ಸಾಲ ವಿತರಣೆಗೆ ಅಡ್ಡಿ: ಶೋಭೆಯಲ್ಲ

7
ಜನಪ್ರತಿನಿಧಿಗಳ ವಿರುದ್ಧ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಆಕ್ರೋಶ

ಸಾಲ ವಿತರಣೆಗೆ ಅಡ್ಡಿ: ಶೋಭೆಯಲ್ಲ

Published:
Updated:

ಕೋಲಾರ: ‘ಜಿಲ್ಲಾಡಳಿತವು ತಾಲ್ಲೂಕಿನ ನರಸಾಪುರದಲ್ಲಿ ಡಿ.9ರಂದು ಆಯೋಜಿಸಿದ್ದ ಕೆ.ಸಿ ವ್ಯಾಲಿ ಯೋಜನೆಯ 3ನೇ ಎತ್ತುವಳಿ ಪಂಪ್‌ಹೌಸ್‌ ಉದ್ಘಾಟನೆ ಹಾಗೂ ಬ್ಯಾಂಕ್‌ನ ಸಾಲ ವಿತರಣೆ ಸಮಾರಂಭಕ್ಕೆ ಚ್ಯುತಿ ತರಬೇಕೆಂಬ ಉದ್ದೇಶದಿಂದ ಸ್ಥಳೀಯ ಜನಪ್ರತಿನಿಧಿಗಳು ಧರಣಿ ನಡೆಸಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಆರೋಪಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾರ್ಯಕ್ರಮದ ದಿನ ವೇದಿಕೆ ಮೇಲೆ ಅಳವಡಿಸಿದ್ದ ಬ್ಯಾಂಕ್‌ನ ಬ್ಯಾನರ್‌ ತೆರವುಗೊಳಿಸುವ ಮೂಲಕ ಜನಪರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಈ ರೀತಿ ಮಾಡಿರುವವರು ನಿಜಕ್ಕೂ ಜನಪ್ರತಿನಿಧಿಗಳಾ? ಎಂದು ಪ್ರಶ್ನಿಸಿದರು.

‘ಜನಪ್ರತಿನಿಧಿಗಳು ಜನಪರ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ಅದು ಬಿಟ್ಟು ಬೇರೆಯವರ ಮಾತು ಕೇಳಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸುವುದು ಗೌರವವಲ್ಲ. ಜನಪ್ರತಿನಿಧಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಶಿಷ್ಟಾಚಾರ ಉಲ್ಲಂಘನೆಗೂ ಮತ್ತು ಬ್ಯಾಂಕ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಗೆ ವರ: ‘ಕೆ.ಸಿ ವ್ಯಾಲಿ ಯೋಜನೆ ಜಿಲ್ಲೆಗೆ ವರದಾನವಾಗಿದೆ. ಯೋಜನೆಯಿಂದ ಈಗಾಗಲೇ ಕರೆಗಳಿಗೆ ನೀರು ಹರಿಯುತ್ತಿದ್ದು, ನರಸಾಪುರ ಕೆರೆಯಲ್ಲಿ ನಿರ್ಮಿಸಿರುವ ಎತ್ತುವಳಿ ಪಂಪ್‌ಹೌಸ್ ಉದ್ಘಾಟನೆ ಹಾಗೂ ಬ್ಯಾಂಕ್ ಆಶ್ರಯದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಬಡ್ಡಿರಹಿತ ಸಾಲ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು’ ಎಂದು ಹೇಳಿದರು.

‘ಈ ಕಾರ್ಯಕ್ರಮಗಳು ರೈತರ ಹಾಗೂ ಮಹಿಳೆಯರ ಪರವಾಗಿದ್ದು, ಇದಕ್ಕೆ ಅಡ್ಡಿಪಡಿಸಬೇಕಾದ ಅಗತ್ಯವಿರಲಿಲ್ಲ. ಕೆಲ ಜನಪ್ರತಿನಿಧಿಗಳು ದುರುದ್ದೇಶಪೂರ್ವಕವಾಗಿ ವೇದಿಕೆ ಮುಂದೆ ಧರಣಿ ಮಾಡಿ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಈ ವರ್ತನೆ ಅವರಿಗೆ ಶೋಭೆ ತರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೋವಿನ ಸಂಗತಿ: ‘ಜನಪ್ರತಿನಿಧಿಗಳು ಸರ್ಕಾರ ಹಾಗೂ ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಡಿಸಿಸಿ ಬ್ಯಾಂಕ್ ಸಾಮ್ರಾಜ್ಯಶಾಹಿಯೂ ಅಲ್ಲ, ಲೇವಾದೇವಿ ವ್ಯವಹಾರ ಸಹ ಮಾಡಲ್ಲ. ಬ್ಯಾಂಕ್‌ ಆರ್ಥಿಕವಾಗಿ ದುರ್ಬಲರಾದವರಿಗೆ ಸಾಲ ನೀಡುವ ಮೂಲಕ ಸಹಾಯ ಮಾಡಿದೆ. ಇಂತಹ ಸಂದರ್ಭದಲ್ಲಿ ಕೆಲವರು ಧರಣಿ ನಡೆಸಿದ್ದು ನೋವಿನ ಸಂಗತಿ’ ಎಂದು ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಬೇಸರ ವ್ಯಕ್ತಪಡಿಸಿದರು.

‘ಸಂಘದ ವ್ಯಾಪ್ತಿಯಲ್ಲಿ 350 ಸಂಘಗಳಿದೆ. 150 ಸಂಘಗಳಿಗೆ ಹಿಂದಿನ ವರ್ಷ ಸಾಲ ನೀಡಲಾಗಿದೆ. 159 ಸಂಘಗಳಿಗೆ ಈ ಬಾರಿ ಸಾಲ ನೀಡಲಾಗಿದೆ. ಸಾಲ ವಿತರಣೆ ಹಿಂದೆ ಯಾವುದೇ ದುರುದ್ದೇಶವಿಲ್ಲ’ ಎಂದು ನರಸಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !