ಗುರುವಾರ , ಸೆಪ್ಟೆಂಬರ್ 24, 2020
27 °C

ಕೊಡಗಿಗೆ ವಿಶೇಷ ಅನುದಾನ ಬಂದಿದೆಯೆ?: ಪ್ರತಾಪ್ ಸಿಂಹಗೆ ಯು.ಟಿ.ಖಾದರ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಗಳೂರು: ‘ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರ ಈವರೆಗೆ ನಯಾಪೈಸೆಯಾದರೂ ವಿಶೇಷ ಅನುದಾನ ಕೊಟ್ಟಿದೆಯೇ' ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡುವ ಯೋಜನೆಗೆ ಶುಕ್ರವಾರ ಭೂಮಿ ಪೂಜೆ ನಡೆಯಿತು. ಅಲ್ಲಿ ಅನುದಾನದ ಬಗ್ಗೆ ಮಾಹಿತಿ ಇಲ್ಲದೆ ಪ್ರತಾಪ್ ಸಿಂಹ ಮಾತನಾಡಿದ್ದಾರೆ' ಎಂದರು.

ಸಂತ್ರಸ್ತರಿಗಾಗಿ ನಿರ್ಮಿಸುತ್ತಿರುವ ಮನೆಗಳಿಗೆ ಕೇಂದ್ರದ ಅನುದಾನ ಬಳಕೆ ಮಾಡಲಾಗುತ್ತಿದೆ ಎಂಬ ಅರ್ಥದಲ್ಲಿ ‘ಹುಟ್ಟುವ ಮಕ್ಕಳ ಅಪ್ಪ, ಅಮ್ಮ ಯಾರು ಎಂಬುದು ಗೊತ್ತಾಗಬೇಕು' ಎಂದು ಹೇಳಿದ್ದಾರೆ. ಈ ಮಾತು ಹೇಳುವ ಮುನ್ನ ಸರಿಯಾದ ಮಾಹಿತಿ ಅವರ ಬಳಿ ಇರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಕರ್ನಾಟಕಕ್ಕೆ ₹ 540 ಕೋಟಿ ಮಂಜೂರು ಮಾಡಿದೆ. ಇದು ಕೊಡಗು ಜಿಲ್ಲೆಗೆ ಮಾತ್ರ ಕೊಟ್ಟ ಅನುದಾನವಲ್ಲ. ಎಂಟು ಜಿಲ್ಲೆಗಳಿಗೆ ಸೇರಿದ್ದು. ಮನೆ ನಿರ್ಮಾಣಕ್ಕೆ ಈ ಹಣ ಬಳಸುತ್ತಿಲ್ಲ. ತಲಾ ₹ 9.40 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ಅನುದಾನ ಒದಗಿಸುತ್ತಿದೆ ಎಂದರು.

ಕೊಡಗು ಜಿಲ್ಲೆಯ ಜನರ ಬಗ್ಗೆ ಪ್ರತಾಪ್ ಸಿಂಹ ಅವರಿಗೆ ಕಾಳಜಿ ಇದ್ದರೆ ಸಂಸತ್ತಿನಲ್ಲಿ ಧ್ವನಿ ಎತ್ತಲಿ. ಕೇಂದ್ರದಿಂದ ವಿಶೇಷ ಅನುದಾನ ತರಲಿ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.