ಸೋಮವಾರ, ಡಿಸೆಂಬರ್ 9, 2019
17 °C
ಕಳ್ಳರ ಪಾಲಾಗುತ್ತಿವೆ ಬೆಲೆಬಾಳುವ ಬಲ್ಬ್‌ಗಳು, ಮದ್ಯಪಾನ ಮಾಡುವವರಿಗೆ ಅನುಕೂಲ

ಉದ್ಯಾನಗಳಲ್ಲಿ ಬೆಳಕಿಲ್ಲ; ಕಿಡಿಗೇಡಿಗಳ ಕಾಟ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Deccan Herald

ಮಂಡ್ಯ: ನಗರದ ಬಹುತೇಕ ಉದ್ಯಾನಗಳಲ್ಲಿ ಸಂಜೆ 6 ಗಂಟೆಯಾಗುತ್ತಿದ್ದಂತೆ ಕತ್ತಲು ಕವಿಯುತ್ತದೆ. ಆಟವಾಡುತ್ತಿದ್ದ ಮಕ್ಕಳು, ವಿಹಾರ ಮಾಡುವ ಹಿರಿಯರು ಭಯದಿಂದ ಹೊರ ನಡೆಯುತ್ತಾರೆ. ರಾತ್ರಿಯ ವೇಳೆ ಉದ್ಯಾನಗಳು ಕಿಡಿಗೇಡಿಗಳಿಗೆ ಮಾತ್ರ ಸೀಮಿತವಾಗಿವೆ.

ಉದ್ಯಾನಗಳಿಗೆ ನಗರಸಭೆ ಹೊಸ ರೂಪ ಕೊಟ್ಟಿದೆ. ಅಮೃತ್‌ ಯೋಜನೆ ಅಡಿ ಹಲವು ಉದ್ಯಾನಗಳು ಅಭಿವೃದ್ಧಿ ಕಂಡಿವೆ. ಹೊರಾಂಗಣ ಜಿಮ್‌ ಉಪಕರಣ ಅಳವಡಿಸಿ ಜನರನ್ನು ಆಕರ್ಷಿಸಲಾಗಿದೆ. ಆಟಿಕೆ ಉಪಕರಣ ಅಳವಡಿಸಿರುವುದು ಮಕ್ಕಳಿಗೆ ಇಷ್ಟವಾಗಿದೆ. ಆದರೆ ಉದ್ಯಾನಕ್ಕೆ ಸಮರ್ಪಕವಾಗಿ ದೀಪ ಅಳವಡಿಸದ ಕಾರಣ ರಾತ್ರಿಯ ವೇಳೆ ಜನರು ಉದ್ಯಾನಕ್ಕೆ ಬರಲು ಭಯಪಡುವಂತಾಗಿದೆ. ಉದ್ಯಾನಕ್ಕೆ ವಿದ್ಯುತ್‌ ಸಂಪರ್ಕವಿದ್ದರೂ ಬಲ್ಬ್‌ ಅಳವಡಿಸಿಲ್ಲ. ಹಾಳಾಗಿರುವ ಬಲ್ಬ್‌ಗಳನ್ನು ಬದಲಾವಣೆ ಮಾಡಿಲ್ಲ. ರಾತ್ರಿಯಾಗುತ್ತಿದ್ದಂತೆ ಕತ್ತಲೆಯಲ್ಲಿ ಕಿಡಿಗೇಡಿಗಳು ಮದ್ಯಪಾನ ಮಾಡುವ ಕಾರಣ ಜನರು ಉದ್ಯಾನಕ್ಕೆ ಬರಲು ಹಿಂಜರಿಯುತ್ತಾರೆ.

ನಗರದಲ್ಲಿ 40ಕ್ಕೂ ಹೆಚ್ಚು ಉದ್ಯಾನಗಳಿವೆ. ಎಲ್ಲಾ ಉದ್ಯಾನಗಳಿಗೂ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಹಲವು ಸ್ವಯಂ ಸೇವಾ ಸಂಸ್ಥೆಗಳು ಕೂಡ ಉದ್ಯಾನಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿವೆ. ಅಪರೂಪದ ಸಸ್ಯಗಳನ್ನು ಬೆಳೆಸಿ ಹಸಿರು ವಾತಾವರಣ ಕಲ್ಪಿಸಲಾಗಿದೆ. ಆದರೆ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಜನರಿಗೆ ರಾತ್ರಿಯ ವೇಳೆ ಉದ್ಯಾನ ಬಳಕೆಗೆ ಬರುತ್ತಿಲ್ಲ.

‘ರಾತ್ರಿ ಊಟವಾದ ನಂತರ ಪಾರ್ಕ್‌ಗೆ ಬಂದು ವಾಕಿಂಗ್‌ ಮಾಡುವುದು ನನ್ನ ಪ್ರತಿದಿನದ ಅಭ್ಯಾಸ. ಆದರೆ ಬಾಲಭವನ ಉದ್ಯಾನದಲ್ಲಿ ರಾತ್ರಿಯ ವೇಳೆ ರಾತ್ರಿ ಬೆಳಕು ಇರುವುದಿಲ್ಲ. ಅಲ್ಲಿ ಕಿಡಿಗೇಡಿಗಳು ಮದ್ಯಪಾನ ಮಾಡುತ್ತಾರೆ. ಕತ್ತಲು ಇರುವ ಜಾಗದಲ್ಲೇ ಕುಳಿತಿರುತ್ತಾರೆ’ ಎಂದು ಅಶೋಕ್‌ನಗರ ನಿವಾಸಿ ಸುಬ್ರಮಣ್ಯ ಹೇಳಿದರು.

ನಗರದಲ್ಲಿ ನಾಯಿಗಳ ಕಾಟ ಮಿತಿಮೀರಿದೆ. ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡದ ಹಿನ್ನೆಲೆಯಲ್ಲಿ ಬೀದಿನಾಯಿಗಳು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿವೆ. ನಗರದಲ್ಲಿ ಒಬ್ಬೊಬ್ಬರೇ ಓಡಾಡುವುದು ಕಷ್ಟವಾಗಿದೆ. ಈ ನಾಯಿಗಳು ಉದ್ಯಾನವನ್ನೂ ಬಿಟ್ಟಿಲ್ಲ. ಉದ್ಯಾನದ ಕಲ್ಲು ಬೆಂಚುಗಳ ಮೇಲೆ ನಾಯಿಗಳು ಮಲಗುತ್ತಿವೆ. ಓಡಿಸಲು ಹೋದರೆ ಗುಂಪಾಗಿ ಬೊಗಳುತ್ತಾ ಕಚ್ಚಲು ಬರುತ್ತವೆ ಎಂದು ಸಾ ರ್ವಜನಿಕರು ದೂರುತ್ತಾರೆ.

ಕಾವಲುಗಾರರೂ ಇಲ್ಲ: ನಗರದ ಯಾವ ಉದ್ಯಾನದಲ್ಲೂ ಕಾವಲುಗಾರರನ್ನು ನಿಯೋಜಿಸಿಲ್ಲ. ಹೀಗಾಗಿ ಉದ್ಯಾನದ ಒಳಗೆ ಹೋಗುವವರು, ಬರುವವರ ಮೇಲೆ ಯಾವುದೇ ನಿಯಂತ್ರಣ ಇಲ್ಲವಾಗಿದೆ. ನಗರಸಭೆ ಎದುರೇ ಇರುವ ಪಾರ್ಕ್‌ನಲ್ಲಿ ಮಧ್ಯಾಹ್ನದ ವೇಳೆ ಜನರು ಮಲಗಿ ನಿದ್ದೆ ಮಾಡುತ್ತಿರುತ್ತಾರೆ. ಮದ್ಯಪಾನ ಮಾಡಿದ ಬಾಟಲ್‌ಗಳನ್ನು ಅಲ್ಲಲ್ಲಿ ಬಿಸಾಡಿ ಹೋಗಿದ್ದಾರೆ. ಉದ್ಯಾನದಲ್ಲಿ ಕಾವಲುಗಾರ ಇಲ್ಲದ ಕಾರಣ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ರಾತ್ರಿಯ ವೇಳೆಯಲ್ಲಂತೂ ಇಲ್ಲಿ ಕತ್ತಲು ಕವಿದಿರುತ್ತದೆ.

ಬಲ್ಬ್‌ ಕಳ್ಳತನ?
‘ರಾತ್ರಿಯ ವೇಳೆ ಉದ್ಯಾನದಲ್ಲಿ ಬೆಳಕಿವ ವ್ಯವಸ್ಥೆ ಇಲ್ಲ ಎಂಬ ದೂರುಗಳು ಬಂದಿವೆ. ಉದ್ಯಾನ ಅಭಿವೃದ್ಧಿಗೊಳಿಸುವ ಸಂದರ್ಭದಲ್ಲೇ ದೀಪದ ವ್ಯವಸ್ಥೆ ಮಾಡಲಾಗಿದೆ. ಆದರೆ ಹೆಚ್ಚು ಬೆಲೆಬಾಳುವ ಬಲ್ಬ್‌ಗಳು ಕಳ್ಳತನವಾಗುತ್ತಿವೆ. ಎಷ್ಟೇ ಬಾರಿ ಬಲ್ಬ್‌ ಬದಲಾಯಿಸಿದರೂ ಬಿಡುತ್ತಿಲ್ಲ. ಹೀಗಾಗಿ ಬದಲಿ ಬೆಳಕಿನ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಕಾವಲುಗಾರರ ನೇಮಕ ಮಾಡುವ ಕುರಿತು ಚರ್ಚೆ ನಡೆಸಲಾಗುವುದು. ಜೊತೆಗೆ ಪೊಲೀಸ್‌ ಬೀಟ್‌ ಹೆಚ್ಚಿಸುವಂತೆ ಪೊಲೀಸ್‌ ಇಲಾಖೆಗೆ ಕೋರುತ್ತೇನೆ. ಬಲ್ಬ್‌ ಕಳ್ಳತನ ಕಂಡು ಬಂದರೆ ಸಾರ್ವಜನಿಕರು ಕೂಡಲೇ ಪೊಲೀಸ್‌ ಠಾಣೆ ಅಥವಾ ನಗರಸಭೆ ಕಚೇರಿಗೆ ಮಾಹಿತಿ ನೀಡಬೇಕು’ ಎಂದು ನಗರಸಭೆ ಪೌರಾಯುಕ್ತ ಲೋಕೇಶ್‌ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು