ಅವೈಜ್ಞಾನಿಕ ನೀರು ನಿರ್ವಹಣೆ: ಕೃತಕ ಬರ

7
ಪೋಲಾಗುತ್ತಿದೆ ಜೀವಜಲ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಅವೈಜ್ಞಾನಿಕ ನೀರು ನಿರ್ವಹಣೆ: ಕೃತಕ ಬರ

Published:
Updated:
Deccan Herald

ಮಂಡ್ಯ: ಕೆಆರ್‌ಎಸ್‌ ಜಲಾಶಯ ತುಂಬಿದ್ದರೂ ಜಿಲ್ಲೆಯ ಕೊನೆ ಭಾಗದ ನಾಲೆಗಳಿಗೆ ನೀರು ಹರಿದಿಲ್ಲ, ಸಂಪೂರ್ಣವಾಗಿ ಕೆರೆಗಳೂ ತುಂಬಿಲ್ಲ. ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಜಿಲ್ಲೆಯಲ್ಲಿ ಕೃತಕ ಬರ ಸೃಷ್ಟಿಯಾಗಿದೆ.

ಅಕ್ಟೋಬರ್‌ ತಿಂಗಳಲ್ಲಿ ಕೆಆರ್‌ಎಸ್‌ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ನಂತರ ಮಳೆಯ ಪ್ರಮಾಣ ಇಳಿಮುಖವಾದ ಕಾರಣ ಸದ್ಯ ನೀರಿನ ಮಟ್ಟ 116 ಅಡಿ ಇದೆ. ತಮಿಳುನಾಡಿನ ಪಾಲಿನ ನೀರು ಹರಿಸಿದ ನಂತರವೂ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಆದರೂ ಜಿಲ್ಲೆಯ ಹಲವೆಡೆ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದು ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಜಲಾಶಯಕ್ಕೆ ಸಮೀಪದಲ್ಲೇ ಇರುವ ಶ್ರೀರಂಗಪಟ್ಟಣ, ಮಂಡ್ಯ ತಾಲ್ಲೂಕಿನಲ್ಲೂ ನೀರಿನ ಕೊರತೆ ಎದುರಾಗಿದೆ. ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕಿನ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಪ್ರಕ್ರಿಯೆ ಮುಂದುವರಿದಿದೆ. ಮದ್ದೂರು ತಾಲ್ಲೂಕಿನ ಶಿಂಷಾ ಎಡದಂಡೆ, ಮಳವಳ್ಳಿ ತಾಲ್ಲೂಕಿನ ಕೊನೆ ಭಾಗದ ನಾಲೆಯಲ್ಲಿ ನೀರು ಹರಿಯುತ್ತಿಲ್ಲ.

ಸಣ್ಣ ನೀರಾವರಿ ಸಚಿವರು ಜಿಲ್ಲೆಯವರೇ ಆದರೂ ಕೆರೆಕಟ್ಟೆ ತುಂಬದಿರುವುದು ವಿಪರ್ಯಾಸ. ಬೇಸಿಗೆ ಬೆಳೆಗೆ ನೀರು ದೊರೆಯುತ್ತದೆ ಎಂಬ ನಿರೀಕ್ಷೆಯಿಂದ ರೈತರು 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಿದ್ದಾರೆ. ಅಲ್ಲದೆ ಭತ್ತ ಕಟಾವಿಗೆ ಬಂದಿದ್ದು ಮತ್ತೊಮ್ಮೆ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡಲು ರೈತರು ಸಜ್ಜಾಗುತ್ತಿದ್ದಾರೆ. ಆದರೆ ಕೊನೆ ಭಾಗದ ಕೆಲವು ರೈತರು ಮುಂಗಾರು ಬೆಳೆಯನ್ನೂ ಸಮರ್ಪಕವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಇನ್ನು ಬೇಸಿಗೆ ಬೆಳೆ ಕನಸಿನ ಮಾತಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

‘ಎಲ್ಲಾ ಕಡೆ ನೀರು ಹರಿಯುತ್ತಿದೆ. ಆದರೂ ನಮ್ಮ ಜಿಲ್ಲೆ ಬರದಿಂದ ಮುಕ್ತವಾಗಿಲ್ಲ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವೈಫಲ್ಯವೇ ಕಾರಣ. ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದೆ. ಮುಂದೆ ನೀರು ನೂರು ಅಡಿಗಿಂತಲೂ ಕಡಿಮೆಯಾದರೆ ಬೇಸಿಗೆ ಬೆಳೆಗೆ ನೀರು ಸಿಗುವುದು ಅನುಮಾನ’ ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜ್‌ ಆತಂಕ ವ್ಯಕ್ತಪಡಿಸಿದರು.

ಅವೈಜ್ಞಾನಿಕ ನೀರು ನಿರ್ವಹಣೆ: ಇರುವ ನೀರಿನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಎಲ್ಲ ಭಾಗಕ್ಕೂ ನೀರು ಹಂಚಬಹುದು. ಆದರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳ ಅವೈಜ್ಞಾನಿಕ ನೀರು ನಿರ್ವಹಣೆ ನೀತಿಯಿಂದ ಬರ ಕೃತಕ ಸೃಷ್ಟಿಯಾಗಿದೆ. ನೀರು ಹರಿಸಿದ ನಾಲೆಗಳಿಗೇ ಮತ್ತೆ ಮತ್ತೆ ನೀರು ಹರಿಸುತ್ತಿದ್ದಾರೆ. ಮುಖ್ಯನಾಲೆ, ಶಾಖಾ ನಾಲೆ, ವಿತರಣಾ ನಾಲೆ, ಹೊಲ ನಾಲೆಗಳ ಮಾಹಿತಿ ಎಂಜಿನಿಯರ್‌ಗಳಲ್ಲಿ ಇಲ್ಲ. ನೀರುಗಂಟಿಗಳು ಹೇಳಿದ್ದನ್ನೇ ನಂಬುತ್ತಾರೆ. ಅಧಿಕಾರಿಗಳು ವಿವೇಚನೆ ಬಳಸುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸುತ್ತಾರೆ.

‘ನೀರು ಬಳಕೆದಾರರ ಸಹಕಾರ ಸಂಘಗಳು ಜಿಲ್ಲೆಯಾದ್ಯಂತ ಇವೆ. ಸಂಘದ ಸಭೆಗಳಿಗೆ ಎಂಜಿನಿಯರ್‌ಗಳು ಬರುವುದಿಲ್ಲ. ಅಚ್ಚುಕಟ್ಟುದಾರರ ಒತ್ತಾಯಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೆಲವು ಎಂಜಿನಿಯರ್‌ಗಳಿಗೆ ನೀರಾವರಿಯ ಮಹತ್ವದ ಅರಿವೂ ಇಲ್ಲ. ಬೇರೆ ಇಲಾಖೆಗಳಿಂದ ನಿಗಮಕ್ಕೆ ಬಂದ ಅಧಿಕಾರಿಗಳಿಗೆ ನೀರು ಹಂಚಿಕೆಯ ಪರಿಕಲ್ಪನೆಯೇ ಇಲ್ಲ. ಬೇಕಾಬಿಟ್ಟಿ ನೀರು ಹರಿಸುತ್ತಿದ್ದು ನಿಗದಿತ ವೇಳಾಪಟ್ಟಿಯನ್ನೂ ಅನುಸರಿಸುತ್ತಿಲ್ಲ. ಹೀಗಾಗಿ ಅಮೂಲ್ಯ ಜೀವಜಲ ಅಪಮೌಲ್ಯವಾಗುತ್ತಿದೆ’ ಎಂದು ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಉಪಾಧ್ಯಕ್ಷ ಮಂಗಲ ಎಂ.ಯೋಗೀಶ್‌ ಆರೋಪಿಸಿದರು.

‘ಡಿಸೆಂಬರ್‌ ಅಂತ್ಯದ ವೇಳೆಗೆ ಜಿಲ್ಲೆಯ ಎಲ್ಲ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಲಾಗುವುದು. ಈಗ ಶಿಂಷಾ ಎಡದಂಡೆ ನಾಲೆಗಳಿಗೂ ನೀರು ಹರಿಸಲಾಗಿದೆ. ರೈತರ ಅವಶ್ಯಕತೆಗೆ ಅನುಗುಣವಾಗಿ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮ ವಿಸಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆರ್‌.ಸುರೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !