ಮಂಗಳವಾರ, ಫೆಬ್ರವರಿ 25, 2020
19 °C

9ಕ್ಕೆ ಕನಕ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಂಘದ ವತಿಯಿಂದ ನಗರದಲ್ಲಿ ಡಿ.9ರಂದು ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತೇವೆ’ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಚಿಕ್ಕಹನುಮಪ್ಪ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಪಲ್ಲಕಿ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ಶಾಸಕರಾದ ಕೆ.ಶ್ರೀನಿವಾಸಗೌಡ, ಎಂಟಿಬಿ ನಾಗರಾಜ್, ಬೈರತಿ ಬಸವರಾಜು, ಮಾಜಿ ಸಚಿವ ಎಚ್.ಎಂ.ರೇವಣ್ಣ ಭಾಗವಹಿಸುತ್ತಾರೆ’ ಎಂದು ವಿವರಿಸಿದರು.

‘ಹೆಲಿಕಾಪ್ಟರ್ ಮೂಲಕ ಮೆರವಣಿಗೆಯಲ್ಲಿ ಪುಷ್ಪವೃಷ್ಟಿ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕೊೀಲಾರಮ್ಮ, ಸೋಮೇಶ್ವರ ದೇವಾಲಯ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪವೃಷ್ಟಿ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಮುದಾಯ ದುರ್ಬಳಕೆ: ‘ಕುರುಬ ಸಮುದಾಯ ಬೇರೆ, ರಾಜಕೀಯ ಬೇರೆ. ವರ್ತೂರು ಪ್ರಕಾಶ್‌ ತಮ್ಮ ಸ್ವಾರ್ಥಕ್ಕಾಗಿ ಕ್ಷೇತ್ರದಲ್ಲಿ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ವರ್ತೂರು ಪ್ರಕಾಶ್‌ರನ್ನು ಕ್ಷೇತ್ರದಿಂದ ಹೊರ ಕಳುಹಿಸಲು ಸಮುದಾಯದವರೇ ತೀರ್ಮಾನ ಮಾಡಿದ್ದಾರೆ’ ಎಂದು ಹೇಳಿದರು.

‘ನನ್ನ ಉಸಿರು ಇರುವವರೆಗೂ ಸಮುದಾಯದ ಯಾವುದೇ ಕಾರ್ಯಕ್ರಮಕ್ಕೆ ವರ್ತೂರು ಪ್ರಕಾಶ್‌ರನ್ನು ಕರೆಯುವುದಿಲ್ಲ. ಭಸ್ಮಾಸುರನ ತಪಸ್ಸು ಮೆಚ್ಚಿ ಶಿವ ವರ ನೀಡಿದಂತೆ ಸಿದ್ದರಾಮಯ್ಯರ ಆಶೀರ್ವಾದದಿಂದ ಅವರು ಶಾಸಕರಾಗಿದ್ದರು. ನಂತರ ಅವರು ಭಸ್ಮಾಸುರನಂತೆ ನಡೆದುಕೊಂಡ ಕಾರಣ ಮತದಾರರರು ಮೋಹಿನಿಯಾಗಿ ಅವರನ್ನು ಭಸ್ಮ ಮಾಡಿದ್ದಾರೆ’ ಎಂದು ಟೀಕಿಸಿದರು.

ಸಹಕಾರ ನೀಡಲಿಲ್ಲ: ‘ಸಮುದಾಯದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ವರ್ತೂರು ಪ್ರಕಾಶ್‌ ಸಹಕಾರ ನೀಡಲಿಲ್ಲ. ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ₹75 ಲಕ್ಷ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭವನಕ್ಕೆ ಜಮೀನು ನೀಡಿದ್ದಾರೆ. ಅವರು ನಿಜವಾದ ಜನ ನಾಯಕರು. ಮನೆಯಲ್ಲಿ ಅಣ್ಣ ತಮ್ಮಂದಿರನ್ನು ಇಬ್ಭಾಗ ಮಾಡಿದ್ದೇ ವರ್ತೂರು ಪ್ರಕಾಶ್‌ರ ಡೊದ್ದ ಸಾಧನೆ’ ಎಂದು ವ್ಯಂಗ್ಯವಾಡಿದರು.

ಸಂಬಂಧವಿಲ್ಲ: ‘ವರ್ತೂರು ಪ್ರಕಾಶ್‌ ಮೊದಲ ಬಾರಿಗೆ ಶಾಸಕರಾದಾಗ ನಗರಸಭೆಯಲ್ಲಿ ಕೇವಲ 6 ಸದಸ್ಯರನ್ನು ಗೆಲ್ಲಿಸಿದ್ದರು. ಆದರೆ, 21 ಸದಸ್ಯರನ್ನು ಗೆಲ್ಲಿಸಿದ್ದಾಗಿ ಸುಳ್ಳು ಹೇಳಿದ್ದಾರೆ. ಮುಂಬರುವ ನಗರಸಭೆ ಚುನಾವಣೆಗೂ ಕುರುಬರ ಸಂಘಕ್ಕೂ ಸಂಬಂಧವಿಲ್ಲ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಸ್ಪಷ್ಟಪಡಿಸಿದರು.

‘ಚಿಕ್ಕಹನುಮಪ್ಪ ಅವರೇ ಸಂಘದ ಅಧ್ಯಕ್ಷರು. ಕುರುಬ ಸಮಾಜ ಕಣ್ಣು ತೆರೆಯುವಂತಾಗಲು ಸಿದ್ದರಾಮಯ್ಯ ಅವರು ಕಾರಣವೇ ಹೊರತು ವರ್ತೂರು ಪ್ರಕಾಶ್ ಅಲ್ಲ. ವರ್ತೂರು ಪ್ರಕಾಶ್‌ ಶಾಸಕರಾಗಿದ್ದ ಅವಧಿಯಲ್ಲಿ ಸಮುದಾಯಕ್ಕೆ ಏನೂ ಮಾಡಿಲ್ಲ. ಸಮುದಾಯದವರಿಗೆ ಅಧಿಕಾರವೂ ಸಿಕ್ಕಿಲ್ಲ’ ಎಂದು ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಎನ್.ರಾಜಣ್ಣ ವಾಗ್ದಾಳಿ ನಡೆಸಿದರು.

ಸಂಘದ ಮಾಜಿ ಅಧ್ಯಕ್ಷ ಪಿ.ಎಚ್.ನಾಗರಾಜ್, ಕುರುಬ ಸಮುದಾಯದ ಮುಖಂಡರಾದ ಅನಂತಪ್ಪ, ಕೃಷ್ಣಪ್ಪ, ಅಶ್ವತ್ಥ್‌, ವೈ.ಶಿವಕುಮಾರ್, ನಾರಾಯಣಸ್ವಾಮಿ, ತ್ಯಾಗರಾಜ ಮುದ್ದಪ್ಪ, ಕೃಷ್ಣ, ಶಿವಕುಮಾರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು