ಭಾನುವಾರ, ಡಿಸೆಂಬರ್ 15, 2019
26 °C

‘ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಯತ್ನ’: ಸಿದ್ದರಾಮಯ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘104 ಶಾಸಕರ ಬಲದಲ್ಲಿ ಸರ್ಕಾರ ರಚಿಸಿ, ವಿಫಲವಾದ ಬಿಜೆಪಿ ಈಗ ಮತ್ತೆ ಹಣ ಹೂಡಿ ಈಗಿನ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ’ ಎಂದು ಕಾಂಗ್ರೆಸ್– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದರು.

ಸೋಮವಾರ ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಈಗ ಶಾಸಕರಿಗೆ ₹ 25 ಕೋಟಿ ಆಮಿಷ ಒಡ್ಡುತ್ತಿರುವ ಮಾಹಿತಿ ಇದೆ. ಆಪರೇಷನ್‌ ಕಮಲ್ಲಕೆ ಅಷ್ಟೊಂದು ಹಣ ಎಲ್ಲಿಂದು ಬರುತ್ತಿದೆ? ಯಾರ ಹಣ ಅದು? ಭ್ರಷ್ಟಾಚಾರದ ಹಣವಲ್ಲವೇ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಅಧಿಕಾರ ಹಿಡಿಯಲು ಯತ್ನಿಸಿ ಒಮ್ಮೆ ವಿಫಲರಾಗಿದ್ದಾರೆ. ಅವರಿಗೆ ಬಹುಮತ ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಸರ್ಕಾರ ಬೀಳಿಸ್ತೀವಿ, ಆಪರೇಷನ್‌ ಕಮಲ ಮಾಡ್ತೀವಿ ಎನ್ನುವುದಕ್ಕೆ ಅವರಿಗೆ ನಾಚಿಕೆ ಆಗಬೇಕು. ಅವರು ಎಷ್ಟೇ ಪ್ರಯತ್ನಪಟ್ಟರೂ ಈ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ’ ಎಂದರು.

ಬಿಜೆಪಿ ಶಾಸಕ ಶ್ರೀರಾಮುಲು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಆರೋಪ ಕುರಿತು ಕೇಳಿದಾಗ, ‘ಯಾರ್ರೀ ಅವರು? ಯಾವುದೋ ಪಕ್ಷದವರು ನಮ್ಮ ಶಾಸಕರಿಗೆ ದುಡ್ಡು ಕೊಡುವುದಕ್ಕೆ ನಾಚಿಕೆ ಆಗಲ್ವಾ ಅವರಿಗೆ’ ಎಂದು ಮರುಪ್ರಶ್ನೆ ಕೇಳಿದರು.

ಅಸಮಾಧಾನ ಇಲ್ಲ: ಕಾಂಗ್ರೆಸ್‌ ಶಾಸಕರಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಶಾಸಕರಲ್ಲಿ ಒಗ್ಗಟ್ಟಿದೆ. ಸತೀಶ್‌ ಜಾರಕಿಹೊಳಿ ಶಾಸಕರನ್ನು ಕರೆದುಕೊಂಡು ರೆಸಾರ್ಟ್‌ಗೆ ಹೋಗುತ್ತಾರೆ ಎಂಬುದು ಸುಳ್ಳು. ಕಾಂಗ್ರೆಸ್‌ನವರು ರೆಸಾರ್ಟ್‌ಗೆ ಹೋಗಲೇಬಾರದಾ? ಬಿಜೆಪಿಯವರು ಅಲ್ಲಿದ್ದಾರೆ ಎಂದ ಮಾತ್ರಕ್ಕೆ ಕಾಂಗ್ರೆಸ್‌ನವರು ಹೋಗಲೇಬಾರದಾ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಾಬರಿ ಮಸೀದಿ ಕಟ್ಟುತ್ತೇವೆ ಎಂಬ ಭರವಸೆ ನೀಡಿ ಕಾಂಗ್ರೆಸ್ ಚುನಾವಣೆ ಎದುರಿಸಲಿ’ ಎಂಬ ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈಶ್ವರಪ್ಪಗೆ ಮೆದುಳಿಲ್ಲ. ಅವರೊಬ್ಬ ‘ಬ್ರೈನ್‌ಲೆಸ್‌ ಮ್ಯಾನ್‌’, ಮಹಾಪೆದ್ದ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು