ಕನ್ನಡದ ದನಿಯಾಗಿ ಕೆಲಸ ಮಾಡಿ

7
ವಿಚಾರ ಸಂಕಿರಣದಲ್ಲಿ ಸಂಘಟನೆಗಳಿಗೆ ಸಾಹಿತಿ ರಘುನಾಥ್ ಕಿವಿಮಾತು

ಕನ್ನಡದ ದನಿಯಾಗಿ ಕೆಲಸ ಮಾಡಿ

Published:
Updated:
Deccan Herald

ಕೋಲಾರ: ‘ಕನ್ನಡವನ್ನು ಒಳ ಮತ್ತು ಹೊರ ಭಾಗದಲ್ಲಿ ಕಿತ್ತು ತಿನ್ನುವ ಸನ್ನಿವೇಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಗಳು ಕನ್ನಡದ ದನಿಯಾಗಿ ಕೆಲಸ ಮಾಡಬೇಕು’ ಎಂದು ಸಾಹಿತಿ ಸ.ರಘುನಾಥ್ ಕಿವಿಮಾತು ಹೇಳಿದರು.

ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನುಡಿ ತಂಬೂರಿ: ಬಿಜಿಎಲ್ ಸ್ವಾಮಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ‘ಕನ್ನಡದ ರಕ್ಷಣೆ, ಅಭಿವೃದ್ಧಿಗೆ ಗುಂಪುಗಳು ಬೇಕಿಲ್ಲ. ಕನ್ನಡ ಕುಲ ಸಂಘಟನೆಯಾದರೆ ಸಂಸ್ಥೆಗಳಿಗೂ ಬೆಲೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಈ ಹಿಂದೆ ರೈತರು ತಂಗಳು ಆಹಾರ ಸೇವಿಸುತ್ತಿದ್ದರಿಂದಲೇ ಉಳುಮೆ ಮಾಡಲು ಹಾಗೂ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತಿತ್ತು. ಹೀಗಾಗಿ ಸಂಘಟನೆಗಳು ಕನ್ನಡದ ತಂಗಳಿನ ಬುತ್ತಿಯನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕನ್ನಡಪರ ಕೆಲಸ ಆಗಬೇಕಿರುವ ನಿಟ್ಟಿನಲ್ಲಿ ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಆರಂಭಗೊಂಡಿರುವುದು ಸಂತಸದ ಸಂಗತಿ. ಹಾಗಂತ ತೆಲುಗು ಭಾಷೆ ವಿರೋಧಿಸಬೇಕಿಲ್ಲ. ತೆಲುಗು ಭಾಷೆ ಒಂದು ರೀತಿಯ ಹಸಿರು ಹಾವು ಇದ್ದಂತೆ’ ಎಂದು ತಿಳಿಸಿದರು.

ಕಿತ್ತಾಡುತ್ತಿದ್ದೇವೆ: ‘ತೆಲುಗಿನ ಅನೇಕ ಲೇಖಕರು ತಮ್ಮ ಲೇಖನಗಳು ಕನ್ನಡಕ್ಕೆ ಅನುವಾದಗೊಳ್ಳಬೇಕೆಂದು ಚಾತಕ ಪಕ್ಷಿಗಳಂತೆ ಕಾದು ಸಂಭ್ರಮಿಸುತ್ತಾರೆ. ಆದರೆ, ನಾವು ಪ್ರತಿ ಅಕ್ಷರಕ್ಕೆ ಒಂದು ಜಾತಿ ಕಟ್ಟಿಕೊಂಡು ಕಿತ್ತಾಡುತ್ತಿದ್ದೇವೆ. ಅಕ್ಷರಗಳಲ್ಲಿ ಜಾತಿಯ ಬದಲು ಕನ್ನಡ ಕಂಡರೆ ಭಾಷೆ ಒಂದಿಷ್ಟು ಉದ್ಧಾರ ಆಗುತ್ತದೆ’ ಎಂದರು.

'ಡಿವಿಜಿ ಅವರ ಪುತ್ರ ಬಿಜಿಎಲ್ ಸ್ವಾಮಿ ನಮ್ಮ ಜಿಲ್ಲೆಯವರಾಗದೆ ಬೇರೆ ಜಿಲ್ಲೆಯವರಾಗಿದ್ದರೆ ಅವರಿಗೆ ಇಷ್ಟು ಅವಮಾನ ಆಗುತ್ತಿರಲಿಲ್ಲ. ನಾವು ನಾಚಿಕೆ ಪಡಬೇಕಿದ್ದು, ಇನ್ನಾದರೂ ಅವರನ್ನು ಪರಿಚಯಿಸುವ ಕೆಲಸ ಇಂತಹ ಸಂಘಟನೆಗಳ ಮೂಲಕ ಆಗಲಿ’ ಎಂದು ಆಶಿಸಿದರು.

ಪುಸ್ತಕಗಳು ಮೂಲೆಗುಂಪು: ‘ಜಿಲ್ಲೆಯ ಸಾಹಿತಿಗಳು ರಚಿಸಿರುವ ಪುಸ್ತಕಗಳು ಮೂಲೆಗುಂಪಾಗಿದ್ದು, ವಿದ್ಯಾರ್ಥಿಗಳಿಗೆ ಅವುಗಳನ್ನು ಪರಿಚಯಿಸುವ ಕೆಲಸ ಸಂಘಟನೆಗಳಿಂದ ಆಗಬೇಕು’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.

‘ಡಿವಿಜಿಯವರ ಕೃತಿಗಳೆಲ್ಲಾ ಮರೆಯಾಗಿದ್ದು, ಕಗ್ಗ ಮಾತ್ರ ಖ್ಯಾತಿಯಾಗಿದೆ. ಅವರ ಪುತ್ರ ಬಿಜಿಎಲ್ ಸ್ವಾಮಿಯವರು ವಿಜ್ಞಾನಿ, ಸಾಹಿತಿ, ಶಿಕ್ಷಕ ಎಲ್ಲವೂ ಆಗಿದ್ದರೂ ಮುನ್ನೆಲೆಗೆ ಬರಲೇ ಇಲ್ಲ. ಹೀಗಾಗಿ ಅವರ ಕೃತಿಗಳನ್ನು ಪುನರ್‌ ಮನನಗೊಳಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು’ ಎಂದು ಸಲಹೆ ನೀಡಿದರು.

ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್, ಸಾಹಿತಿ ಅರಿವು ಶಿವಪ್ಪ, ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಸರಕು ಮಾರಾಟ ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !