ಅಲ್ಪಸಂಖ್ಯಾತರ ಸಾಕ್ಷರತೆ ವರದಿ ಸಲ್ಲಿಸಿ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

ಅಲ್ಪಸಂಖ್ಯಾತರ ಸಾಕ್ಷರತೆ ವರದಿ ಸಲ್ಲಿಸಿ

Published:
Updated:
Deccan Herald

ಕೋಲಾರ: ‘ಶೇ 25ಕ್ಕಿಂತ ಹೆಚ್ಚಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿನ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸೂಚಿಸಿದರು.

ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಹಾಗೂ ಸಾಕ್ಷರತೆ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಮುಸ್ಲಿಂ, ಕ್ರೈಸ್ತ, ಸಿಖ್, ಬುದ್ಧ ಮತ್ತು ಪಾರ್ಸಿ ಸಮುದಾಯವರಿಗೆ ವಿಶೇಷವಾಗಿ ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಈ ಕಾರ್ಯಕ್ರಮದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಪುರುಷರು ಹಾಗೂ ಮಹಿಳೆಯರು ಎಷ್ಟಿದ್ದಾರೆ. ಅವರ ಸಾಕ್ಷರತೆ ಪ್ರಮಾಣದ ಸಂಬಂಧ ಮುಂದಿನ ಸಭೆಯಲ್ಲಿ ಪ್ರತ್ಯೇಕ ವರದಿ ಸಲ್ಲಿಸಿ. ಜಿಲ್ಲೆಯಲ್ಲಿ ಒಟ್ಟಾರೆ 2.36 ಲಕ್ಷ ವಿದ್ಯಾರ್ಥಿಗಳಿದ್ದು, ಇವರಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೆಷ್ಟು ಎಂಬ ಮಾಹಿತಿ ನೀಡಬೇಕು’ ಎಂದರು.

‘ಅಲ್ಪಸಂಖ್ಯಾತರ ನಿಗಮದಿಂದ ನೀಡುವ ಎಲ್ಲಾ ರೀತಿಯ ಸಾಲ ಸೌಲಭ್ಯಗಳು ಸಮರ್ಪಕವಾಗಿ ವಿತರಣೆ ಆಗಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಇರುವ ಸೌಲಭ್ಯಗಳ ಕುರಿತು ಮೊದಲೇ ಮಾಹಿತಿ ನೀಡಿದ್ದರೆ ಟಿಪ್ಪು ಜಯಂತಿ ಹಾಗೂ ಈದ್ ಮಿಲಾದ್‌ ಪ್ರಚಾರ ಮಾಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಅತಿಥಿ ಶಿಕ್ಷಕರು: ‘ಜಿಲ್ಲೆಯ 533 ಶಾಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಶಾಲೆಗಳಲ್ಲಿ 63 ಶಿಕ್ಷಕರ ಹುದ್ದೆ ಖಾಲಿ ಇದ್ದವು. ಆ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ’ ಎಂದು ಸಾರ್ವಜನಿಕರ ಶಿಕ್ಷಣ ಇಲಾಖೆ ಎಸಿಒ ಸಿರಾಜುದ್ದೀನ್ ಮಾಹಿತಿ ನೀಡಿದರು.

‘2017–18ನೇ ಸಾಲಿನಲ್ಲಿ 17,440 ಮಂದಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. 2018–19ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ನಲ್ಲಿ 26 ಸಾವಿರ ಅರ್ಜಿ ಸಲ್ಲಿಕೆಯಾಗಿವೆ’ ಎಂದು ವಿವರಿಸಿದರು.

19,532 ಮಕ್ಕಳು: ‘ಜಿಲ್ಲೆಯಲ್ಲಿ 2,061 ಅಂಗನವಾಡಿ ಕೇಂದ್ರಗಳಿದ್ದು, 19,532 ಮಂದಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿದ್ದಾರೆ. ಇವರಿಗೆ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಅಲ್ಪಸಂಖ್ಯಾತ ಸಮುದಾಯದ ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆ ಸೇವೆ ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.

ಮೇವಿನ ಸಮಸ್ಯೆ: ‘ಬೇಸಿಗೆಯಲ್ಲಿ ಮೇವಿನ ಸಮಸ್ಯೆ ಎದುರಾಗಬಹುದು. ಆದ ಕಾರಣ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಮೇವು ವಿತರಣೆ ಕೇಂದ್ರ ಆರಂಭಕ್ಕೆ ಸ್ಥಳ ಗುರುತಿಸಿ. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಪರಿಹಾರಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ’ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೈಲೇರಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !