ಬಜೆಟ್ನಲ್ಲಿ ಮೇಕೆದಾಟು, ಡಿಸ್ನಿಲ್ಯಾಂಡ್ ಯೋಜನೆ ಸೇರ್ಪಡೆ: ಡಿ.ಕೆ.ಶಿವಕುಮಾರ್

ಶ್ರೀರಂಗಪಟ್ಟಣ: ‘ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನೀರಾವರಿ ಇಲಾಖೆಯಿಂದ ಮೇಕೆದಾಟು ಹಾಗೂ ಡಿಸ್ನಿಲ್ಯಾಂಡ್ ಯೋಜನೆಗಳನ್ನು ಬಜೆಟ್ನಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಹೇಳಿದರು.
‘ಈ ಎರಡು ಯೋಜನೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿರುವ ಕಾರಣ ಅಧಿಕಾರಿಗಳೊಂದಿಗೆ ಎರಡು ದಿನ ಪರಿಶೀಲನೆ ನಡೆಸಿದ್ದೇನೆ. ಕೆಆರ್ಎಸ್ ಜಲಾಶಯವನ್ನು ಮುಟ್ಟದೇ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬೃಂದಾವನ ಉದ್ಯಾನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಆಧುನಿಕ ಯುಗದ ಅಭಿರುಚಿಗೆ ತಕ್ಕಂತೆ ₹ 1,500 ಕೋಟಿ ವೆಚ್ಚದಲ್ಲಿ ಮನರಂಜನಾ ಪಾರ್ಕ್ ರೂಪಿಸಲಾಗುವುದು. ಆದರೆ ಬೃಂದಾವನ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೆಆರ್ಎಸ್ ವ್ಯಾಪ್ತಿಯಲ್ಲಿ ನೀರಾವರಿ, ತೋಟಗಾರಿಕೆ, ಮೀನುಗಾರಿಕೆ, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ 336 ಎಕರೆ ಸರ್ಕಾರಿ ಜಾಗ ಲಭ್ಯ ಇದೆ. ರೈತರ ಜಮೀನು ಸ್ವಾಧೀನ ಪಡೆಸಿಕೊಳ್ಳದೇ ಇರುವ ಜಾಗದಲ್ಲೇ ಉದ್ಯಾನ ರೂಪುಗೊಳ್ಳಲಿದೆ. ಸರ್ಕಾರ ಒಂದು ರೂಪಾಯಿಯನ್ನೂ ವಿನಿಯೋಗಿಸುವುದಿಲ್ಲ. ವಿಶ್ವಮಟ್ಟದಲ್ಲಿ ಮನ್ನಣೆ ಪಡೆದಿರುವ ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲಾಗುವುದು’ ಎಂದರು.
‘ಸಿನ್ಸಿಯರ್ ಆರ್ಕಿಟೆಕ್ಟ್ ಕಂಪನಿ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿದೆ. ಯೋಜನೆ ಜಾರಿಗೂ ಮುನ್ನ ಕಾವೇರಿ ಕಣಿವೆಯ ನಾಲ್ಕೂ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಸಲಹೆ ಪಡೆಯಲಾಗುವುದು. ನೀರಾವರಿ, ಪ್ರವಾಸೋದ್ಯಮ, ವಿಮಾನ ಯಾನ, ಲೋಕೋಪಯೋಗಿ, ಸಾರಿಗೆ ಇಲಾಖೆಗಳ ಅಧಿಕಾರಿಗಳು ಯೋಜನೆ ಜಾರಿಗೆ ಶ್ರಮಿಸುವರು. ಒಂದು ಶತಮಾನದ ಗುರಿಯೊಂದಿಗೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.
ಸಂಗೀತ ಕಾರಂಜಿ ಮೇಲ್ದರ್ಜೆಗೆ: ‘ಬೃಂದಾವನ ಸಂಗೀತ ಕಾರಂಜಿಯನ್ನು ಕ್ಯಾಲಿಫೋರ್ನಿಯಾ, ಸಿಂಗಪೂರ್ ಸಂಗೀತ ಕಾರಂಜಿಯಂತೆ ಮೇಲ್ದರ್ಜೆಗೆ ಏರಿಸಲಾಗುವುದು. ಪುಟಾಣಿ ಮಕ್ಕಳಿಂದ ಹಿಡಿದ ವೃದ್ಧರವರೆಗೂ ಮನರಂಜನೆ ಸಿಗಬೇಕು. ಉದ್ಯಾನದ ನಡುವೆ ಹಂಪಿ, ಬೇಲೂರು–ಹಳೇಬೀಡು, ತಾಜ್ಮಹಲ್ ಸೇರಿದಂತೆ ಭವ್ಯ ಸ್ಮಾರಕಗಳ ಶಾಶ್ವತ ಪ್ರತಿರೂಪ ನಿರ್ಮಿಸಲಾಗುವುದು. 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯದ ಮೇಲ್ಭಾಗದಲ್ಲಿ 125 ಅಡಿ ಎತ್ತರದ ಕಾವೇರಿ ಪ್ರತಿಮೆ ಇರಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ನಿರ್ಮಿಸುವ ಯೋಚನೆಯೂ ಇದೆ. ಈ ಬಗ್ಗೆ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಕಾಮಗಾರಿಯ ಪ್ರತಿ ಹಂತದಲ್ಲೂ ತಜ್ಞರ ಮಾರ್ಗದರ್ಶನ ಪಡೆಯಲಾಗುವುದು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.