ಬುಧವಾರ, ಮಾರ್ಚ್ 3, 2021
19 °C
ಮೇವು ಸಂಗ್ರಹಕ್ಕೆ ಪಶುವೈದ್ಯಕೀಯ ಇಲಾಖೆಗೆ ಜಿಲ್ಲಾಡಳಿದ ಸೂಚನೆ

ದನಗಳ ಮಾರಾಟ ಸಲ್ಲ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ‘ಮೇವಿಗೆ ತೊಂದರೆ ಎಂದು ಹತಾಶರಾಗಿ ದನಗಳನ್ನು ಮಾರಾಟ ಮಾಡಬೇಡಿ, ಜಿಲ್ಲಾಡಳಿತ ನಿಮ್ಮ ಬೆನ್ನಿಗೆ ನಿಲ್ಲಲಿದೆ’ ಎಂದು ಜಿಲ್ಲೆಯ ರೈತರಿಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದ್ದಾರೆ.

ಬರನಿರ್ವಹಣೆ ಬಗ್ಗೆ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ ಅವರು, ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ರೈತರಿಗೆ ಭರವಸೆ ತುಂಬುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಜಾನುವಾರು ಸಂತೆಗೆ ತೆರಳಿ ರೈತರು ಹತಾಶೆಯಾಗಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಗಮನಿಸಿ ಎಂದು ಹೇಳಿದ ಅವರು, ‘ತಾಲ್ಲೂಕಿಗೆ ಒಂದರಂತೆ ಮೇವು ಬ್ಯಾಂಕ್‌ ಸ್ಥಾಪನೆ ಮಾಡಲು ಹೇಳಿದರು.

ಆಯಾ ಮೇವು ಬ್ಯಾಂಕ್‌ನಲ್ಲಿ 10 ಟನ್‌ಷ್ಟು ಮೇವು ಸಂಗ್ರಹಿಸಿ ಇಡಿ. ಸರ್ಕಾರ ನಿಗದಿಪಡಿಸಿದ ರಿಯಾಯಿತಿ ಬೆಲೆಯಲ್ಲಿ ಅವಶ್ಯವಿರುವ ರೈತರಿಗೆ ಮೇವು ಮಾರಾಟ ಮಾಡುವಂತೆ ಹೇಳಿದರು.

ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ವಿ.ಕೆ.ಕೋವಳ್ಳಿ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 5.14 ಲಕ್ಷ ರಾಸುಗಳಿವೆ. ಈಗ ಲಭ್ಯವಿರುವ ಒಣ ಮೇವು ಮುಂದಿನ 21 ವಾರಗಳಿಗೆ ಸಾಕಾಗಲಿದೆ. ಜಮಖಂಡಿ, ಮುಧೋಳ ತಾಲ್ಲೂಕುಗಳಲ್ಲಿ ಈಗಾಗಲೇ ಕಬ್ಬು ಕಟಾವು ಆರಂಭವಾಗಿದ್ದು, ಕಬ್ಬಿನ ಸೊಗೆಯ (ಮೇವು) ಸೇರು ಜಾನುವಾರುಗಳಿಗೆ ನೆರವಾಗಲಿದೆ. ಒಣ ಬೇಸಾಯದ ತಾಲ್ಲೂಕುಗಳಾದ ಬಾದಾಮಿ, ಬಾಗಲಕೋಟೆ, ಹುನಗುಂದಕ್ಕೆ ಸದ್ಯಕ್ಕೆ ತೊಂದರೆ ಇಲ್ಲ’ ಎಂದರು.

‘ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 19,717 ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಲಾಗಿದೆ. ಒಂದು ಪೊಟ್ಟಣದಿಂದ ಐದು ಮೆಟ್ರಿಕ್ ಟನ್ ನಂತೆ ಒಟ್ಟು 98,585 ಮೆಟ್ರಿಕ್ ಟನ್ ಮೇವು ಉತ್ಪಾದನೆಯಾಗಿ ಜಿಲ್ಲೆಯ ಪ್ರತಿ ಜಾನುವಾರುಗಳಿಗೆ ದಿನಕ್ಕೆ 15 ರಿಂದ 20 ಕೆ.ಜಿ ಹಸಿ ಮೇವು ದೊರೆಯಲಿದೆ. ಅದು ಎರಡು ವಾರಗಳಿಗೆ ಸಾಕಾಗಲಿದೆ’ ಎಂದರು.

ಸಭೆಯಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಆರ್.ಎಸ್.ಪದರಾ, ಡಾ. ಶ್ರೀಕಾಂತ ಸಬನೀಸ್, ಡಾ. ಎಚ್.ಎಸ್.ಅಂಗಡಿ, ಡಾ. ಸುಬ್ರಮಣ್ಯ ಹೆಗಡೆ, ಡಾ. ಗೋವಿಂದ ರಾಠೋಡ, ಡಾ. ಎಸ್.ಡಿ.ಆವಟಿ, ಡಾ.ಶಂಕರಗೌಡ ಪಾಟೀಲ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು