ಭಾನುವಾರ, ಡಿಸೆಂಬರ್ 8, 2019
25 °C
ಭಾರತೀಯ ದಲಿತ ಸೇನೆ ರಾಜ್ಯ ಘಟಕದ ಸಂಚಾಲಕ ನಾರಾಯಣಸ್ವಾಮಿ ಆಗ್ರಹ

ರಮೇಶ್‌ಕುಮಾರ್ ಪಾಳೆಗಾರ ಹೇಳಿಕೆ ನಿಲ್ಲಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಪಾಳೆಗಾರರಂತೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದು ಭಾರತೀಯ ದಲಿತ ಸೇನೆ ರಾಜ್ಯ ಘಟಕದ ಸಂಚಾಲಕ ನಾರಾಯಣಸ್ವಾಮಿ ಆಗ್ರಹಿಸಿದರು.

ಭಾರತೀಯ ದಲಿತ ಸೇನೆ ವತಿಯಿಂದ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿ, ‘ದಲಿತ ಜನಪ್ರತಿನಿಧಿಗಳು ಸಂವಿಧಾನವನ್ನು ಬದನೆಕಾಯಿ ಮಾಡಿಕೊಂಡಿದ್ದಾರೆ ಎಂದು ರಮೇಶ್‌ಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಈ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ’ ಎಂದು ಕಿಡಿಕಾರಿದರು.

‘ಶಾಶ್ವತ ನೀರಾವರಿ ಯೋಜನೆಗಾಗಿ ನಗರದಲ್ಲಿ ಸುಮಾರು ಒಂದು ವರ್ಷ ನಿರಂತರ ಧರಣಿ ನಡೆಸಲಾಯಿತು. ಒಂದು ದಿನಕ್ಕೂ ನೀರಾವರಿ ಹೋರಾಟಗಾರರ ಸಮಸ್ಯೆ ಆಲಿಸದ ರಮೇಶ್‌ಕುಮಾರ್ ಬೆಂಗಳೂರಿನ ಕೊಳಚೆ ನೀರು ತಂದು ಜಿಲ್ಲೆಗೆ ಬಿಡುತ್ತಿದ್ದಾರೆ. ಈ ಕೊಳಚೆ ನೀರಿನಿಂದ ಜಿಲ್ಲೆಯ ಕೆರೆಗಳು ಹಾಳಾಗಿ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಮಿಷನ್‌ ದಂಧೆ: ‘ಕೆ.ಸಿ ವ್ಯಾಲಿ ಯೋಜನೆಯು ಕೆಲ ರಾಜಕಾರಣಿಗಳು ಹಣ ಮಾಡಿಕೊಳ್ಳಲು ರೂಪಿಸಿದ ಯೋಜನೆ. ಈ ಯೋಜನೆಯಲ್ಲಿ ಕೆಲವರು ಕಮಿಷನ್ ದಂಧೆ ನಡೆಸಿದ್ದಾರೆ. ವಿವಿಧ ವಸತಿ ಯೋಜನೆಗಳಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಮನೆಗಳು ಕಳಪೆಯಾಗಿವೆ’ ಎಂದು ಆರೋಪಿಸಿದರು.

‘ಮನೆಗಳ ಕಳಪೆ ಕಾಮಗಾರಿ ಅಕ್ರಮದಿಂದ ಬಂದ ಹಣದಲ್ಲಿ ರಾಜಕಾರಣಿಗಳು ಬೆಂಗಳೂರಿನಲ್ಲಿ ದೊಡ್ಡ ಬಂಗಲೆ ಕಟ್ಟಿಕೊಳ್ಳುತ್ತಾರೆ. ಆದರೆ, ದಲಿತರು ಕೊಳೆಗೇರಿಗಳ ಗುಡಿಸಲಲ್ಲಿ ವಾಸಿಸುವ ಪರಿಸ್ಥಿತಿ ಇದೆ. ಇಂತಹ ಭ್ರಷ್ಟರು ನಮಗೆ ಸಂವಿಧಾನದ ಪಾಠ ಹೇಳುತ್ತಾರೆ’ ಎಂದು ಟೀಕಿಸಿದರು.

ಕ್ಷಮೆ ಯಾಚಿಸಬೇಕು: ‘ರಮೇಶ್‌ಕುಮಾರ್‌ ಜಿಲ್ಲಾ ಕೇಂದ್ರದ ಕಾರ್ಯಕ್ರಮವೊಂದರಲ್ಲಿ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಕೋಲಾರದ ಕಡೆ ಬರಲು ಬಿಡುವುದಿಲ್ಲ’ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಜಿಲ್ಲಾ ಸಂಚಾಲಕ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

‘ದೇಶದಲ್ಲಿ ಕೋಮುವಾದಿಗಳು ಸಂವಿಧಾನ ಸುಡುವ ಮಾತನಾಡುತ್ತಾರೆ. ಆದರೆ, ದಲಿತರು ಅದಕ್ಕೆ ಅವಕಾಶ ಕೊಡುವುದಿಲ್ಲ. ಸಂವಿಧಾನ ಸುಡಲು ಪ್ರಯತ್ನಿಸಿದರೆ ರಕ್ತದೋಕುಳಿ ಆಗುತ್ತದೆ. ದಲಿತರು ಮತ್ತು ಅಲ್ಪಸಂಖ್ಯಾತರು ತಿನ್ನುವ ಆಹಾರದ ಮೇಲೂ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ತಿನ್ನಬೇಕು ಅಥವಾ ಇದನ್ನು ತಿನ್ನಬಾರದು ಎಂದು ಫರ್ಮಾನು ಹೊರಡಿಸುವುದಕ್ಕೆ ಇವರು ಯಾರು?’ ಎಂದು ಪ್ರಶ್ನಿಸಿದರು.

‘ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಹ ಶೋಷಣೆಗೆ ಒಳಗಾಗಿದ್ದರು. ಅವರು ಇದನ್ನು ಸವಾಲಾಗಿ ಸ್ವೀಕರಿಸಿ ಸಮಾನತೆಗಾಗಿ ಹೋರಾಟ ನಡೆಸಿದರು. ಶೋಷಿತ ಸಮಾಜಗಳಿಗೆ ಸಮಾನತೆ ಕಲ್ಪಿಸುವ ಉದ್ದೇಶದಿಂದ ಮೀಸಲಾತಿ ಒದಗಿಸಿಕೊಟ್ಟರು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು