ನೀರಿನ ಟ್ಯಾಂಕರ್ಗೆ ಜಿಪಿಎಸ್ ಅಳವಡಿಸಿ

ಕೋಲಾರ: ‘ಸಮಸ್ಯಾತ್ಮಕ ಗ್ರಾಮಗಳು ಹಾಗೂ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೆ ಕಡ್ಡಾಯವಾಗಿ ಜಿಪಿಎಸ್ ಉಪಕರಣ ಅಳವಡಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಂಜಿನಿಯರ್ಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿ ಸೋಮವಾರ ನಡೆದ ಬರ ಪರಿಸ್ಥಿತಿ ಅವಲೋಕನ ಸಭೆಯಲ್ಲಿ ಮಾತನಾಡಿ, ‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪ್ರತಿ ವಾರ ಸಮಸ್ಯಾತ್ಮಕ ಹಳ್ಳಿಗಳ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ನೀರಿನ ಸಮಸ್ಯೆ ಎದುರಾದ ದಿನ, ಯಾವ ಹಳ್ಳಿ, ಎಷ್ಟು ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿ ನೀಡಬೇಕು. ನೋಡಲ್ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಬೇಕು. ತಪ್ಪು ಮಾಹಿತಿ ನೀಡಿದರೆ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
‘ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಸಿದರೆ ಅಕ್ರಮಕ್ಕೆ ಕಡಿವಾಣ ಹಾಕಬಹುದು. ಜಿಪಿಎಸ್ ಅಳವಡಿಸದೆ ನೀರು ಸರಬರಾಜು ಮಾಡುವ ಟ್ಯಾಂಕರ್ಗಳ ಮಾಲೀಕರಿಗೆ ಬಿಲ್ ಪಾವತಿಸುವುದಿಲ್ಲ. ಅನುದಾನದ ದುರ್ಬಳಕೆ ತಡೆಯಲು ಪ್ರತಿ ಟ್ಯಾಂಕರ್ಗೂ ಜಿಪಿಎಸ್ ಅಳವಡಿಸಲೇಬೇಕು’ ಎಂದು ಹೇಳಿದರು.
ದೂರು ಬಂದಿವೆ: ‘ಹೊಸದಾಗಿ ಕೊಳವೆ ಬಾವಿ ಕೊರೆಸಿ ಪಂಪ್ ಮೋಟರ್ ಅಳವಡಿಸದ ಬಗ್ಗೆ ಸಾಕಷ್ಟು ದೂರು ಬಂದಿವೆ. ಪಂಪ್ ಮೋಟರ್ ಅಳವಡಿಸಲು ಎಷ್ಟು ಕಾಲಾವಕಾಶ ಬೇಕು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ತಾಲ್ಲೂಕಿನಲ್ಲಿ ಟ್ಯಾಂಕರ್ಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲಾಗಿದ್ದು, ತಾಲ್ಲೂಕಿನ ಡಿ.ಕೆ ಹಳ್ಳಿಗೆ 2 ಟ್ಯಾಂಕರ್ ಮೂಲಕ ಪ್ರತಿನಿತ್ಯ 8 ಲೋಡ್ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ಮಾಲೀಕರಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಬಿಲ್ ಪಾವತಿಸಲಾಗುತ್ತಿದೆ’ ಎಂದು ಬಂಗಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುಬಾನ್ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಜಿಪಿಎಸ್ ಅಳವಡಿಸಿರುವ ಸಂಗತಿ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಜಿಪಿಎಸ್ ಉಪಕರಣಕ್ಕೆ ಯಾರು ಹಣ ಕೊಡುತ್ತಾರೆ?’ ಎಂದು ಕೆಂಡಾಮಂಡಲರಾದರು. ‘ಸರ್ಕಾರದ ದುಡ್ಡಿನ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲವೆ? ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ನಿಯಂತ್ರಣ ಕೊಠಡಿಗೆ ಎಷ್ಟು ದೂರು ಬಂದಿವೆ ಮತ್ತು ಎಷ್ಟು ಬಗೆಹರಿದಿವೆ? ಎಂದು ಪ್ರಶ್ನಿಸಿದರು.
ಹಸಿರು ಮೇವು: ‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈಗಾಗಲೇ ನೀರು ಹರಿದಿರುವ ಕೆರೆಗಳ ಬಳಿ ಪಶು ಸಂಗೋಪನೆ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯಿಂದ ಹಸಿರು ಮೇವು ಬೆಳೆಸಲು ಕ್ರಮ ಕೈಗೊಳ್ಳಬೇಕು. ಬೆಳೆಸಿದ ಮೇವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು’ ಎಂದು ವಿವರಿಸಿದರು.
‘ಬರ ಪರಿಸ್ಥಿತಿ ಅಧ್ಯಯನಕ್ಕೆ ಕಂದಾಯ ಇಲಾಖೆಯು ಸಂಪುಟ ಸಮಿತಿ ಸಭೆ ರಚಿಸಿದ್ದು, ಈ ಸಮಿತಿ ಸದಸ್ಯರು ಯಾವುದೇ ಕ್ಷಣದಲ್ಲಿ ಜಿಲ್ಲೆಗೆ ಭೇಟಿ ನೀಡಬಹುದು. ಅಧಿಕಾರಿಗಳು ಬರದ ವಸ್ತುಸ್ಥಿತಿ ಸಂಬಂಧ ಸಂಪೂರ್ಣ ಮಾಹಿತಿ ಸಂಗ್ರಹಿಸಿ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.