ಅನುಚಿತ ವರ್ತನೆ: ಶಿಕ್ಷಕ ಅಮಾನತು

7

ಅನುಚಿತ ವರ್ತನೆ: ಶಿಕ್ಷಕ ಅಮಾನತು

Published:
Updated:

ಕೋಲಾರ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ತಾಲ್ಲೂಕಿನ ತೋರದೇವಂಡಹಳ್ಳಿ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಕೆ.ಎಂ.ಮುನಿಯಪ್ಪ ಅವರನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಸ್ವಾಮಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಮುನಿಯಪ್ಪ ಅವರು ಡಿ.4ರಂದು ಶಾಲೆ ಅವಧಿಯಲ್ಲಿ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರೊಂದಿಗೆ ಬಿಇಒ ಕಚೇರಿಗೆ ಬಂದಿದ್ದರು. ಅಲ್ಲದೇ, ವಿನಾಕಾರಣ ರಘುನಾಥರೆಡ್ಡಿ ಅವರ ವರ್ಗಾವಣೆ ವಿಚಾರಣೆ ಪ್ರಸ್ತಾಪಿಸಿ ಕಚೇರಿ ಡಿ ಗ್ರೂಪ್‌ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

ಕಚೇರಿಯಲ್ಲಿ ರಘುನಾಥರೆಡ್ಡಿ ಅವರನ್ನು ಉದ್ದೇಶಿಸಿ, ‘ಸರ್‌, ವರ್ಗಾವಣೆ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೀರಿ. ಬೇರೆಡೆ ಹೋಗದೆ ಕಚೇರಿಯಲ್ಲೇ ಕುಳಿತು ಕರ್ತವ್ಯ ಮುಂದುವರಿಸಿ’ ಎಂದು ಹೇಳಿದ್ದರು. ಜತೆಗೆ ರಘುನಾಥರೆಡ್ಡಿ ಅವರಿಗೆ ಕುರ್ಚಿ ಹಾಕುವಂತೆ ಡಿ ಗ್ರೂಪ್‌ ನೌಕರರನ್ನು ಗದರಿಸಿದ್ದರು. ಅಲ್ಲದೇ, ನಿಯಮಬಾಹಿರವಾಗಿ ಸಿಬ್ಬಂದಿ ಹಾಜರಾತಿ ಪುಸ್ತಕ ತೆಗೆದುಕೊಂಡು ಅದರಲ್ಲಿ ರಘುನಾಥರೆಡ್ಡಿ ಅವರಿಂದ ಕರ್ತವ್ಯಕ್ಕೆ ಹಾಜರಾಗಿರುವಂತೆ ಸಹಿ ಮಾಡಿಸಿದ್ದರು.

‘ಶಿಕ್ಷಕರ ಹುದ್ದೆಯು ಜವಾಬ್ದಾರಿಯುತ ಸ್ಥಾನ. ಆ ಹುದ್ದೆಯಲ್ಲಿರುವ ಮುನಿಯಪ್ಪ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುವ ಬದಲು ನಿರ್ಗಮಿತ ಬಿಇಒ ವರ್ಗಾವಣೆ ಆದೇಶದ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ. ಕಚೇರಿ ಸಿಬ್ಬಂದಿಯೊಂದಿಗೆ ಉದ್ಧಟತನದಿಂದ ವರ್ತಿಸಿ ಗೊಂದಲ ಸೃಷ್ಟಿಸಿದ್ದಾರೆ. ಅವರ ವರ್ತನೆ ಅಶಿಸ್ತು, ಅಪ್ರಾಮಾಣಿಕತೆ, ಹಿರಿಯ ಅಧಿಕಾರಿಗಳ ಆದೇಶ ಉಲ್ಲಂಘನೆ ಮತ್ತು ತಾತ್ಸಾರ ಮನೋಭಾವದಿಂದ ಕೂಡಿದೆ’ ಎಂದು ಡಿಡಿಪಿಐ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

‘ಮುನಿಯಪ್ಪರ ವರ್ತನೆ ಶಿಕ್ಷಕರ ಹುದ್ದೆಗೆ ಘನತೆ ತರುವಂತದಲ್ಲ. ಅವರ ದುರ್ನಡತೆ ನಿಯಂತ್ರಿಸದಿದ್ದರೆ ಶಾಲೆ ಮತ್ತು ಕಚೇರಿಯ ಆಡಳಿತಾತ್ಮಕ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ಅನುಸಾರ ಅನುಚಿತ ವರ್ತನೆ ಹಾಗೂ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅವರನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !