ಸರ್ಕ್ಯೂಟ್‌ ಹೌಸ್‌ನಲ್ಲಿ ಶ್ವಾನಗಳ ವಾಸ್ತವ್ಯ!

7
ಪಿಡಬ್ಲ್ಯುಡಿ ಅಧಿಕಾರಿಗಳ ಕ್ರಮಕ್ಕೆ ಜಾಲತಾಣಗಳಲ್ಲಿ ಟೀಕೆ

ಸರ್ಕ್ಯೂಟ್‌ ಹೌಸ್‌ನಲ್ಲಿ ಶ್ವಾನಗಳ ವಾಸ್ತವ್ಯ!

Published:
Updated:

ಮಂಗಳೂರು: ಅತಿಗಣ್ಯರ ವಾಸ್ತವ್ಯಕ್ಕೆಂದೇ ನಿರ್ಮಿಸಲಾಗಿರುವ ಸರ್ಕ್ಯೂಟ್‌ ಹೌಸ್‌ನ ಹೊಸ ಕಟ್ಟಡದ ಐಷಾರಾಮಿ ಕಟ್ಟಡದಲ್ಲಿ ಬೆಂಗಳೂರಿನ ಗಣ್ಯ ವ್ಯಕ್ತಿಯೊಬ್ಬರ ನಾಲ್ಕು ಶ್ವಾನಗಳ ವಾಸ್ತವ್ಯಕ್ಕೆ ಶುಕ್ರವಾರ ಅವಕಾಶ ಕಲ್ಪಿಸಲಾಗಿತ್ತು!

ನಗರದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಶ್ವಾನಗಳ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ವ್ಯಕ್ತಿಯೊಬ್ಬರು ಜರ್ಮನ್ ಶೆಫರ್ಡ್ ತಳಿಯ ನಾಲ್ಕು ನಾಯಿಗಳನ್ನು ತಂದಿದ್ದರು. ಅವುಗಳ ವಾಸ್ತವ್ಯಕ್ಕೆ ಹವಾನಿಯಂತ್ರಿತ ಕೋಣೆಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಖಾಸಗಿ ವಸತಿ ಗೃಹಗಳು, ಹೋಟೆಲ್‌ಗಳಲ್ಲಿ ಅವಕಾಶ ದೊರಕಿರಲಿಲ್ಲ.

ನಾಯಿಗಳ ವಾಸ್ತವ್ಯಕ್ಕೆ ಕೊಠಡಿಗಾಗಿ ಹುಡುಕಾಟ ನಡೆಸಿದ್ದ ಆ ವ್ಯಕ್ತಿ ಅಂತಿಮವಾಗಿ ಪಿಡಬ್ಲ್ಯುಡಿ ಅಧಿಕಾರಿಗಳ ಮೊರೆ ಹೋಗಿದ್ದರು. ಅವರು ಗಣ್ಯ ವ್ಯಕ್ತಿಗಳಿಗಾಗಿ ಮೀಸಲಾದ ಐಷಾರಾಮಿ ಕೊಠಡಿಯನ್ನೇ ಒದಗಿಸಿದ್ದರು. ಆ ಕೊಠಡಿಗಳಲ್ಲಿ ನಾಯಿಗಳು ವಿಶ್ರಾಂತಿ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಅತಿಗಣ್ಯರ ವಾಸ್ತವ್ಯಕ್ಕೆ ಮೀಸಲಾದ ಕೊಠಡಿಗಳನ್ನು ನಾಯಿಗಳ ವಾಸ್ತವ್ಯಕ್ಕೆ ಒದಗಿಸಿರುವ ಅಧಿಕಾರಿಗಳ ಕ್ರಮಕ್ಕೆ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಹಣ ಮತ್ತು ಪ್ರಭಾವಕ್ಕೆ ಒಳಗಾಗಿ ನಾಯಿಗಳಿಗೆ ಕೊಠಡಿ ನೀಡಲಾಗಿದೆ ಎಂದು ದೂರಿದ್ದಾರೆ.

ಅಧಿಕಾರಿಗಳಿಂದ ನಿರಾಕರಣೆ: ಆದರೆ, ನಾಯಿಗಳಿಗೆ ಕೊಠಡಿ ಒದಗಿಸಿದ ವಿಚಾರದಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳು ಆರೋಪ ನಿರಾಕರಿಸುತ್ತಿದ್ದಾರೆ. ಕೆಲವರು ಕೊಠಡಿ ನೀಡಿಲ್ಲ ಎಂಬ ಉತ್ತರ ನೀಡಿದರೆ, ಇನ್ನು ಕೆಲವರು ಬೇರೆ ಕೊಠಡಿಯ ವ್ಯವಸ್ಥೆ ಆಗುವವರೆಗೂ ತಾತ್ಕಾಲಿಕ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿತ್ತು ಎನ್ನುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್‌, ‘ಬೇರೆ ಕಡೆ ಕೊಠಡಿ ವ್ಯವಸ್ಥೆ ಆಗುವವರೆಗೂ ಕೊಠಡಿ ಒದಗಿಸುವಂತೆ ನಾಯಿಗಳ ಮಾಲೀಕರು ಕೋರಿದ್ದರು. ಸರ್ಕ್ಯೂಟ್‌ ಹೌಸ್‌ನಲ್ಲಿ ಆ ವ್ಯಕ್ತಿಗೆ ಕೊಠಡಿ ನೀಡಲಾಗಿತ್ತು. ನಾಯಿಗಳಿಗಾಗಿ ಕೊಠಡಿ ನೀಡಿರಲಿಲ್ಲ. ಅರ್ಧ ಗಂಟೆಯ ಬಳಿಕ ವರು ಬೇರೆ ಕಡೆ ಕೊಠಡಿ ಪಡೆದಿದ್ದು, ಅಲ್ಲಿಗೆ ತೆರಳಿದ್ದಾರೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !