ಶರೀಅತ್‌ ಸಂರಕ್ಷಣೆಗೆ ರಾಷ್ಟ್ರವ್ಯಾಪಿ ಹೋರಾಟ

7
ಸೈಯದ್‌ ಜೆಫ್ರಿ ಮುತ್ತುಕೋಯ ತಂಙಳ್‌ ಹೇಳಿಕೆ

ಶರೀಅತ್‌ ಸಂರಕ್ಷಣೆಗೆ ರಾಷ್ಟ್ರವ್ಯಾಪಿ ಹೋರಾಟ

Published:
Updated:

ಮಂಗಳೂರು: ಇಸ್ಲಾಂನ ಅವಿಭಾಜ್ಯ ಅಂಗವಾಗಿರುವ ಶರೀಅತ್‌ ರಕ್ಷಣೆ ಎಲ್ಲ ಮುಸ್ಲಿಮರ ಆದ್ಯ ಕರ್ತವ್ಯ. ಶರೀಅತ್‌ಗೆ ಚ್ಯುತಿ ಬಾರದಂತೆ ತಡೆಯಲು ರಾಷ್ಟ್ರವ್ಯಾಪಿಯಾಗಿ ಪ್ರಬಲ ಹೋರಾಟ ನಡೆಸಲು ‘ಸಮಸ್ತ’ ಸಿದ್ಧ ಎಂದು ಸಮಸ್ತ ಕೇರಳ ಜಂ ಇಯ್ಯತುಲ್‌ ಉಲಮಾ ಅಧ್ಯಕ್ಷ ಸೈಯದ್‌ ಝೆಪ್ರಿ ಮುತ್ತುಕೋಯ ತಂಙಳ್‌ ಹೇಳಿದರು.

ಸಮಸ್ತ ಶರೀಅತ್‌ ಸಂರಕ್ಷಣಾ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಶರೀಅತ್‌ ಸಂರಕ್ಷಣಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ‘ಇಸ್ಲಾಂ ಅಲ್ಲಾಹುವಿನ ಧರ್ಮ. ಶರೀಅತ್‌ ಕೂಡ ಅಲ್ಲಾಹುವಿನ ಕೃಪೆಯಿಂದ ದೊರೆತದ್ದು. ಈ ಜಗತ್ತು ಅಂತ್ಯಗೊಳ್ಳುವವರೆಗೂ ಶರೀಅತ್‌ ಯಾವುದೇ ಬದಲಾವಣೆ ಇಲ್ಲದೆ ಉಳಿದುಕೊಳ್ಳಲಿದೆ’ ಎಂದರು.

ಭಾರತದಲ್ಲಿ ಎಲ್ಲ ಧರ್ಮದ ಜನರು ತಮ್ಮ ವಿಧಿ ವಿಧಾನಗಳನ್ನು ಅನುಸರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಅದೇ ರೀತಿ ಇಸ್ಲಾಂ ಧರ್ಮೀಯರು ಶರೀಅತ್‌ ಪಾಲಿಸುತ್ತಿದ್ದಾರೆ. ಇಸ್ಲಾಂ ಧರ್ಮ ಯಾವತ್ತೂ ತಲಾಖ್‌ಗೆ ಪ್ರೋತ್ಸಾಹ ನೀಡುವುದಿಲ್ಲ. ಆದರೆ, ಇಸ್ಲಾಂ ಧರ್ಮವನ್ನು ತೇಜೋವಧೆ ಮಾಡುವುದಕ್ಕಾಗಿ ಕೆಲವರು ತಲಾಖ್‌ ವಿಚಾರವನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

‘ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ನಮ್ಮನ್ನು ಆಳುವ ಸರ್ಕಾರದ ಚುಕ್ಕಾಣಿ ಹಿಡಿದವರು ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಈಗ ಮುಸ್ಲಿಮರು ವಿಷಮ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಎದುರಾಗಬಹುದಾದ ಎಲ್ಲ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ‘ಸಮಸ್ತ’ ಸಿದ್ಧವಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಸಂಚಾಲಕ ಯು.ಕೆ.ಅಬ್ದುಲ್‌ ಅಝೀಝ್‌ ದಾರಿಮಿ, ‘ಭಾರತದ ಸಂವಿಧಾನವು ಇಲ್ಲಿನ ಎಲ್ಲ ಧರ್ಮೀಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಧರ್ಮ, ಸಂವಿಧಾನ, ಸಂಸ್ಕಾರ ಉಳಿಸಿ ಎಂಬುದು ನಮ್ಮ ಬೇಡಿಕೆ. ಶರೀಅತ್‌ ರಕ್ಷಣೆಯ ವಿಚಾರದಲ್ಲಿ ಮುಸ್ಲಿಂ ಸಮುದಾಯದ ರಾಜಕಾರಣಿಗಳು ಅಧಿಕಾರ ತ್ಯಾಗಕ್ಕೂ ಸಿದ್ಧರಾಗಿರಬೇಕು’ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್‌ ಸಮ್ಮೇಳನದ ಅಧ್ಯಕ್ಷರೆ ವಹಿಸಿದ್ದರು. ಸೈಯದ್‌ ಝೈನುಲ್‌ ಆಬಿದೀನ್‌ ತಂಙಳ್‌ ಕುನ್ನಂಗೈ ಪ್ರಾರ್ಥನೆಯೊಂದಿಗೆ ಸಮ್ಮೇಳನ ಉದ್ಘಾಟಿಸಿದರು. ಶೈಖುನಾ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್‌ ಮಲಪ್ಪುರಂ, ಅಬ್ದುಸಮದ್‌ ಪೋಕೋಟೂರು, ವಕೀಲರಾದ ಓನಂಪಳ್ಳಿ ಮುಹಮ್ಮದ್‌ ಫೈಝಿ, ಹನೀಫ್‌ ಹುದವಿ, ಎಂ.ಎ.ಖಾಸಿಂ ಮುಸ್ಲಿಯಾರ್‌, ನಝೀರ್‌ ಅಝ್ಹರಿ ಪ್ರಧಾನ ಭಾಷಣ ಮಾಡಿದರು.

ಅತ್ರಾಡಿ ಖಾಝಿ ಅಬೂಬಕ್ಕರ್ ಮುಸ್ಲಿಯಾರ್‌, ಸೈಯದ್‌ ಅಲಿ ತಂಙಳ್‌ ಕುಂಬೋಳ್‌, ಎಂ.ಎಸ್‌.ತಂಙಳ್‌ ವಾಲೆಮುಂಡೋವು, ಅಮೀರ್‌ ತಂಙಳ್‌ ಕಿನ್ಯ ಸೇರಿದಂತೆ ಹಲವು ಉಲಮಾಗಳು, ಧರ್ಮ ಗುರುಗಳು ವೇದಿಕೆಯಲ್ಲಿದ್ದರು. ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಮೊಹಮ್ಮದ್ ಮಸೂದ್, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ಇಬ್ರಾಹಿಂ ಕೋಡಿಜಾಲ್‌, ಎಂ.ಎಸ್‌.ಮುಹಮ್ಮದ್, ಕೆ.ಶಾಹುಲ್‌ ಹಮೀದ್‌ ಸೇರಿದಂತೆ ಮುಸ್ಲಿಂ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.

ಸಮ್ಮೇಳನಕ್ಕೂ ಮೊದಲು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ (ಜ್ಯೋತಿ) ವೃತ್ತದಿಂದ ನೆಹರೂ ಮೈದಾನದವರೆಗೂ ಸಾವಿರಾರು ಮಂದಿ ರ‍್ಯಾಲಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !