ಅಂಗವಿಕಲರಿಗೆ ಸಮನ್ವಯ ಶಿಕ್ಷಣ ಕಲ್ಪಿಸಿ

7

ಅಂಗವಿಕಲರಿಗೆ ಸಮನ್ವಯ ಶಿಕ್ಷಣ ಕಲ್ಪಿಸಿ

Published:
Updated:
Deccan Herald

ಕೋಲಾರ: ‘ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲು ಅವರಿಗೆ ಸಮನ್ವಯ ಶಿಕ್ಷಣದ ಜತೆ ಕಲಿಕೆಗೆ ವಿಶೇಷ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಸ್.ಮಮದಾಪುರ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅಂತರಗಂಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅಂಗವಿಕಲರು ಶಿಕ್ಷಣದಿಂದ ವಂಚಿತರಾಗದಂತೆ ಸಮಾಜ ಎಚ್ಚರ ವಹಿಸಬೇಕು. ಅವರ ಸಮನ್ವಯ ಶಿಕ್ಷಣ ಅಂಗನವಾಡಿಯಿಂದ ಆರಂಭವಾಗಬೇಕು. ಶಾಲೆಗಳಲ್ಲಿ ಅಂಗವಿಕಲ ಮಕ್ಕಳ ಕಲಿಕೆಗೆ ವಿಶೇಷ ಅವಕಾಶ ಕಲ್ಪಿಸಬೇಕು. ಉನ್ನತ ಶಿಕ್ಷಣದಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಮೀಸಲಾತಿ ಸೌಲಭ್ಯ ನೀಡಬೇಕು’ ಎಂದು ಸಲಹೆ ನೀಡಿದರು.

‘ಅನೇಕ ಅಂಗವಿಕಲರು ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಅಂಗವಿಕಲರು ಕೀಳರಿಮೆ ಬಿಟ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಅಂಗವಿಕಲರು ಯಾರಿಗೂ ಕಡಿಮೆಯಿಲ್ಲ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ’ ಎಂದು ಕಿವಿಮಾತು ಹೇಳಿದರು.

ಕಾನೂನು ಸೇವೆ: ‘ಹಣಕಾಸು ಹಾಗೂ ಆಸ್ತಿ ವಿಚಾರದಲ್ಲಿ ವಂಚನೆಗೊಳಗಾದ ಅಂಗವಿಕಲರಿಗೆ ಉಚಿತ ಕಾನೂನು ಸೇವೆ ನೀಡಲು ಅವಕಾಶವಿದೆ. ಶೋಷಿತ ಅಂಗವಿಕಲರು ಈ ಸೇವೆ ಪಡೆಯಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್ ತಿಳಿಸಿದರು.

‘ಪ್ರಾಧಿಕಾರದಿಂದ ಅಂಗವಿಕಲರಿಗೆ ಉಚಿತವಾಗಿ ಕಾನೂನು ನೆರವು ಸಿಗಲಿದೆ. ಇದಕ್ಕಾಗಿ ಪ್ರಾಧಿಕಾರ ಸಂಪರ್ಕಿಸಿ. ಶೋಷಣೆ ಮೆಟ್ಟಿನಿಂತು ಸಾಧನೆ ಮಾಡುವ ಛಲ ಮೂಡಬೇಕು’ ಎಂದು ಹೇಳಿದರು.

ಹಣಕಾಸು ನೆರವು: ‘ಅಂತರಗಂಗಾ ಬುದ್ಧಿಮಾಂದ್ಯ ವಸತಿ ಶಾಲೆಯ ಅಂದ ಮಕ್ಕಳ ಶಸ್ತ್ರಚಿಕಿತ್ಸೆಗೆ ಹಣಕಾಸು ನೆರವು ನೀಡುತ್ತೇನೆ. ಅಂಗವಿಕಲರು ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿರುವುದನ್ನು ಕಾಣಬಹುದು. ಇದಕ್ಕೆ ಛಲ ಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್ ತಿಳಿಸಿದರು.

ವಕೀಲ ಕೆ.ಆರ್.ಧನರಾಜ್, ಅಂತರಗಂಗಾ ಬುದ್ಧಿಮಾಂದ್ಯ ಮಕ್ಕಳ ಶಾಲೆ ಕಾರ್ಯದರ್ಶಿ ಕೆ.ಎಸ್.ಶಂಕರ್‌, ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣಾಧಿಕಾರಿ ಎಂ.ವೆಂಕಟರಾಮಪ್ಪ, ವಕೀಲ ಗೋಪಾಲರೆಡ್ಡಿ, ಜಾಗೃತಿ ಸೇವಾ ಸಂಸ್ಥೆ ಕಾರ್ಯದರ್ಶಿ ಕವಿತಾ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !