ಪಿಡಿಒ ಮೇಲೆ ಹಲ್ಲೆ ಆರೋಪ: ಧರಣಿ

ಕೋಲಾರ: ತಾಲ್ಲೂಕಿನ ಮುದುವತ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ್ ಅವರ ಮೇಲೆ ಗ್ರಾ.ಪಂ ಅಧ್ಯಕ್ಷೆಯ ಪತಿ ರಮೇಶ್ ಹಲ್ಲೆ ನಡೆಸಿದ್ದು, ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ಶುಕ್ರವಾರ ಧರಣೆ ನಡೆಸಿದರು.
‘ಗ್ರಾ.ಪಂ ವ್ಯಾಪ್ತಿಯ ಚಿನ್ನಾಪುರ ಗ್ರಾಮದಲ್ಲಿ ಆಯೋಜನೆಯಾಗಿದ್ದ ವಾರ್ಡ್ ಸಭೆಯಲ್ಲಿ ರಮೇಶ್ ಪಿಡಿಒ ಮೇಲೆ ಹಲ್ಲೆ ನಡೆಸಿದ್ದಾರೆ. 14ನೇ ಹಣಕಾಸು ಯೋಜನೆಯಡಿ ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸಿರುವ ಕಾರಣಕ್ಕೆ ಪಿಡಿಒ ಬಿಲ್ ಮಂಜೂರು ಮಾಡಿಲ್ಲ. ಇದರಿಂದ ಕೋಪಗೊಂಡು ರಮೇಶ್ ಪಿಡಿಒ ಮೇಲೆ ದೌರ್ಜನ್ಯ ಎಸಗಿದ್ದಾರೆ’ ಎಂದು ಧರಣಿನಿರತರು ದೂರಿದರು.
‘ರಮೇಶ್ರ ಪತ್ನಿ ಗ್ರಾ.ಪಂ ಅಧ್ಯಕ್ಷೆಯಾಗಿದ್ದಾರೆ. ಆದರೆ, ಅವರ ಬದಲು ರಮೇಶ್ ಅಧಿಕಾರ ಚಲಾಯಿಸುತ್ತಿದ್ದಾರೆ. ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಅವರು ಗ್ರಾ.ಪಂಯ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಗ್ರಾ.ಪಂ ಸದಸ್ಯ ಎಸ್.ವಿ.ಮಂಜುನಾಥ್ ಆರೋಪಿಸಿದರು.
‘ಅಧ್ಯಕ್ಷರ ಪತಿ ಎಂಬ ಕಾರಣಕ್ಕೆ ರಮೇಶ್ ಪಂಚಾಯಿತಿಯಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಶೋಷಿಸುತ್ತಿದ್ದಾರೆ. ಪಿಡಿಒಗೆ ಪ್ರಾಣ ಬೆದರಿಕೆ ಸಹ ಹಾಕಿದ್ದಾರೆ. ಅವರನ್ನು ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.
ಗ್ರಾ.ಪಂ ಸದಸ್ಯರಾದ ವಿ.ವೆಂಕಟರಾಮಪ್ಪ, ಮುನಿವೆಂಕಟಪ್ಪ, ಮುನಿಸ್ವಾಮಿ, ಗ್ರಾಮಸ್ಥರಾದ ನಾಗರಾಜು, ಹನುಮಪ್ಪ, ಕೃಷ್ಣಪ್ಪ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.