ಗರಿಷ್ಠ ಉದ್ದಿಮೆ ಆರಂಭಕ್ಕೆ ಸೂಚನೆ

7
ಟೊಮೆಟೊ ಸಮಗ್ರ ಅಭಿವೃದ್ಧಿ ಯೋಜನೆಗೆ ಅವಿಭಜಿತ ಕೋಲಾರ ಜಿಲ್ಲೆ ಆಯ್ಕೆ

ಗರಿಷ್ಠ ಉದ್ದಿಮೆ ಆರಂಭಕ್ಕೆ ಸೂಚನೆ

Published:
Updated:
Deccan Herald

ಕೋಲಾರ: ‘ಕೇಂದ್ರ ಸರ್ಕಾರ ಪ್ರಾಯೋಜಿತ ಟೊಮೆಟೊ ಸಮಗ್ರ ಅಭಿವೃದ್ಧಿ ಯೋಜನೆಯಡಿ ಹಸಿರು ಕಾರ್ಯಾಚರಣೆಯ ಸಮರ್ಪಕ ಜಾರಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರಿಷ್ಠ ಉದ್ದಿಮೆ ಆರಂಭಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ (ವಾಣಿಜ್ಯ ಮತ್ತು ಅಭಿವೃದ್ಧಿ) ಎನ್‌.ಅಂಬಿಕಾ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ತೋಟಗಾರಿಕಾ ಬೆಳೆಗಳಿಗೆ ವಿಶ್ವ ವಿಖ್ಯಾತಿ ಪಡೆದಿವೆ. ಹೀಗಾಗಿ ಕೇಂದ್ರವು ಟೊಮೆಟೊ ಸಮಗ್ರ ಅಭಿವೃದ್ಧಿ ಪ್ರಾಯೋಗಿಕ ಯೋಜನೆಗೆ ಅವಳಿ ಜಿಲ್ಲೆಗಳನ್ನು ಆಯ್ಕೆ ಮಾಡಿದೆ’ ಎಂದರು.

‘ಬಹುತೇಕ ಸಂದರ್ಭದಲ್ಲಿ ಬೆಲೆ ಕುಸಿತದ ಕಾರಣಕ್ಕೆ ಟೊಮೆಟೊ ಬೆಳೆಗಾರರು ಟೊಮೆಟೊ ಬೀದಿಗೆ ಚೆಲ್ಲುವ ಪರಿಸ್ಥಿತಿಯಿದೆ. ಆದ ಕಾರಣ ಅಧಿಕಾರಿಗಳು ಯೋಜನೆ ಸದ್ಬಳಕೆ ಮಾಡಿಕೊಂಡು ಟೊಮೆಟೊ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಟೊಮೆಟೊ ಸಂಸ್ಕರಣೆ ಜತೆಗೆ ಇದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಉದ್ದಿಮೆ ಸ್ಥಾಪಿಸಲು ಅವಕಾಶವಿದೆ. ರೈತರು ಮತ್ತು ಖಾಸಗಿ ಉದ್ದಿಮೆದಾರರಿಗೆ ಶೇ 50ರಷ್ಟು ಸಹಾಯಧನವಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಶೇ 70 ಪ್ರೋತ್ಸಾಹಧನವಿದ್ದು, ಅಧಿಕಾರಿಗಳು ಈ ಬಗ್ಗೆ ಉದ್ದಿಮೆದಾರರಿಗೆ ಮಾಹಿತಿ ನೀಡಬೇಕು. ಅವಳಿ ಜಿಲ್ಲೆಗಳಲ್ಲಿ ಕನಿಷ್ಠ 10 ಘಟಕ ಆರಂಭಿಸಬೇಕು’ ಎಂದು ತೋಟಗಾರಿಕಾ ಇಲಾಖೆ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಎಂ.ವಿಶ್ವನಾಥ್ ತಿಳಿಸಿದರು.

ಯೋಜನೆ ವರದಾನ: ‘ಬರಪೀಡಿತ ಅವಳಿ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ ಈ ಯೋಜನೆ ವರದಾನವಾಗಿದ್ದು, ಯೋಜನೆಯ ಗರಿಷ್ಠ ಸಹಾಯಧನ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿದು ಬರುವಂತೆ ಅಧಿಕಾರಿಗಳು ಹಾಗೂ ಉದ್ದಿಮೆದಾರರು ಕ್ರಮ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಸಲಹೆ ನೀಡಿದರು.

ವಿದ್ಯಾರ್ಥಿಗಳ ಸಂಶೋಧನೆ: ಕೋಲಾರದ ಚಿನ್ಮಯ ಶಾಲೆ ವಿದ್ಯಾರ್ಥಿಗಳಾದ ಶ್ರೀಷ ಮತ್ತು -ಅಗಸ್ತ್ಯ ಅವರು ಟೊಮೆಟೊ ಬೆಳೆ ಕುರಿತು ನಡೆಸಿರುವ ಸಂಶೋಧನೆಗೆ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಂಬಿಕಾ ಹಾಗೂ ಅಧಿಕಾರಿಗಳು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಟೊಮೆಟೊದಲ್ಲಿನ ಲೈಕೊಪಿನ್ ಅಂಶವನ್ನು ಹಣ್ಣಿನಿಂದ ಬೇರ್ಪಡಿಸಿ ಸಂಸ್ಕರಣೆ ಮಾಡಿ ಜಾನುವಾರುಗಳಿಗೆ ನೀಡಿದರೆ ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚುತ್ತದೆ ಎಂದು ವಿದ್ಯಾರ್ಥಿಗಳು ಸಭೆಗೆ ಮಾಹಿತಿ ನೀಡಿದರು. ಇವರ ಸಂಶೋಧನಾ ಪ್ರಬಂಧದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದ ಅಧಿಕಾರಿಗಳು ಈ ವಿಷಯವನ್ನು ಸರ್ಕಾರದ ಮಟ್ಟದ ಸಭೆಯಲ್ಲಿ ಚರ್ಚಿಸಿ ಎಲ್ಲಾ ರೈತರಿಗೆ ಸಂಶೋಧನೆಯ ಲಾಭ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್, ಜಿ.ಪಂ ಸದಸ್ಯ ಅರವಿಂದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಎಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !