ಗುರುವಾರ , ಡಿಸೆಂಬರ್ 12, 2019
25 °C
ಮಂಚನಬಲೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ’

ಮೌಲ್ಯಗಳು ಅಳವಡಿಸಿಕೊಂಡರೆ ಆದರ್ಶ ಸಮಾಜ: ಅಮೃತ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ, ಆತ್ಮೀಯತೆ ತೋರುತ್ತ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಆದರ್ಶ ಸಮಾಜ ಕಟ್ಟಲು ಸಾಧ್ಯ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ ಅಮೃತ ಕುಮಾರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಮಂಚನಬಲೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಇವತ್ತು ರಾಜ್ಯದಲ್ಲಿ ಮಾತೃಭಾಷೆಯಾಗಿರುವ ಕನ್ನಡ ನಗರ ಪ್ರದೇಶಗಳಲ್ಲಿ ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ಕನ್ನಡ ಗ್ರಾಮೀಣ ಜನರ ಹೆಚ್ಚಿನ ಬಳಕೆಯಿಂದಾಗಿ ಇನ್ನು ಗಟ್ಟಿಯಾದ ಅಸ್ತಿತ್ವ ಕಾಯ್ದಕೊಂಡಿದೆ. ವಿಚಾರವಾದಿ ಎಚ್‌.ನರಸಿಂಹಯ್ಯ ಅವರ ಹೇಳಿದಂತೆ ಕನ್ನಡಿಗರೆಲ್ಲರೂ ವೈಚಾರಿಕತೆ ಬೆಳೆಸಿಕೊಂಡು ವಿಚಾರವಂತರಾಗುವ ಅಗತ್ಯವಿದೆ’ ಎಂದು ತಿಳಿಸಿದರು.

‘ಪ್ರಾಮಾಣಿಕತೆ, ಶಿಸ್ತು, ವಿದ್ವತ್ತಿಗೆ ದೇಶದಲ್ಲಿ ಖಾತ್ಯರಾದ ಮುದ್ದೇನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಅವರ ಬದುಕು ನಮಗೆ ಆದರ್ಶವಾಗಬೇಕು. ಪ್ರಕೃತಿ ಆರಾಧನೆಗೆ ಮಹತ್ವ ನೀಡಬೇಕು. ಮೌಢ್ಯತೆಯಿಂದ ಹೊರಬರಬೇಕು. ಮಾಡುವ ಕೆಲಸದಲ್ಲಿ ನಾವು ಸುಖ, ಸಂತೋಷ ಕಾಣಬೇಕೇ ವಿನಾ ಸಂತೋಷವೇ ಕೆಲಸದಂತಾಗಬಾರದು. ಸೋಲಿಗೆ ಎದೆಗುಂದಬಾರದು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ರಾಜ್ಯದ ಜನಸಂಖ್ಯೆ ಆರು ಕೋಟಿಗೂ ಮೀರಿ ಬೆಳೆಯುತ್ತಿದೆ. ಆದರೆ ಹೊರಗಿನವರ ಅತಿಯಾದ ವಲಸೆಯಿಂದಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಇಲ್ಲಿ ನೆಲೆ ಊರಲು ಜಾಗವಿಲ್ಲದಂತಾಗುತ್ತಿದೆ. ಜತೆಗೆ ಕನ್ನಡಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ವೇಳೆಯಲ್ಲಾದರೂ ನಾವು ಮಾತೃಭಾಷೆ, ಗಡಿ, ಜಲದ ವಿಚಾರಗಳಲ್ಲಿ ಎಚ್ಚೆತ್ತುಕೊಂಡು ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.

‘ದೇಶಕ್ಕೆ ನಮ್ಮ ರಾಜ್ಯದಿಂದ ನೂರಾರು ಜನ ಕವಿಗಳು, ಸಾಹಿತಿಗಳು, ಸಂತರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮದು. ನಮ್ಮ ಸಾಹಿತ್ಯ ಸಂಸ್ಕೃತಿ ಬಗ್ಗೆ ಇಡೀ ದೇಶವೇ ಮೆಚ್ಚಿ ಗೌರವಿಸುತ್ತಿದೆ. ಆದರೆ ಅನ್ಯ ರಾಜ್ಯದಿಂದ ಬಂದು ಇಲ್ಲಿ ನೆಲೆಸಿದವರು ಕನ್ನಡಕ್ಕೆ ಗೌರವ ತೋರದಿರುವುದು ಶೋಚನೀಯ ಸಂಗತಿ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗರತ್ನಮ್ಮ ವೆಂಕಟೇಶ್, ಮಂಚನಬಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಹರೀಶ್ ಕುಮಾರ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕಿ ಎಂ.ಆರ್.ರಾಧಾಮಣಿ, ಸಹಶಿಕ್ಷಕರಾದ ನಾಗರಾಜು, ಕಿರಣ್, ಲಕ್ಷ್ಮೀದೇವಿ, ವೀಣಾ, ಕವಿತಾ, ತ್ರಿವೇಣಿ, ಶ್ರೀಧರ್, ಕಸಾಪ ಪದಾಧಿಕಾರಿಗಳಾದ ಅಶ್ವತ್ಥ್ ಮತ್ತು ಮಂಜುನಾಥ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು