ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹ

7

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹ

Published:
Updated:
Deccan Herald

ಕೋಲಾರ: ‘ಇಡೀ ಜಗತ್ತಿಗೆ ಸಂಸ್ಕೃತಿ ಮತ್ತು ಸಂಸ್ಕಾರ ತಿಳಿಸಿಕೊಟ್ಟ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೀನಮೇಷ ಬೇಡ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಬಜರಂಗದಳ ಮುಖಂಡರು ಆಗ್ರಹಿಸಿದರು.

ಕಡೆ ಕಾರ್ತಿಕ ಸೋಮವಾರ ಅಂಗವಾಗಿ ಇಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬೃಹತ್ ಶ್ರೀರಾಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಜರಂಗದಳ ಮುಖಂಡರು, ‘ಭಾರತಕ್ಕೆ ಮತ್ತು ವಿಶ್ವಕ್ಕೆ ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸಿಕೊಡುವ ತಾಕತ್ತು ಶ್ರೀರಾಮನ ಆಶೀರ್ವಾದದಿಂದ ಬಂದಿದೆ’ ಎಂದರು.

‘ನ್ಯಾಯಾಲಯದ ಬಗ್ಗೆ ಗೌರವವಿದೆ. ಆದರೆ, ರಾಮಮಂದಿರ ವಿವಾದ ಬೇಗನೆ ಇತ್ಯರ್ಥಗೊಳಿಸದೆ ಮುಂದೂಡುವುದು ಸರಿಯಲ್ಲ. ಈಗಾಗಲೇ ರಾಮಮಂದಿರ ನಿರ್ಮಾಣ ತಡವಾಗಿದೆ. ಇನ್ನು ತಡ ಮಾಡಿದರೆ ಜನ ಸಹಿಸುವುದಿಲ್ಲ, ತಾಳ್ಮೆಗೂ ಮಿತಿ ಇದೆ. ಜನ ಬೀದಿಗಿಳಿಯುವ ಮುನ್ನ ಕೇಂದ್ರ ಸರ್ಕಾರ ಮಂದಿರ ನಿರ್ಮಾಣಕ್ಕೆ ಇರುವ ಕಾನೂನಾತ್ಮಕ ತೊಡಕು ನಿವಾರಿಸಬೇಕು’ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಬಾಬು ಒತ್ತಾಯಿಸಿದರು.

ನಿರ್ಮಾಣಕ್ಕೆ ಬದ್ಧ: ‘ರಾಮ ಮಂದಿರ ನಿರ್ಮಾಣಕ್ಕೆ ಸಂಘಟನೆ ಬದ್ಧವಾಗಿದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಧಕ್ಕೆಯಾದರೆ ಸಹಿಸುವುದಿಲ್ಲ. ಭಾರತ ಮಾತೆಯ ಮಡಿಲಲ್ಲಿರುವ ನಾವು ಆ ಮಾತೆಯ ಘನತೆಗೆ ಕುತ್ತು ತರುವುದಿಲ್ಲ. ಈ ರಾಷ್ಟ್ರ, ಗಂಗೆ, ಭೂಮಿ ಎಲ್ಲವನ್ನೂ ಮಾತೆಯೆಂದು ಕರೆಯುವ ಸಂಸ್ಕೃತಿ ದೇಶದಲ್ಲಿ ಮಾತ್ರ ಇದೆ’ ಎಂದು ಹೇಳಿದರು.

‘2 ವರ್ಷದ ಹೆಣ್ಣು ಮಗುವನ್ನೂ ಅಮ್ಮ ಎಂದು ಕರೆಯುತ್ತೇವೆ. ಇಂತಹ ಪವಿತ್ರ ಭೂಮಿ ವಿಶ್ವದಲ್ಲಿ ಬೇರೆಲ್ಲೂ ಇಲ್ಲ. ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಬಲಿಯಾಗದೆ ಧರ್ಮ ರಕ್ಷಣೆಗೆ ಮುಂದಾಗಬೇಕು. ಜಾತಿಯತೆ ನಾಶ ಮಾಡಬೇಕು, ಹಿಂದೂಗಳೆಲ್ಲಾ ಒಂದು ಎಂಬ ಭಾವನೆ ಬಲಗೊಳ್ಳಬೇಕು’ ಎಂದು ತಿಳಿಸಿದರು.

ಸಂಘಟನೆ ಸದಸ್ಯರಾದ ಅಪ್ಪಿ ಆನಂದ್, ಸಂತೋಷ್, ಸ್ಲಂ ಮೋರ್ಚಾ ರಾಜ್ಯ ಘಟಕ ಕಾರ್ಯದರ್ಶಿ ಕೆ.ಎಸ್.ರಾಜೇಂದ್ರ, ವಿಜಯಕುಮಾರ್, ವಿಶ್ವನಾಥ್, ಮಂಜು, ವೆಂಕಿ, ನಿರಂಜನ್, ಜಗದೀಶ್, ಸುಮನ್, ರಾಜೇಶ್, ಪೃಥ್ವಿ, ಲೋಕೇಶ್, ಕಾರ್ತಿಕ್, ನಾಗರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !