ಧರ್ಮ ಪಾಲನೆಯಿಂದ ಹಕ್ಕುಗಳ ರಕ್ಷಣೆ

7
ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ

ಧರ್ಮ ಪಾಲನೆಯಿಂದ ಹಕ್ಕುಗಳ ರಕ್ಷಣೆ

Published:
Updated:
Deccan Herald

ಕೋಲಾರ: ‘ಪ್ರತಿಯೊಬ್ಬರು ಧರ್ಮ ಪಾಲನೆ ಮಾಡಿದಾಗ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಎನ್.ಎಸ್.ಮಮದಾಪುರ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಒಬ್ಬರು ಮತ್ತೊಬ್ಬರಿಗೆ ತೊಂದರೆ ಕೊಡುವುದು, ಕೊಲೆ ಮಾಡುವಂತೆ ಯಾವ ಧರ್ಮದಲ್ಲಿಯೂ ಹೇಳಿಲ್ಲ. ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.

‘ಯಾವ ಧರ್ಮ ಅಥವಾ ಸಂಸ್ಕೃತಿಯಲ್ಲಿ ಆ ಬಗ್ಗೆ ಪ್ರಸ್ತಾಪವಿಲ್ಲದೆ ಇದ್ದರೂ, ವಿಶ್ವ ಮಟ್ಟದಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿರುವುದು ವಿಷಾಧಕರ ಸಂಗತಿ. ಹೀಗಾಗಿ ಮಾನವ ಹಕ್ಕುಗಳು ಎಲ್ಲರಿಗೂ ಸಿಗಬೇಕು. ಯಾವುದೇ ಕಾರಣಕ್ಕೂ ಸೌಕರ್ಯಗಳ ಉಲ್ಲಂಘನೆಯಾಗದಂತೆ ಎಚ್ಚರಹಿಸಿ’ ಎಂದು ಸಲಹೆ ನೀಡಿದರು.

‘2ನೇ ಮಹಾಯುದ್ಧದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಮಾನವನ ರಕ್ಷಣೆಗಾಗಿ ಮಾನವ ಹಕ್ಕುಗಳ ದಿನಾಚರಣೆ ಜಾರಿಗೆ ತರಲಾಗಿದೆ. ಮಾನವ ಹಕ್ಕುಗಳ ಆಯೋಗವು ರಾಜ್ಯ, ರಾಷ್ಟ್ರ ಮಟ್ಟದಲ್ಲಿದ್ದರೆ ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದು ತಿಳಿಸಿದರು.

‘ಹಕ್ಕುಗಳ ರಕ್ಷಣೆ ಕುರಿತಾಗಿ ಯುವಕರು ಬದಲಾವಣೆ ಹೊಂದುತಿರುವ ಜತೆಗೆ ತಿಳುವಳಿಕೆ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸಂಪೂರ್ಣವಾಗಿ ನಿಯಂತ್ರಣವಾಗಬೇಕು’ ಎಂದರು.

‘ಸಮಾಜದಲ್ಲಿ ಹಕ್ಕುಗಳಿಂದ ಶೋಷಣೆಯಾಗುತ್ತಿದ್ದರೂ ಅರಿವಿನ ಕೊರತೆಯಿಂದ ಅರ್ಜಿ ಹಾಕಿಕೊಳ್ಳುವ ವಿಧಾನವೂ ಗೊತ್ತಿಲ್ಲದಂತಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ ಜಿ.ಶಿರೋಳ್ ಹೇಳಿದರು.

‘ಎಲ್ಲ ಧರ್ಮಗಳ ಮೂಲ ಮಾನವ ಧರ್ಮವಾಗಿದ್ದು, ಸಂವಿಧಾನದ ಮೂಲವೂ ಅದೇ ಆಗಿದೆ. ಏನೇ ಆದರೂ ಮೊದಲು ಮಾನವನಾಗಬೇಕು. ನಮ್ಮಿಂದ ಇನ್ನೊಬ್ಬರ ಹಕ್ಕುಗಳ ಉಲ್ಲಂಘನೆಯಾಗದಿದ್ದರೆ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ’ ಎಂದರು.

ತಹಸೀಲ್ದಾರ್ ಗಾಯಿತ್ರಿ ಮಾತನಾಡಿ, ‘ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸಿದಾಗ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

‘ಏನೇ ಆದರು ನಾವೆಲ್ಲರೂ ಮೊದಲು ಮಾನವರಾಗಬೇಕು. ನಮ್ಮ ನಮ್ಮ ಧರ್ಮಗಳನ್ನು ಪಾಲಿಸುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಬಹುದು. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ’ ಎಂದು ತಿಳಿಸಿದರು.

ನ್ಯಾಯಾಧೀಶರಾದ ಎನ್.ವಿ.ವಿಜಯ್, ಬಿ.ಎಸ್.ರೇಖಾ, ಕೃಪಾ, ಪ್ರಶಾಂತ್ ಗಣಪತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !