ಪರಿಷತ್ ಸಭಾಪತಿ ಯಾರು? ಕೊನೆ ಕ್ಷಣದ ಕುತೂಹಲ

7

ಪರಿಷತ್ ಸಭಾಪತಿ ಯಾರು? ಕೊನೆ ಕ್ಷಣದ ಕುತೂಹಲ

Published:
Updated:

ಬೆಳಗಾವಿ: ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಇದೇ 12ರಂದು ಮತದಾನ ನಿಗದಿಯಾಗಿದ್ದು, ಸರ್ಕಾರ ನಡೆಸುತ್ತಿರುವ ಮಿತ್ರ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಕುರಿತ ಗೊಂದಲ ಮುಂದುವರಿದಿದೆ.

ಹಂಗಾಮಿ ಸಭಾಪತಿಯಾಗಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹಾಗೂ ಹುದ್ದೆಯ ಆಕಾಂಕ್ಷಿ ಕಾಂಗ್ರೆಸ್‌ನ ಎಸ್.ಆರ್. ಪಾಟೀಲ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ನಾಮಪತ್ರ ಸಲ್ಲಿಸಲು ಮಂಗಳವಾರ (ಡಿ.11) ಮಧ್ಯಾಹ್ನ 12ರವರೆಗೂ ಸಮಯ ಇದೆ. ಕಾಂಗ್ರೆಸ್‌ನಿಂದ ಎಸ್.ಆರ್. ಪಾಟೀಲ ಅವರನ್ನು ನಿಲ್ಲಿಸಿ, ಗೆಲ್ಲಿಸಲೇಬೇಕು ಎಂದು ಹಟ ತೊಟ್ಟಿರುವ ಸಿದ್ದರಾಮಯ್ಯ ಈ ಸಂಬಂಧ ಸೂಚನೆ ನೀಡಿ ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ, ಕೊನೆ ಕ್ಷಣದವರೆಗೂ ಸ್ಪಷ್ಟತೆ ಮೂಡಿಲ್ಲ.

ಹೊರಟ್ಟಿ ಅವರನ್ನು ಮುಂದುವರಿಸುವ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಪೂರ್ಣ ಮನಸ್ಸಿನಿಂದ ಬೆಂಬಲ ನೀಡುತ್ತಿಲ್ಲ ಎನ್ನಲಾಗಿದೆ. ರಾಹುಲ್ ಗಾಂಧಿ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಲಿರುವ ದೇವೇಗೌಡ, ಹೊರಟ್ಟಿ ಆಯ್ಕೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿದ್ಧತೆಗೆ ಸೂಚನೆ: ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವಂತೆ ಎಸ್.ಆರ್. ಪಾಟೀಲರಿಗೆ ಪಕ್ಷ ಸೂಚಿಸಿದೆ. ಸಲ್ಲಿಕೆ ವೇಳೆ ಯಾವ ನಾಯಕರು ಹಾಜರಿರಬೇಕು ಎಂಬುದು ನಿರ್ಧಾರವಾಗಿಲ್ಲ. ಸಭಾಪತಿ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಹೈಕಮಾಂಡ್‌ನಿಂದ ಸೂಚನೆ ಬಂದರೆ ಹಿಂದೆ ಸರಿಯಿರಿ, ಇಲ್ಲದೇ ಇದ್ದರೆ ನಾಮಪತ್ರ ಸಲ್ಲಿಸಿ ಎಂಬ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷೇತರ ಸದಸ್ಯ ವಿವೇಕರಾವ್‌ ಪಾಟೀಲ ಸೇರಿ 39 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌, ಸಭಾಪತಿ ಹುದ್ದೆ ತಮಗೇ ಬೇಕು ಎಂದು ಪಟ್ಟು ಹಿಡಿದಿದೆ. ವಿಧಾನಪರಿಷತ್ತು ಇರುವ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ ಸಭಾಪತಿ ಸ್ಥಾನ ಹೊಂದಿಲ್ಲ. ಇರುವ ಅವಕಾಶವನ್ನು ಬಿಟ್ಟುಕೊಡುವುದು ಬೇಡ ಎಂಬುದು ಕಾಂಗ್ರೆಸ್‌ ನಾಯಕರ ಹಟ. ಸುವರ್ಣಸೌಧದಲ್ಲಿ ಹೊರಟ್ಟಿ ಅವರನ್ನು ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಸಿದ್ದರಾಮಯ್ಯ ಅವರ ಜತೆ ಈ ಕುರಿತು ಚರ್ಚಿಸಿರುವುದಾಗಿಯೂ ತಿಳಿಸಿದರು ಎಂದು ಗೊತ್ತಾಗಿದೆ.

ದೇವೇಗೌಡ ಹಾಗೂ ರಾಹುಲ್ ಗಾಂಧಿ ಭೇಟಿ ಬಳಿಕವಷ್ಟೇ ಸಭಾಪತಿ ಹುದ್ದೆ ಯಾವ ಪಕ್ಷಕ್ಕೆ ಸಿಗಲಿದೆ ಎಂಬುದು ಖಚಿತವಾಗಲಿದೆ.
ಒಂದು ವೇಳೆ ರಾಹುಲ್ ಒಪ್ಪಿದರೂ ಅದಕ್ಕೆ ಸಿದ್ದರಾಮಯ್ಯ ತಕರಾರು ತೆಗೆದರೆ, ಸಭಾಪತಿ ಸ್ಥಾನ ಜೆಡಿಎಸ್‌ಗೆ ಕೈತಪ್ಪುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೊನೆ ಕ್ಷಣದವರೆಗೂ ಸಭಾಪತಿ ಆಯ್ಕೆ ಕುತೂಹಲಕರವಾಗಿಯೇ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !