ಶನಿವಾರ, ಡಿಸೆಂಬರ್ 7, 2019
16 °C

ಮಹಾ ಮೈತ್ರಿಕೂಟ ರಚನೆಗೆ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಮುನ್ನಾದಿನವಾದ ಸೋಮವಾರ ರಾಜಧಾನಿಯಲ್ಲಿ ನಡೆದ ದಿಕ್ಸೂಚಿ ಸಭೆಯಲ್ಲಿ ಪಾಲ್ಗೊಂಡಿದ್ದ 21 ವಿರೋಧ ಪಕ್ಷಗಳ ಮುಖಂಡರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಣಕಹಳೆ ಊದಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ತಂತ್ರಗಾರಿಕೆ ರೂಪಿಸಲು ಮಹಾ ಮೈತ್ರಿಕೂಟ ರಚನೆಯ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ಸಹಮತ ವ್ಯಕ್ತಪಡಿಸಿದರು.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿರೋಧ ಪಕ್ಷಗಳ ಬಹುತೇಕ ನಾಯಕರು ನಿರೀಕ್ಷೆಯಂತೆ ಸಭೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಆದರೆ, ಉತ್ತರ ಪ್ರದೇಶದ ಬಹು ಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ದೂರ ಉಳಿದವು. ಮುಂದಿನ ದಿನ ಗಳಲ್ಲಿ ಬಿಎಸ್‌ಪಿಯ ಮಾಯಾವತಿ, ಎಸ್‌ಪಿ ನಾಯಕರಾದ ಮುಲಾಯಂ ಸಿಂಗ್‌ ಹಾಗೂ ಅಖಿಲೇಶ್‌ ಮನವೊಲಿಸುವುದಾಗಿ ವಿರೋಧ ಪಕ್ಷಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಸಂಸತ್‌ ಭವನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಒಟ್ಟಿಗೆ ಕಾಣಿಸಿಕೊಂಡರು.

ಸಭೆಯ ಮಧ್ಯೆದಲ್ಲಿಯೇ, ಆರ್‌ಬಿಐ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್‌ ರಾಜೀನಾಮೆ ನೀಡಿದ ಸುದ್ದಿ ಮುಖಂಡರನ್ನು ತಲುಪಿ,  ಚರ್ಚೆ ಆರ್‌ಬಿಐ, ಸಿಬಿಐನತ್ತ ಹೊರಳಿತು.

ಸಾಂವಿಧಾನಿಕ ಮಹತ್ವದ ಸ್ವಾಯತ್ತ ಸಂಸ್ಥೆಗಳ ಮೇಲೆ ಸವಾರಿ ನಡೆಸಿರುವ ಬಿಜೆಪಿ–ಆರ್‌ಎಸ್‌ಎಸ್‌ ಸೋಲಿಸಲು ಒಗ್ಗೂಡಿ ಕೆಲಸ ಮಾಡಲು ವಿರೋಧ ಪಕ್ಷಗಳ ಮುಖಂಡರು ಪಣ ತೊಟ್ಟಿದ್ದಾರೆ ಎಂದು ರಾಹುಲ್‌ ಗಾಂಧಿ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿ ಕೂಟ ರಚಿಸುವ ಬಗ್ಗೆ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್‌ ಒಲವು ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು