ಗುರುವಾರ , ಡಿಸೆಂಬರ್ 12, 2019
17 °C

ಕೋಮುವಾದಿಗಳಿಗೆ ಅಧಿಕಾರ ಕಲ್ಪಿಸಬೇಡಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಸಮಾಜದ ಅಭಿವೃದ್ಧಿಗೆ ಅಡ್ಡಿಪಡಿಸುವ ವ್ಯಕ್ತಿಗಳು ಗಣ್ಯರ ಜಯಂತಿಗಳಿಗೂ ಅಡ್ಡಿಪಡಿಸುತ್ತಾರೆ. ಆ ಕೋಮುವಾದಿಗಳಿಗೆ ಎಂದಿಗೂ ಅಧಿಕಾರ ಕಲ್ಪಿಸಬಾರದು’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದಲ್ಲಿ ಜಿಲ್ಲಾ ಕುರುಬರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ 531ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಸಂವಿಧಾನವನ್ನು ಸುಟ್ಟು ಹಾಕಲು ಮುಂದಾಗಿರುವ ಕೋಮುವಾದಿಗಳನ್ನು ದೇಶದಲ್ಲಿ ನಿರ್ಮೂಲನೆ ಮಾಡಲು ಜನ ಮುಂದಾಗಬೇಕು’ ಎಂದು ಎಚ್ಚರಿಸಿದರು.

‘ವ್ಯಕ್ತಿತ್ವದ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸಬೇಕು. ಜಾತಿ, ಧರ್ಮದ ಮೇಲಲ್ಲ. ಜಾತಿ, ಧರ್ಮವನ್ನು ಗುರುತಿಸಿ ಮಾತನಾಡುವವರೆ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು. ಮತಾಂದರು, ಕೋಮುವಾದಿಗಳು. ಅಭಿವೃದ್ಧಿಯ ಕಳಾಜಿ ಇದ್ದರೆ ಜಯಂತಿಗಳಿಗೆ ಅಡ್ಡಿಪಡಿಸಬಾರದು. ಸಂವಿಧಾನ ವಿರೋಧಿಗಳು ದೇಶ ಅಳ್ವಿಕೆ ನಡೆಸಲು ಅನಾರ್ಹರು’ ಎಂದರು.

‘ಪ್ರಜಾಪ್ರಭುತ್ವದಲ್ಲಿ ಅಧಿಕಾರ ಮುಖ್ಯವಲ್ಲ. ಸಾಮಾಜಿಕ ಪರಿಕಲ್ಪನೆ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿ ಇರುತ್ತದೆ. ಸಮಾಜ ವಿರೋಧಿಗಳನ್ನು ತೊಡೆದು ಹಾಕುವ ಜವಾಬ್ದಾರಿ ರಾಜ್ಯದ ಜನರ ಮೇಲಿದೆ. ಮತ ಹಾಕುವ ಸ್ವಾತಂತ್ರ್ಯ ಬಂದರೆ ಸಾಲದು. ಪ್ರತಿ ಪ್ರಜೆಗೂ ಅರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

‘ಅನ್ನಭಾಗ್ಯಕ್ಕೆ ಕೇಂದ್ರ ಸರಕಾರದಿಂದ ಅಕ್ಕಿ ತಂದರೆಂದು ಅಪಪ್ರಚಾರ ಮಾಡಿದರು. ಆದರೆ ದೇಶದ ಇತರೇ ರಾಜ್ಯಗಳಲ್ಲಿ ಉಚಿತ ಅಕ್ಕಿ ನೀಡಲಿಲ್ಲ ಏಕೆ. ಹಸಿದವರಿಗೆ ಅನ್ನ ನೀಡುವ ಹೃದಯವಂತಿಕೆ ಎಲ್ಲರಿಗೂ ಬರಲು ಸಾಧ್ಯವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ತಮ್ಮ ಅಧಿಕಾರಾವಧಿಯಲ್ಲಿ 14 ಮಂದಿ ಗಣ್ಯರ ಜಯಂತಿಗಳನ್ನು ಆಚರಿಸಲಾಯಿತು, ಯಾರ ಜಯಂತಿಗೂ ವಿರೋಧವಿಲ್ಲದೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಕೆಲವರು ರಾಜಕೀಯವಾಗಿ ವಿರೋಧಿಸಿದರು. ಆದರೂ, ತಾವು ಇಂತಹ ವಿರೋಧಕ್ಕೆ ಹೆದರುವುದಿಲ್ಲ’ ಎಂದು ಸವಾಲು ಹಾಕಿದರು.

‘ಬಯಲು ಸೇಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

‘ಜನರ ವಿಶ್ವಾಸಗಳಿಸಿರುವ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತನಾಡಿದ ವ್ಯಕ್ತಿಗೆ ಕ್ಷೇತ್ರದ ಜನ ತಕ್ಕ ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರೆ ಇತಿಹಾಸನೇ ಬೇರೆಯಾಗುತ್ತಿತ್ತು’ ಎಂದರು.

‘ಸಮಾಜ, ಜನಪರ ಕೆಲಸ ಮಾಡಿದ ವ್ಯಕ್ತಿಯ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಆದರೆ ಸಿದ್ದರಾಮಯ್ಯ ಅವರು ಪುನಃ ಮುಖ್ಯಮಂತ್ರಿಯಾಗಬಾರದು ಎಂದು ಸಾಕಷ್ಟು ಮಂದಿ ಅಡ್ಡಿಪಡಿಸಿದರು. ಈಗ ನಿಮಗೆ ಬಂದ ಲಾಭವೇನು’ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘ಜಿಲ್ಲೆಯ ಅವಿಭಾಜ್ಯ ಅಂಗವಾಗಿರುವ ಬರವನ್ನು ತೊಡೆದು ಹಾಕಲು ₨ 1,400 ಕೋಟಿ ವೆಚ್ಚದ ಕೆ.ಸಿ ವ್ಯಾಲಿ ಯೋಜನೆ ಮಂಜೂರು ಮಾಡಿದ ಸಿದ್ದರಾಮಯ್ಯರಿಗೆ ಜಿಲ್ಲೆಯ ಜನ ಧನ್ಯರಾಗಿರಬೇಕು’ ಎಂದರು.

ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಿದ್ದರೂ ಶೋಷಿತ ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ರೀತಿ ಸವಲತ್ತುಗಳನ್ನು ಕಲ್ಪಿಸುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸಿದ್ದರಾಮಯ್ಯ ಅವರು ಸೋತರೂ ನಮಗೆ ಅವರೇ ಮುಖ್ಯಮಂತ್ರಿ, ಸಿದ್ದರಾಮಯ್ಯ ಬೆಂಬಲ ನೀಡದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಸಿದ್ದರಾಮಯ್ಯ ಅವರು ಮಾರ್ಗದರ್ಶನದ ಮೇರೆ ಸರ್ಕಾರ ನಡೆಯುತ್ತಿದೆ’ ಎಂದು ಹೇಳಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಐಎಎಸ್‌ ನಿವೃತ್ತ ಅಧಿಕಾರಿ ಚಿಕ್ಕರಾಯಪ್ಪ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಹನುಮಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು