ಕೌಶಲಾಧಾರಿತ ತರಬೇತಿ: ಅನುದಾನದ ಕೊರತೆಯಿಲ್ಲ

7
ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

ಕೌಶಲಾಧಾರಿತ ತರಬೇತಿ: ಅನುದಾನದ ಕೊರತೆಯಿಲ್ಲ

Published:
Updated:
Deccan Herald

ಕೋಲಾರ: ‘ಜಿಲ್ಲೆಯಲ್ಲಿ ಕೌಶಲಾಧಾರಿತ ತರಬೇತಿ ನೀಡಲು ಅನುದಾನದ ಕೊರತೆಯಿಲ್ಲ. ನಿರುದ್ಯೋಗಿಗಳು ಸ್ವಯಂ ಉದ್ಯೋಗ ತರಬೇತಿ ಪಡೆದು ಸ್ವಾವಲಂಬನೆ ಸಾಧಿಸಿ ಮತ್ತೊಬ್ಬರಿಗೂ ನೆರವಾಗಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ ನೀಡಿದರು.

ಸಂಜೀವಿನಿ ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನಾ ಸಂಸ್ಥೆಯು ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿ (ಆರ್‌ಜಿಸಿವೈ) ಕೌಶಲ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ, ‘ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಆರ್‌ಜಿಸಿವೈನಂತಹ ಅನೇಕ ಯೋಜನೆ ಜಾರಿಗೊಳಿಸಿದೆ’ ಎಂದರು.

‘ಗ್ರಾಮೀಣ ಭಾಗದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಗುರುತಿಸಿ ತರಬೇತಿ ನೀಡಿ ಜೀವನ ರೂಪಿಸಿಕೊಳ್ಳಲು ಎಲ್ಲಾ ಸೌಕರ್ಯ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಗೌರವಧನ ನೀಡಲಾಗುತ್ತಿದ್ದು, ನಿರುದ್ಯೋಗಿಗಳು ಯಾರ ಹಂಗಿಲ್ಲದೆ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿದೆ. ಕೌಶಲ ತರಬೇತಿ ನೀಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು. ಜತೆಗೆ ತರಬೇತಿ ಪಡೆಯುವವರ ಸಂಖ್ಯೆಯು ಹೆಚ್ಚಾಗಬೇಕು’ ಎಂದು ಆಶಿಸಿದರು.

‘ತರಬೇತಿಗೆ ಈಗಾಗಲೇ 15 ಸಾವಿರ ಮಂದಿ ನೋಂದಣಿಯಾಗಿದ್ದು, ಇವರಿಗೆ ಕೌನ್ಸೆಲಿಂಗ್‌್ ನಡೆಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಉತ್ತಮವಾಗಿ ಕೆಲಸ ಕಲಿತು ಕೌಶಲ ರೂಢಿಸಿಕೊಂಡರೆ ಸಿದ್ಧ ಉಡುಪು ಉತ್ಪಾದನಾ ಘಟಕಗಳಲ್ಲಿ ಉದ್ಯೋಗಾವಕಾಶ ಸಿಗುತ್ತದೆ. ಅಲ್ಲದೇ, ಮನೆಯಲ್ಲೇ ಸ್ವಉದ್ಯೋಗ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಸಾಲ ಸೌಲಭ್ಯ: ‘ಮುದ್ರಾ ಯೋಜನೆಯಡಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಸೌಲಭ್ಯ ಪಡೆದು ನಿರುದ್ಯೋಗಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜತೆಗೆ ಮತ್ತೊಬ್ಬರ ಕುಟುಂಬಕ್ಕೂ ನೆರವಾಗಬೇಕು’ ಎಂದು ಮನವಿ ಮಾಡಿದರು.

ಕೌಶಲ ಮುಖ್ಯ: ‘ಉದ್ಯೋಗವಿಲ್ಲ ಎಂದು ಮನೆಯಲ್ಲಿ ಕೊರಗುತ್ತಾ ಕೂರಬಾರದು. ಸಾಕಷ್ಟು ಉದ್ಯೋಗಾವಕಾಶವಿದ್ದು, ಕೌಶಲ ಬೆಳೆಸಿಕೊಳ್ಳುವುದು ಮುಖ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಅಭಿಪ್ರಾಯಪಟ್ಟರು.

‘ತರಬೇತಿ ಪಡೆದವರಿಗೆ ಗೌರವಧನ ಬಿಡುಗಡೆ ಮಾಡಲಾಗಿದೆ. ಸ್ವಯಂ ಉದ್ಯೋಗ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕುರಿತು ತರಬೇತಿ ನೀಡಲಾಗಿದ್ದು, ಉತ್ತಮ ಕೆಲಸಗಾರರಾಗಿ ಬದುಕಬೇಕು’ ಎಂದು ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರ ಸಲಹೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್‌ರಾವ್‌ ಸ್ವಯಂ ಉದ್ಯೋಗಿಗಳಿಗೆ ಬ್ಯಾಂಕ್‌ನಿಂದ ಸಿಗುವ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಸೌಂದರ್ಯ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವೆಂಕಟರಾಮ್, ಶಾಹಿ ಗಾರ್ಮೆಂಟ್ಸ್‌ ಕಂಪನಿ ಪ್ರತಿನಿಧಿ ರಘುರಾಮ್‌, ತರಬೇತುದಾರ ಸುಂದರೇಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !