ಮಂಗಳವಾರ, ಡಿಸೆಂಬರ್ 10, 2019
26 °C
ಬಾರ್ಡರ್‌–ಗಾವಸ್ಕರ್ ಟೆಸ್ಟ್ ಸರಣಿ ಇಂದಿನಿಂದ

ಅಡಿಲೇಡ್ ಕ್ರೀಡಾಂಗಣದೊಂದಿಗೆ ವಿರಾಟ್ ನಂಟು

Published:
Updated:
Deccan Herald

ಅಡಿಲೇಡ್: ‘ಈ ಕ್ರೀಡಾಂಗಣದ ಮೇಲೆ ನನಗೆ ಅಪಾರ ಪ್ರೀತಿ ಇದೆ. ಇಲ್ಲಿ ಗೆ ಬಂದು ಆಡುವುದೆಂದರೆ ಅಚ್ಚುಮೆಚ್ಚು’–

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅಡಿಲೇಡ್ ಕ್ರೀಡಾಂಗಣದೊಂದಿಗಿನ ತಮ್ಮ ನಂಟು ಬಿಚ್ಚಿಟ್ಟ ಪರಿ ಇದು. ಅವರು ಇಲ್ಲಿ ಈ ಹಿಂದೆ ಆಡಿದ್ದ ಎರಡು ಟೆಸ್ಟ್‌ಗಳಲ್ಲಿ ಮೂರು ಶತಕಗಳನ್ನು ದಾಖಲಿಸಿದ್ದರು.

‘ಇಲ್ಲಿ ನನ್ನ ಜೀವನದ ಪ್ರಮುಖ ಸಾಧನೆಗಳು ಮೂಡಿ ಬಂದಿರುವುದರಿಂದ ಅಚ್ಚುಮೆಚ್ಚು. ಟೆಸ್ಟ್‌ ಕ್ರಿಕೆಟ್‌ ಜೀವನದ ಚೊಚ್ಚಲ ಶತಕವನ್ನು ಇಲ್ಲಿ ದಾಖಲಿಸಿದ್ದೆ. ಒಟ್ಟಾರೆ ಕ್ರಿಕೆಟ್ ಆಡಲು ಇದು ಅತ್ಯುತ್ತಮವಾದ ತಾಣ. ಆದರೆ, ಪ್ರತಿಬಾರಿಯೂ ಇಲ್ಲಿ ಶತಕ ಹೊಡೆಯುವ ಖಚಿತತೆ ಏನಿಲ್ಲ.  ಆಟದಲ್ಲಿ ಏಳು–ಬೀಳು ಇದ್ದೇ ಇರುತ್ತದೆ‘ ಎಂದರು.

‘ಹಳೆಯ ಮಧುರ ನೆನಪುಗಳಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಮತ್ತಷ್ಟು ಸಾಧನೆ ಮಾಡಲು ನೆರವಾಗುತ್ತದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ಪಿಚ್‌ಗಳಲ್ಲಿ ಬ್ಯಾಟಿಂಗ್ ಕಷ್ಟ. ಆದರೆ, ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡಬಹುದು. ಆದರೆ ಸರಿಯಾದ ತಾಂತ್ರಿಕತೆ ಮತ್ತು ಏಕಾಗ್ರತೆಯಿಂದ ಆಡುವುದು ಮುಖ್ಯ’ ಎಂದು ಹೇಳಿದರು.

ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಪೃಥ್ವಿ

ಗಾಯಗೊಂಡಿರುವ ಯುವ ಆಟಗಾರ ಪೃಥ್ವಿ ಶಾ ಅವರು ಬಾಕ್ಸಿಂಗ್ ಡೇ ಟೆಸ್ಟ್ (ಡಿ. 26ರಿಂದ) ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ ಎಂದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಈಚೆಗೆ ಆಸ್ಟ್ರೇಲಿಯಾ ಇಲೆವನ್ ತಂಡದ ಎದುರು ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಶಾ ಅವರ ಎಡಪಾದಕ್ಕೆ ಪೆಟ್ಟಾಗಿತ್ತು. ಆದ್ದರಿಂದ ಅವರಿಗೆ ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ನಿಂದ ವಿಶ್ರಾಂತಿ ನೀಡಲಾಗಿತ್ತು.

‘ಚಿಕಿತ್ಸೆಗೆ ಉತ್ತಮ ಸ್ಪಂದಿಸುತ್ತಿದ್ದಾರೆ. ನಡೆಯಲು ಆರಂಭಿಸಿದ್ದಾರೆ. ಶೀಘ್ರದಲ್ಲಿಯೇ ಅವರು ಇನ್ನಷ್ಟು ಚೇತರಿಸಿಕೊಂಡು ನೆಟ್ಸ್‌ಗೆ ಮರಳುವ ಸಾಧ್ಯತೆ ಇದೆ’ ಎಂದು ಶಾಸ್ತ್ರಿ ಅವರು ಇಲ್ಲಿಯ ಎಸ್‌ಇಎನ್‌ ಸ್ ವಾಟ್ಲೆ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು