ಬುಧವಾರ, ಡಿಸೆಂಬರ್ 11, 2019
27 °C
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಸಂಘಟನೆಗಳ ಆಕ್ರೋಶ

‘ಕಾರ್ಮಿಕರ ತುಳಿಯುವ ಹುನ್ನಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ‘ಕಾರ್ಮಿಕರ ಪರ ಕಾನೂನುಗಳನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರಮೋದಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂದು ಎ.ಐ.ಯು.ಟಿ.ಸಿ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಎನ್.ಎಸ್.ವೀರೇಶ ಆರೋಪಿಸಿದರು.

ಇಲ್ಲಿನ ಡಾ.ಅಂಬೇಡ್ಕರ ಭವನದಲ್ಲಿ ಎ.ಐ.ಟಿ.ಸಿ.ಯು, ಸಿ.ಐ.ಟಿಯು ಹಾಗೂ ಎ.ಐ.ಯು.ಟಿ.ಯು.ಸಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಜನರಿಗೆ ಅಚ್ಛೆ ದಿನ ಬರಲಿದೆ ಎಂದು ಚುನಾವಣೆಗೆ ಮುನ್ನ ಹೇಳಲಾಗಿತ್ತು. ಆದರೆ, ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದ ದೊಡ್ಡ ಉದ್ದಿಮೆದಾರರಿಗೆ ಮಾತ್ರ ಅಚ್ಛೇದಿನ ಬಂದಿದೆ’ ಎಂದು ಕುಟುಕಿದರು.

‘ದುಡಿಯುವ ವರ್ಗದ ಪರ ಇದ್ದ 44 ವಿವಿಧ ಕಾನೂನುಗಳನ್ನು ರದ್ದು ಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕಾರ್ಮಿಕರನ್ನು ನಿರ್ಗತಿಕರನ್ನಾಗಿ ಮಾಡಲು ಹುನ್ನಾರ ನಡೆಸುತ್ತಿದೆ. ನರೇಂದ್ರ ಮೋದಿ ಉದ್ಯಮಿಗಳಾದ ಅಂಬಾನಿ, ಅದಾನಿ ಬೆನ್ನಿಗೆ ನಿಂತು ಕಾರ್ಮಿಕರನ್ನು ತುಳಿಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

‘ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿ ಅಧಿಕಾರಿ ಹಿಡಿದಿದ್ದ ನರೇಂದ್ರ ಮೋದಿ, ಐದು ವರ್ಷ ಕಳೆದರೂ 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ. ಬದಲಿಗೆ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಉದ್ಯೋಗ ಹಾಳು ಮಾಡಿದ್ದಾರೆ. ಮೋದಿಗೆ ಕೇವಲ ಮಾಲೀಕರ ಹಿತಾಸಕ್ತಿ ಮುಖ್ಯವಾಗಿದೆ ವಿನಃ ದುಡಿಯುವ ಕಾರ್ಮಿಕ ವರ್ಗ ಅಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಗತ್ಯ ವಸ್ತುಗಳ ಬೆಲೆ ಒಂದೆಡೆ ಆಕಾಶಕ್ಕೇರುತ್ತಿದೆ. ಆದರೆ ರೈತರ ಬೆಳೆಗಳಿಗೆ ಸರಿಯಾದ  ಬೆಲೆ ನೀಡಲು ಆಗಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಗ ಅಚ್ಛೇದಿನ ಬರಲಿದೆ ಎಂದು ಹೇಳುತ್ತಿದ್ದಾರೆ. ಅವರ ಮಾತಿಗೆ ಮರುಳಾಗಬೇಡಿ’ ಎಂದು ಮನವಿ ಮಾಡಿದರು.

ಕೇಂದ್ರದ ಈ ಧೋರಣೆಯಿಂದ ಬೇಸತ್ತು ಜನವರಿ 8, 9 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಎಲ್ಲರೂ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಸಿ.ಐಟಿ.ಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ನಾಡಗೌಡ ಮಾತನಾಡಿ, ‘ಕಾರ್ಮಿಕರಿಗೆ ಸೇವಾಭದ್ರತೆ ಇಲ್ಲವಾಗಿದೆ. ಇದು ದುರಾದೃಷ್ಟಕರ ಸಂಗತಿ’ ಎಂದರು.

ಎ.ಐ.ಟಿ.ಯು.ಸಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಕುಲಕರ್ಣಿ, ಎ.ಐ.ಯು.ಟಿ.ಯು,ಇ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಟಿ. ಮಲ್ಲಿಕಾರ್ಜುನ,  ಜಿಲ್ಲಾ ಕಾರ್ಯದರ್ಶಿ ವಿನಾಯಕ ದೇಸಾಯಿ ಸೇರಿದಂತೆ ಜಿಲ್ಲೆಯ ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು