ಅಂಗವಿಕಲರನ್ನು ವಂಚಿಸಿದರೆ ಶಿಸ್ತುಕ್ರಮ

7
ಸಭೆಯಲ್ಲಿ ಅಧಿಕಾರಿಗಳಿಗೆ ತಾ.ಪಂ ಅಧ್ಯಕ್ಷ ಆಂಜಿನಪ್ಪ ಎಚ್ಚರಿಕೆ

ಅಂಗವಿಕಲರನ್ನು ವಂಚಿಸಿದರೆ ಶಿಸ್ತುಕ್ರಮ

Published:
Updated:
Deccan Herald

ಕೋಲಾರ: ‘ಅಂಗವಿಕಲರನ್ನು ಸರ್ಕಾರಿ ಸೌಕರ್ಯದಿಂದ ವಂಚಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ನಡೆದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಹಿರಿಯ ನಾಗರೀಕರು ಮತ್ತು ಅಂಗವಿಕಲರ ಸಬಲೀಕರಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಸಾಕಷ್ಟು ಮಂದಿ ವಿವಿಧ ರೀತಿಯ ಅಂಗವೈಕಲ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಆದರೆ, ಅಧಿಕಾರಿಗಳ ಬಳಿ ಅಂಗವಿಕಲರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಂಗವಿಕಲರಿಗೆ ನಿಮ್ಮ ಅನುಕಂಪ ಬೇಕಿಲ್ಲ. ಅವರ ಕೌಶಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಡಿಸೆಂಬರ್ ತಿಂಗಳೊಳಗೆ ಅಧಿಕಾರಿಗಳು ನಿರೀಕ್ಷೆಯಂತೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಅಂಗವಿಕಲ ಫಲಾನುಭವಿಗಳಿಗೆ ಸೌಕರ್ಯ ಒದಗಿಸಬೇಕು’ ಎಂದು ಸೂಚಿಸಿದರು.

‘ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದ್ದರೂ ಪ್ರಚಾರ ಮಾಡುತ್ತಿಲ್ಲ. ನೀವು ಸಮರ್ಪಕವಾಗಿ ಪ್ರಚಾರ ನಡೆಸಿದ್ದರೆ ಅರ್ಹರು ಅರ್ಜಿ ಹಾಕಿ ಸೌಕರ್ಯ ಪಡೆದುಕೊಳ್ಳುತ್ತಾರೆ. ಯಾವುದೇ ಕೆಲಸಕ್ಕೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಮುಖ್ಯ’ ಎಂದು ಹೇಳಿದರು.

ಅಸಡ್ಡೆ ತೋರಬೇಡಿ: ‘ಅರ್ಹರಿಗೆ ಸೌಕರ್ಯ ಕಲ್ಪಿಸಲು ಅಸಡ್ಡೆ ತೋರಬೇಡಿ. ಪುನರ್ವಸತಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಂಗವಿಕಲರಿಂದ ದೂರು ಬಂದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅಂಗವಿಕಲರಿಗೆ ಸಿಎಸ್‌ಆರ್‌ ಯೋಜನೆ ಅನುದಾನದಲ್ಲಿ ಬೈಕ್‌ ನೀಡಲು ಅವಕಾಶವಿದೆ. ಅಧಿಕಾರಿಗಳು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕ್ರಿಯಾಯೋಜನೆ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಅಂಗವಿಕಲರ ಪರವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಪುನರ್ವಸತಿ ಕಾರ್ಯಕರ್ತರೆಂದು ನೇಮಿಸಿಕೊಳ್ಳಲಾಗಿದೆ. ಅವರಿಗೆ ಗೌರವಧನ ನೀಡಲಾಗುತ್ತಿದ್ದಾರೆ. ಅಂಗವಿಕಲರ ವಿಚಾರದಲ್ಲಿ ಉದಾಸೀನ ತೋರಬೇಡಿ. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಅದಕ್ಕೊಂದು ಅರ್ಥ ಸಿಗುತ್ತದೆ’ ಎಂದು ಕಿವಿಮಾತು ಹೇಳಿದರು.

ಮಾಹಿತಿ ನೀಡಿ: ‘ತಾಲ್ಲೂಕು ಪಂಚಾಯಿತಿ ಸಭೆಗಳಿಗೆ ಹಿರಿಯ ನಾಗರೀಕರು ಮತ್ತು ಅಂಗವಿಕಲರ ಸಬಲೀಕರಣ ಇಲಾಖೆ ಅಧಿಕಾರಿಗಳು ಹಾಜರಾಗಿರುವುದನ್ನೇ ನೋಡಿಲ್ಲ. ಈ ಇಲಾಖೆಯಿಂದ ಯಾವುದೇ ಯೋಜನೆ ಅನುಷ್ಠಾನ ಆಗುವುದಿಲ್ಲವೇ ಅಥವಾ ತಾಲ್ಲೂಕಿನಲ್ಲಿ ಅಂಗವಿಕಲರೇ ಇಲ್ಲವೇ?’ ಎಂದು ಪ್ರಶ್ನಿಸಿದರು.

‘ವಿವಿಧ ಇಲಾಖೆಗಳು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಡಿ ಲಭ್ಯವಿರುವ ಶೇ 5ರಷ್ಟು ಮೀಸಲಾತಿ ಬಗ್ಗೆ ಅಂಗವಿಕಲರಿಗೆ ಮಾಹಿತಿ ನೀಡಬೇಕು. ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅರ್ಜಿ ಹಾಕಿರುವ ಫಲಾನುಭವಿಗಳ ಪಟ್ಟಿ ಪಡೆದು ಸೌಕರ್ಯ ಕಲ್ಪಿಸಲು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಿರಿ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !