ಪಾತಕಿ ಜೊತೆ ಸಿಸಿಬಿ ಕಾನ್‌ಸ್ಟೆಬಲ್‌ ನಂಟು

7
ಪ್ರಕರಣದ ಕುರಿತು ತನಿಖೆ– ಕಮಿಷನರ್‌ ಹೇಳಿಕೆ

ಪಾತಕಿ ಜೊತೆ ಸಿಸಿಬಿ ಕಾನ್‌ಸ್ಟೆಬಲ್‌ ನಂಟು

Published:
Updated:

ಮಂಗಳೂರು: ಕೇರಳದ ಮಂಜೇಶ್ವರ ನಿವಾಸಿಯಾಗಿರುವ ಕುಖ್ಯಾತ ಪಾತಕಿ ತಲಕಿ ರಫೀಕ್‌ ಎಂಬಾತನ ಜೊತೆ ಮಂಗಳೂರು ನಗರ ಅಪರಾಧ ಘಟಕದ (ಸಿಸಿಬಿ) ಕಾನ್‌ಸ್ಟೆಬಲ್‌ ಚಂದ್ರ ಎಂಬುವವರು ನಿಕಟ ನಂಟು ಹೊಂದಿದ್ದರು ಎಂಬುದನ್ನು ಖಚಿತಪಡಿಸುವ ಮೊಬೈಲ್‌ ಸಂಭಾಷಣೆ ತುಣುಕೊಂದು ಬಹಿರಂಗಗೊಂಡಿದೆ.

ತಲಕಿ ರಫೀಕ್‌ ಮತ್ತು ಕಾನ್‌ಸ್ಟೆಬಲ್‌ ಚಂದ್ರ ನಡುವೆ ಮಲಯಾಳ ಭಾಷೆಯಲ್ಲಿ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ವ್ಯಕ್ತಿಗಳ ಮೊಬೈಲ್‌ ಲೊಕೇಷನ್‌ ಪತ್ತೆಮಾಡಿ, ಮಾಹಿತಿ ಹಂಚಿಕೊಂಡಿರುವುದಕ್ಕೆ ಹಣ ನೀಡುವ ಕುರಿತು ಇಬ್ಬರ ನಡುವೆ ಮಾತುಕತೆ ನಡೆದಿರುವುದು ಅದರಲ್ಲಿದೆ.

ತಲಕಿ ರಫೀಕ್‌ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ. ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳ ಹಾಗೂ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಎರಡು ತಿಂಗಳ ಹಿಂದೆ ಈತನನ್ನು ಬಂಧಿಸಿದ್ದರು. ಆಗಿನಿಂದಲೂ ರಫೀಕ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ.

ತಲಕಿ ರಫೀಕ್‌ನ ವಿರೋಧಿ ಗುಂಪಿನ ಸದಸ್ಯರು ಮತ್ತು ಆತ ಗುರಿಯಾಗಿ ಇರಿಸಿಕೊಂಡಿದ್ದ ವ್ಯಕ್ತಿಗಳ ಮೊಬೈಲ್‌ ಲೊಕೇಷನ್‌, ಅವರ ಓಡಾಟ, ಹಿನ್ನೆಲೆ ಕುರಿತು ಚಂದ್ರ ಮಾಹಿತಿ ಕಲೆಹಾಕಿ ಅದನ್ನು ಆತನಿಗೆ ತಲುಪಿಸುತ್ತಿದ್ದರು. ಕಾನ್‌ಸ್ಟೆಬಲ್‌ ನೀಡುತ್ತಿದ್ದ ಮಾಹಿತಿ ಬಳಸಿಕೊಂಡು ರಫೀಕ್‌ ದುಷ್ಕೃತ್ಯ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ತನಿಖೆಗೆ ಆದೇಶ: ‘ರಫೀಕ್‌ ಮತ್ತು ಚಂದ್ರ ನಡುವಿನ ದೂರವಾಣಿ ಸಂಭಾಷಣೆಯ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಬ್ಬರ ನಡುವಿನ ನಂಟು, ಯಾವ ಕಾರಣಕ್ಕಾಗಿ? ಯಾವಾಗ ಮಾತುಕತೆ ನಡೆಸಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಿದೆ. ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಕಾನ್‌ಸ್ಟೆಬಲ್‌ ತಪ್ಪೆಸಗಿರುವುದು ಪತ್ತೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !