ಶನಿವಾರ, ಡಿಸೆಂಬರ್ 7, 2019
21 °C
ಬಿ.ಜಿ.ಎಸ್ ವಿಜ್ಞಾನ ಅಕಾಡೆಮಿ ಮತ್ತು ಪದವಿ ಪೂರ್ವ ಕಾಲೇಜು ಸಹಯೋಗದ ‘ಸಂಭ್ರಮ’ ಕಾಲೇಜು ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸಲಹೆ

ಪ್ರಾರ್ಥನೆ ಮೂಲಕ ತಪ್ಪು ತಿದ್ದಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ನಿತ್ಯ ದೇವರನ್ನು ಪ್ರಾರ್ಥಿಸಿದಷ್ಟೇ ತಮಗಾಗಿ ಸ್ವಯಂ ಶಿಸ್ತಿನ ಪ್ರಾರ್ಥನೆ ಮಾಡಬೇಕು. ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಅಗಲಗುರ್ಕಿ ಬಳಿ ಇರುವ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ಶುಕ್ರವಾರ ಬಿ.ಜಿ.ಎಸ್ ವಿಜ್ಞಾನ ಅಕಾಡೆಮಿ ಮತ್ತು ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ‘ಸಂಭ್ರಮ’ ಕಾಲೇಜು ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳುವ ಜತೆಗೆ ಪ್ರತಿ ದಿನ ಪ್ರಾರ್ಥನೆಯ ಮುಖಾಂತರ ನಮ್ಮ ತಪ್ಪುಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು. ಬಲವಾದ ಸಮಸ್ಯೆಗಳು ವ್ಯಕ್ತಿಯನ್ನು ಜೀವನದಲ್ಲಿ ಬಲಿಷ್ಠನನ್ನಾಗಿ ಮಾಡುತ್ತವೆ. ಆದ್ದರಿಂದ ಸಣ್ಣಪುಟ್ಟದಕ್ಕೆಲ್ಲ ಅಂಜಬಾರದು. ಸವಾಲುಗಳಿಗೆ ಸಜ್ಜಾಗುವುದು ಜೀವನದ ನಿರಂತರ ಪ್ರಕ್ರಿಯೆ ಎಂಬುದು ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ತರಗತಿ, ಪಾಠದಾಚೆಗೂ ವ್ಯಕ್ತಿತ್ವ ವಿಕಸನಕ್ಕೆ ಸಾಕಷ್ಟು ಅವಕಾಶಗಳಿವೆ. ಜ್ಞಾನ ಭಂಡಾರದಂತಿರುವ ಗ್ರಂಥಾಲಯಕ್ಕೆ ನಿಯಮಿತವಾಗಿ ಹೋಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅತಿ ಮುಖ್ಯ. ಪುಸ್ತಕ ಓದುವ ಅಭಿರುಚಿ ಮನೋವಿಕಾಸಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

‘ತಂತ್ರಜ್ಞಾನದ ಈ ಯುಗದಲ್ಲಿ ಮೌಲ್ಯಗಳು ಕುಸಿತಗೊಳ್ಳುತ್ತಿವೆ. ಇದು ಕಳವಳದ ವಿಚಾರ. ಸಾಮಾನ್ಯ ಕೆಲಸ, ಚಿಂತನೆಗಳಿಂದ ಸಮಾಜ ಮುಂದಕ್ಕೆ ಹೋಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಎಲ್ಲರಿಗಿಂತಲೂ ಭಿನ್ನವಾಗಿ ಆಲೋಚಿಸುವ ಗುಣ ಬೆಳೆಸಿಕೊಳ್ಳಬೇಕು. ಯುವ ಜನರ ಕನಸಿಗೆ ಗಡಿ ಇಲ್ಲ. ಅವರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ’ ಎಂದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ‘ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದ ಪ್ರತಿ ನಿಮಿಷವನ್ನು ಸಂಭ್ರಮಿಸಬೇಕು. ವಿದ್ಯೆಯಷ್ಟೇ ಆರೋಗ್ಯ, ಸಂತಸಕ್ಕೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕಾಲೇಜಿನಲ್ಲಿ ವರ್ಷಪೂರ್ತಿ ಈ ಬಗೆಯ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆ (ಎಸ್‌ಜೆಸಿಐಟಿ) ಪ್ರಾಂಶುಪಾಲ ಕೆ.ಎಂ.ರವಿಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಶೇ 10 ರಷ್ಟು ಮಾತ್ರ ತಮ್ಮ ಮೆದುಳಿನ ಸಾಮರ್ಥ್ಯ ಉಪಯೋಗಿಸಿಕೊಳ್ಳುತ್ತಿದ್ದಾರೆ. ಉಳಿದ ಶೇ 90 ಮೆದುಳಿನ ಶಕ್ತಿಯನ್ನು ಅನಗತ್ಯ ವಿಚಾರಗಳಲ್ಲಿ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನಾರ್ಜನೆಯೇ ಮುಖ್ಯ ಗುರಿಯಾಗಿರಬೇಕು’ ಎಂದು ತಿಳಿಸಿದರು.

ಪ್ರತಿಭಾವಂತ 30 ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಿ.ಜಿ.ಎಸ್ ವಿಜ್ಞಾನ ಅಕಾಡೆಮಿಯ ಉಪ ಪ್ರಾಂಶುಪಾಲೆ ಜ್ಯೋತಿ ಕಿರಣ್ ಅವರು ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಪ್ರಾಂಶುಪಾಲ ಎನ್. ಮಧುಸೂಧನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಬಿ. ರಮೇಶ್, ಉಪಪ್ರಾಂಶುಪಾಲ ಚಂದ್ರಮೋಹನ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು