ಶನಿವಾರ, ಡಿಸೆಂಬರ್ 7, 2019
21 °C
ಅಂಬೇಡ್ಕರ್ ಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಕಳವಳ

ಗೂಳಿಯಂತ ರಾಜಕಾರಣಿಗಳಿಂದ ರಾಜಕಾರಣಕ್ಕೆ ದುರ್ಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ನಮ್ಮ ಸುತ್ತಲೂ ಆಕ್ರಮಿಸಿಕೊಂಡಿರುವ ಗೂಳಿಯಂತಹ ರಾಜಕಾರಣಿಗಳಿಂದ ಇವತ್ತಿನ ರಾಜಕಾರಣಕ್ಕೆ ದುರ್ಗತಿ ಬಂದಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶುಕ್ರವಾರ ನಡೆದ ಅಂಬೇಡ್ಕರ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗೂಳಿಗಳಂತೆ ದಾಳಿ ಮಾಡುವವರ ಕೈಗೆ ಅಧಿಕಾರ ಕೊಡಬೇಡಿ. ಎತ್ತು ಸಾಕುವುದರಿಂದ ಅನುಕೂಲ. ಆದರೆ, ಗೂಳಿ ಪೋಷಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಪರೋಕ್ಷವಾಗಿ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

‘ಸ್ವಾರ್ಥಿಗಳನ್ನು ರಾಜಕೀಯದಲ್ಲಿ ಉಳಿಸಬೇಡಿ. ಯೋಗ್ಯತೆ ಇಲ್ಲದವರು ರಾಜಕೀಯದಲ್ಲಿ ಇರಬಾರದು. ಬೇರೆಯವರನ್ನು ನಿಕೃಷ್ಟವಾಗಿ ಕಾಣುವ ಇವರು ರಾಜಕಾರಣವನ್ನು ವಂಶಪಾರಂಪರ್ಯ ಎಂದು ನಿರ್ಧರಿಸಿಕೊಂಡಿದ್ದಾರೆ. ಸಿನಿಮಾ, ರಾಜಕೀಯ ಕ್ಷೇತ್ರ ಎಲ್ಲಿಯೇ ಕಾಲಿಟ್ಟರೂ ಇದೊಂದು ದೊಡ್ಡ ಗೋಳಾಗಿದೆ’ ಎಂದು ವಿಷಾದಿಸಿದರು.

‘ಚುನಾವಣೆಯಲ್ಲಿ ಮತ ಹಾಕುವುದು ಮತದಾರರ ಖುಷಿ. ಯಾರಿಗೆ ಬೇಕಾದರೂ ಮತ ಹಾಕಿಕೊಳ್ಳಿ. ಯಾವ ಪಕ್ಷದಲ್ಲಿ ಬೇಕಾದರೂ ರಾಜಕಾರಣ ಮಾಡಿಕೊಳ್ಳಿ. ಅದಕ್ಕೆ ಅಭ್ಯಂತರವಿಲ್ಲ. ಆದರೆ, ಸಾಮಾಜಿಕ ಗೌರವ, ಗ್ರಾಮದ ಅಭಿವೃದ್ಧಿ, ಅನ್ಯಾಯ ಮಾಡುವವರು, ಜನರಿಗೆ ಮೋಸ ಮಾಡಿ ಎಲ್ಲಾ ಸ್ಥಾನಮಾನ ತನ್ನ ಮಕ್ಕಳು ಮತ್ತು ಸಂಬಂಧಿಕರಿಗೆ ಬೇಕೆನ್ನುವ ಸ್ವಾರ್ಥಿಗಳಿಗೆ ಕಡಿವಾಣ ಹಾಕಿ’ ಎಂದು ಕಿವಿಮಾತು ಹೇಳಿದರು.

ದೊಡ್ಡ ಅಪಾಯ: ‘ಜಾತಿಯ ಹೆಸರಿನಲ್ಲಿ ಜನರನ್ನು ಗುದ್ದಲು ಗೂಳಿಗಳು ತಯಾರಾಗಿವೆ. ಈ ಗೂಳಿಗಳು ಸಿಕ್ಕ ಸಿಕ್ಕವರನ್ನು ತಿವಿಯುತ್ತಿವೆ. ಇವು ಆಕಳುಗಳ ಮೇಲೆ ಹಾರಿದರೆ ಪರವಾಗಿಲ್ಲ. ಆದರೆ, ಎತ್ತುಗಳ ಮೇಲೂ ಸವಾರಿ ಮಾಡುತ್ತಿವೆ. ಈ ಗೂಳಿಗಳ ಕಾಳಗದಿಂದ ಇಂದಿನ ರಾಜಕೀಯ ವ್ಯವಸ್ಥೆಗೆ ದುರ್ಗತಿ ಬಂದಿದೆ’ ಎಂದು ಹೇಳಿದರು.

‘ಕೊಬ್ಬರುವ ಈ ಗೂಳಿಗಳಿಗೆ ತಮ್ಮ ಜತೆಯಲ್ಲಿ ಇರುವವರಿಗೆ ಆಹಾರ ನೀರು ಸಿಗುತ್ತಿದೆಯೇ ಅಥವಾ ಇಲ್ಲವೇ ಎಂಬ ಕನಿಷ್ಠ ಜ್ಞಾನವಿಲ್ಲ. ತಮ್ಮ ಕೊಂಬುಗಳಿಂದ ತಿವಿಯಲು ಇವು ಬೀದಿಗೆ ಬಂದಿವೆ. ಇವುಗಳಿಗೆ ಕಡಿವಾಣ ಹಾಕದಿದ್ದರೆ ಮುಂದೆ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಾರ್ಥಕ್ಕಾಗಿ ಜಾತಿ: ‘ಜಾತಿ ವ್ಯವಸ್ಥೆ ಇಂದು ಹುಟ್ಟಿಕೊಂಡಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಜಾತಿ ಕಟ್ಟಿಕೊಂಡಿದ್ದಾನೆ. ಸ್ವಾರ್ಥ ಮತ್ತು ಕಸುಬುಗಳಿಂದ ಜಾತಿ ಹುಟ್ಟಿಕೊಂಡಿತು. ಮೇಲ್ವರ್ಗದವರು ತಮ್ಮ ಮನೆಯ ಕಸ ಬಾಚಲು ಪರಿಶಿಷ್ಟರನ್ನು ಇಟ್ಟುಕೊಂಡರು. ಈ ವ್ಯವಸ್ಥೆ ಒಂದೇ ಬಾರಿಗೆ ಬದಲಾಗುವುದಿಲ್ಲ. ಅಂಬೇಡ್ಕರ್ ಜಯಂತಿಗೆ ದೊಡ್ಡ ಜಾತಿಯವರು ಬಂದ ಮಾತ್ರಕ್ಕೆ ಅವರಲ್ಲಿ ಪರಿವರ್ತನೆ ಆಗಿದೆ ಎಂದು ಅರ್ಥವಲ್ಲ’ ಎಂದರು.

‘ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರಲ್ಲಿ ಅಂಬೇಡ್ಕರ್‌ ಕಾಣಬಹುದು. ಸಿದ್ದರಾಮಯ್ಯ ಅವರಲ್ಲೂ ಅಂತಹ ಹೃದಯವಿದೆ. ಈ ಕಾರಣದಿಂದಲೇ ಅವರು ಹಸಿದವರಿಗೆ ಉಚಿತವಾಗಿ ಅಕ್ಕಿ ಕೊಟ್ಟು ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದರು. ಆದರೆ, ಹೊಟ್ಟೆ ಹಸಿವು ಗೊತ್ತಿಲ್ಲದವರು ಇದನ್ನು ವಿರೋಧಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತೊಂದರೆ ಕೊಡುತ್ತಿದ್ದರು: ‘ಅಂಬೇಡ್ಕರ್ ಜಯಂತಿಯನ್ನು ಈ ಹಿಂದೆ ಕದ್ದು ಮುಚ್ಚಿ ಮಾಡಲಾಗುತ್ತಿತ್ತು. ಜಯಂತಿ ವೇಳೆ ಕೆಲವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೊಂದರೆ ಕೊಡುತ್ತಿದ್ದರು. ಕೆಲವರು ಕಲ್ಲು ತೂರಿ ಹಿಂಸೆಗೆ ಪ್ರಚೋದನೆ ಮಾಡುತ್ತಿದ್ದರು. ಆದರೆ, ಈಗ ಅಂತಹ ವಾತಾವರಣವಿಲ್ಲ’ ಎಂದು ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ತಿರುಮಲಯ್ಯ, ಸುಗಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ದಲಿತ ಮುಖಂಡರಾದ ರಾಜಪ್ಪ, ಮುನಿಯಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು