ತತ್ವ ಪಾಲನೆಯಿಂದ ಆದರ್ಶ ಭಾರತ

7
ಅಂಬೇಡ್ಕರ್ ಅವರ 62 ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅಭಿಮತ

ತತ್ವ ಪಾಲನೆಯಿಂದ ಆದರ್ಶ ಭಾರತ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಭಾರತದ ಪ್ರತಿಯೊಬ್ಬ ಪ್ರಜೆಯು ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆದರ್ಶ ಭಾರತ ಕಟ್ಟಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅಭಿಪ್ರಾಯಪಟ್ಟರು.

ನಗರದ ಜೈ ಭೀಮ್ ಪದವಿ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 62 ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಳ ಜಾತಿಯಲ್ಲಿ ಹುಟ್ಟಿ, ತುಂಬಾ ಕಷ್ಟಗಳನ್ನು ಎದುರಿಸಿ ಸ್ವಾಭಿಮಾನ ಮತ್ತು ಹೋರಾಟದಿಂದ ಮುಂದೆ ಬಂದು, ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಶೋಷಿತರ ಪರವಾಗಿ ಹೋರಾಟ ಮಾಡಿದ ಮೇರು ಪುರುಷ ಅಂಬೇಡ್ಕರ್ ಅವರ ಸಂದೇಶ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಇವತ್ತು ಇಡೀ ವಿಶ್ವಕ್ಕೆ ಅವುಗಳ ಅವಶ್ಯಕತೆ ಇದೆ’ ಎಂದು ಹೇಳಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಕೈವಾರಮಯ್ಯ ಮಾತನಾಡಿ, ‘ಆಳ ಅಧ್ಯಯನ, ಸಂಘಟಿತ ಹೋರಾಟದ ಮೂಲಕ ರಕ್ತ ರಹಿತ ಕ್ರಾಂತಿ ಮಾಡಿದ ಅಂಬೇಡ್ಕರ ಅವರು ಸಂವಿಧಾನದ ಮೂಲಕ ತುಳಿತಕ್ಕೆ ಒಳಗಾದ ಪ್ರತಿಯೊಬ್ಬರ ಬಾಳಿನಲ್ಲಿ ಭರವಸೆಯ ದೀವಿಗೆ ಹಚ್ಚಿದವರು. ಹೀಗಾಗಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು’ ಎಂದು ತಿಳಿಸಿದರು.

‘ದೇಶದ ಮೊದಲು ಕಾನೂನು ಮಂತ್ರಿಯಾಗಿದ್ದ ವೇಳೆ ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ಜಾರಿ ಮಾಡಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಹೆರಿಗೆ ಅವಧಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ರಜೆ, ಭತ್ಯೆ ನೀಡುವ ಕಾನೂನು ತಂದರು. ಕಾರ್ಮಿಕ ಕೆಲಸದ ಅವಧಿ ಪ್ರತಿದಿನಕ್ಕೆ 8 ಗಂಟೆ ನಿಗದಿಗೊಳಿಸಿ ದುಡಿಯುವ ವರ್ಗದ ಪರವಾಗಿ ಸಾಕಷ್ಟು ಕೆಲಸ ಮಾಡಿದರು’ ಎಂದರು.

‘ಅಂಬೆಡ್ಕರ್ ಅವರು ಬರೆದ ರೂಪಾಯಿ ಸಮಸ್ಯೆ ಎಂಬ ಪುಸ್ತಕ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು ಎಂಬುದು ವಿಶೇಷ. ಅನೇಕ ಶತಮಾನಗಳಿಂದ ಶೋಷಣೆಗೆ ಒಳಗಾದವರನ್ನು ವಿಮೋಚನೆಗೊಳಿಸಲು ಮೀಸಲಾತಿ ಕಲ್ಪಿಸಿದರು. ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ್ಯ, ಸಮಾನತೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದರು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಹೆಗಡೆ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎನ್ ಶೇಷಾದ್ರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತೇಜಾನಂದ ರೆಡ್ಡಿ, ಬಿಎಸ್ಪಿ ತಾಲ್ಲೂಕು ಘಟಕ ಅಧ್ಯಕ್ಷ ಗುರಯ್ಯ, ವಿದ್ಯಾರ್ಥಿ ನಿಲಯ ಪಾಲಕರಾದ ಶ್ರೀನಿವಾಸ್, ಚನ್ನಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !