ಶುಕ್ರವಾರ, ಫೆಬ್ರವರಿ 26, 2021
18 °C
ವಿಸ್ತೃತ ಯೋಜನಾ ವರದಿ ಸಲ್ಲಿಕೆಗೆ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

ಮೇಕೆದಾಟುಗೆ ತಡೆ ಸಿಗದಂತೆ ನೋಡ್ಕೊಳ್ಳಿ: ವಕೀಲರ ತಂಡಕ್ಕೆ ರಾಜ್ಯ ಸರ್ಕಾರ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮೇಕೆದಾಟು ಯೋಜನೆ ವಿಷಯದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಪರವಾಗಿ ತಡೆಯಾಜ್ಞೆ ಸಿಗದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ವಕೀಲರ ತಂಡಕ್ಕೆ ನಿರ್ದೇಶನ ನೀಡಿದೆ.

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿಗಳ ಹಾಗೂ ಮಾಜಿ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.

‘ನಮ್ಮ ಯೋಜನೆ ನ್ಯಾಯಯುತ. ನಮ್ಮ ವಕೀಲರು ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮನವೊಲಿಸುವ ಕೆಲಸ ಮಾಡಬೇಕು. ಒಂದು ವೇಳೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟರೆ ಕಷ್ಟವಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

‘ಯೋಜನೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ತಡೆಯಾಜ್ಞೆ ನೀಡಿದರೆ ಯೋಜನೆ ಅನುಷ್ಠಾನ ವಿಳಂಬವಾಗುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು’ ಎಂದು ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ವಕೀಲರಿಗೆ ಸೂಚಿಸಿದರು.

ಮನೆಬಾಗಿಲಿಗೆ ಹೋಗಲು ಸಿದ್ಧ: ‘ಯೋಜನೆಯ ವಿಷಯದಲ್ಲಿ ತಮಿಳುನಾಡಿನ ಜತೆಗೆ ನಾವು ಸಂಘರ್ಷಕ್ಕೆ ಸಿದ್ಧ ಇಲ್ಲ. ಅವರು ನಮ್ಮ ಸಹೋದರರು ಇದ್ದಂತೆ. ಈ ಯೋಜನೆ ನಮ್ಮ ಹಕ್ಕು. ಅವರಿಗೆ ವಾಸ್ತವಾಂಶ ಮನವರಿಕೆ ಮಾಡಿಕೊಡುತ್ತೇವೆ. ಅವರ ಮನೆ ಬಾಗಿಲಿಗೆ ಹೋಗಲು ಸಿದ್ಧ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮುಖ್ಯಮಂತ್ರಿ ಹಾಗೂ ನಾನು ಪತ್ರ ಬರೆದಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

‘ಜಲಾಶಯದ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಸಿಕೊಳ್ಳುತ್ತೇವೆ. ಒಂದೇ ಒಂದು ಲೀಟರ್‌ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸುವುದಿಲ್ಲ. ಯೋಜನೆಯಿಂದ ಶೇ 95ರಷ್ಟು ತಮಿಳುನಾಡಿಗೇ ಅನುಕೂಲವಾಗಲಿದೆ. ಜಲವಿದ್ಯುತ್‌ಗೆ ಬಳಸಿದ ನೀರು ಸಹ ಅಲ್ಲಿಗೆ ಹೋಗಲಿದೆ. ಈ ಬಗ್ಗೆ ತಮಿಳುನಾಡಿನ ನಾಯಕರಿಗೆ ಪ್ರಾತ್ಯಕ್ಷಿಕೆ ನೀಡಲು ಸಿದ್ಧ’ ಎಂದು ಹೇಳಿದರು.

ಕೃಷ್ಣಾ ತಡೆಯಾಜ್ಞೆ ತೆರವಿಗೆ ಆಗ್ರಹ: ‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3 ನೀರನ್ನು ಪೂರ್ಣವಾಗಿ ಉಪಯೋಗಿಸಲು ಸುಮಾರು 15 ಸಾವಿರ ಲಕ್ಷ ಹೆಕ್ಟೇರನ್ನು ನೀರಾವರಿಗೆ ಸೇರಿಸಬೇಕಿದೆ. ಇದಕ್ಕಾಗಿ ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್‌ಗೆ ಏರಿಸಬೇಕು. ಅದಕ್ಕಾಗಿ ಕೃಷ್ಣಾ ನ್ಯಾಯಮಂಡಳಿಯಿಂದ ಅಧಿಸೂಚನೆ ಆಗುವುದು ಅವಶ್ಯಕ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಪ್ರತಿ‍ಪಾದಿಸಿದರು.

‘ಆಂಧ್ರ ಪ್ರದೇಶವು ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದೆ. 2013ರಿಂದ ತಡೆಯಾಜ್ಞೆ ತೆರವಾಗಿಲ್ಲ. ಇದು ಹಿಂದಿನ ಸರ್ಕಾರದ ಲೋಪ. ಕೂಡಲೇ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದೂ ಅವರು ಆಗ್ರಹಿಸಿದರು.

‘ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಕುಮಾರಸ್ವಾಮಿ ಅವರು ಕಾನೂನು ತಂಡಕ್ಕೆ ಸೂಚಿಸಿದರು.

ಮಾಜಿ ಮುಖ್ಯಮಂತ್ರಿಗಳು ಗೈರು: ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ದೇವೇಗೌಡ, ಎಸ್‌.ಎಂ. ಕೃಷ್ಣ, ಎಂ.ವೀರಪ್ಪ ಮೊಯಿಲಿ, ಬಿ.ಎಸ್‌.ಯಡಿಯೂರಪ್ಪ ಹಾಗೂ ಡಿ.ವಿ.ಸದಾನಂದ ಗೌಡ ಸಭೆಗೆ ಗೈರು ಹಾಜರಾಗಿದ್ದರು. ‘ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರು’ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕೇಂದ್ರದ ಅನುಮೋದನೆಗೆ ವಿರೋಧ

ಚೆನ್ನೈ: ಮೇಕೆದಾಟು ಯೋಜನೆಯ ವಿಸ್ತ್ರೃತ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ತಮಿಳುನಾಡು ವಿಧಾನಸಭೆ ನಿರ್ಣಯ ಕೈಗೊಂಡಿದೆ.

ಗುರುವಾರ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಮಂಡಿಸಿದ ನಿರ್ಣಯವನ್ನು ಒಮ್ಮತದಿಂದ ಅಂಗೀಕರಿಸಲಾಯಿತು.

ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಕರ್ನಾಟಕಕ್ಕೆ ನೀಡಿರುವ ಅನುಮತಿಯನ್ನು ತಕ್ಷಣವೇ ವಾಪಸ್‌ ಪಡೆಯುವಂತೆ ಕೇಂದ್ರ ಜಲ ಆಯೋಗಕ್ಕೆ ಜಲ ಸಂಪನ್ಮೂಲ ಸಚಿವಾಲಯ ಆದೇಶ ನೀಡಬೇಕು ಎಂದು ನಿರ್ಣಯದ ಮೂಲಕ ಆಗ್ರಹಿಸಲಾಯಿತು.

ತಮಿಳುನಾಡಿನ ಒಪ್ಪಿಗೆ ಇಲ್ಲದೆಯೇ ಮೇಕೆದಾಟು ಅಥವಾ ಕರ್ನಾಟಕದ ಕಾವೇರಿ ಜಲಾಯನ ಪ್ರದೇಶದಲ್ಲಿ ಯಾವುದೇ ರೀತಿ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳದಂತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಡಿಎಂಕೆ ಸೇರಿದಂತೆ ಇತರ ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ವಿಶೇಷ ಅಧಿವೇಶನ ಕರೆಯಲಾಗಿತ್ತು.

**

177.25 ಟಿಎಂಸಿ ಅಡಿ – ತಮಿಳುನಾಡಿಗೆ ವಾರ್ಷಿಕ ಬಿಡಬೇಕಾದ ಕಾವೇರಿ ನೀರಿನ ಪ್ರಮಾಣ

395 ಟಿಎಂಸಿ ಅಡಿ – ಈ ವರ್ಷ ಬಿಟ್ಟಿರುವ ನೀರು

150 ಟಿಎಂಸಿ ಅಡಿ – ತಮಿಳುನಾಡು ಬಳಕೆ ಮಾಡಿರುವ ನೀರು

245 ಟಿಎಂಸಿ ಅಡಿ – ಸಮುದ್ರಪಾಲಾಗಿರುವ ನೀರು

64 ಟಿಎಂಸಿ ಅಡಿ – ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸುವ ನೀರು

**

4,996 ಹೆಕ್ಟೇರ್‌ – ಮೇಕೆದಾಟು ಯೋಜನೆಗೆ ಭೂಸ್ವಾಧೀನ ಮಾಡಬೇಕಿರುವ ಅರಣ್ಯ ಭೂಮಿ

200 ಹೆಕ್ಟೇರ್‌ – ಕಂದಾಯ ಭೂಮಿ ಸ್ವಾಧೀನ

200 ಎಕರೆ – ರೈತರ ಭೂಮಿ ಸ್ವಾಧೀನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು