ್ಲರಹಳ್ಳಿಯಲ್ಲಿ ಶಾಲೆ ಆವರಣದಲ್ಲಿ ಗಿಡ ನೆಡಬೇಕಿತ್ತು. ನಿಮಗೂ ಅನುಕೂಲ ಆಗುತ್ತಿತ್ತು ಎಂದು ಸಚಿವರು ಶಾಲೆ ಆವರಣದಲ್ಲಿದ್ದ ಅಂಗನವಾಡಿ ಶಿಕ್ಷಕಿಯನ್ನು ಪ್ರಶ್ನಿಸಿದರು. ಶಿಕ್ಷಕಿ, ‘ನಾವು ನೆಟ್ಟಿದ್ದೆವು. ಕಾಂಪೌಂಡ್ ಇಲ್ಲ’ ಎಂದು ಸ್ಪಷ್ಟಪಡಿಸಲು ಮುಂದಾದರು, ಆಗ, ‘ಎಲ್ಲರೂ ಏನೇ ಕೇಳಿದರು ಒಂದೊಂದು ನೆಪ ಹೇಳ್ತೀರಿ. ಬಿಡಿ ಹೋಗಲಿ’ ಎಂದು ಅಲ್ಲಿಂದ ಹೊರಟರು. ಈ ಹಿಂದಿನ ಕೆಲವು ಭೇಟಿಗಳ ಸಮಯದಲ್ಲಿ ಅಧಿಕಾರಿಗಳು ಉತ್ತರಿಸುವಾಗ ಕೆಲವು ಕಾರಣಗಳನ್ನು ನೀಡುತ್ತಿದ್ದರು. ಅದಕ್ಕೆ ಸಚಿವರು ‘ಸರಿಯಾದ ಉತ್ತರ ಇಲ್ಲ ಅಂದರೆ ಎಲ್ಲದಕ್ಕೂ ಒಂದೊಂದು ನೆಪ ಹೇಳಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !