ಸೋಮವಾರ, ಡಿಸೆಂಬರ್ 9, 2019
24 °C

’ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ‍ಪ್ರಮಾಣ ಹೆಚ್ಚಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸುವ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇದ್ದು, ತನಿಖಾ ಗುಣಮಟ್ಟ ಹೆಚ್ಚಿಸುವ ಮೂಲಕ ಈ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ ಸದಸ್ಯ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಹೇಳಿದರು.

ಭ್ರಷ್ಟಾಚಾರ ನಿಗ್ರಹ ದಳ ಭಾನುವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೆಚ್ಚು ಶಿಕ್ಷೆಯಾದಾಗ ಈ ಪಿಡುಗನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

‘ಭ್ರಷ್ಟಚಾರವನ್ನು  ಬರೀ ಒಂದು ಅಪರಾಧ ಎಂದು ಪರಿಗಣಿಸುವುದು ಸರಿಯಲ್ಲ. ಇದನ್ನು ದೇಶದ ವಿರುದ್ಧದ ಅಪರಾಧ ಎಂಬಂತೆ ಪರಿಭಾವಿಸಬೇಕು’ ಎಂದು ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ದೂರು ನೀಡುವ ಮೂಲಕ ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಿದ ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಕಮತಗಿ ಗ್ರಾಮದ ಮುರಳೀಧರ್‌, ಬೆಳಗಾವಿ ಆರ್‌ಪಿಡಿ ಪಿ.ಯು ಕಾಲೇಜಿನ ಪ್ರಿನ್ಸಿಪಾಲ್‌, ಕಾಶೀನಾಥ್‌, ಸುಳ್ಯ ತಾಲ್ಲೂಕು ಮುರುಲ್ಯಾ ಗ್ರಾಮದ ಹರೀಶ್‌ ಕುಮಾರ್‌, ಸಂಡೂರು ತಾಲ್ಲೂಕಿನ ಟಿ. ನರಸಿಂಹ, ಹಾನಗಲ್‌ ತಾಲ್ಲೂಕು ಸಿಂದೂರಿನ ವೀರಣ್ಣ ಶಿವಕುಮಾರಪ್ಪ, ಹಾವೇರಿ ಕುರುಬಗೊಂಡದ ಶಿವಪ್ಪ ಬಸವಣ್ಣೆಪ್ಪ ಮಾಳಗಿ ಹಾಗೂ ಮೈಸೂರು ಜಿಲ್ಲೆಯ ಬೆಲವತ್ತ ಗ್ರಾಮದ ಶೀಲಾವತಿ ಅವರನ್ನು ಸನ್ಮಾನಿಸಲಾಯಿತು.

ಎಸಿಬಿ ಐಜಿಪಿ ಚಂದ್ರಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್ಪಿಗಳಾದ ರಾಂವಿಲಾಸ ಸೆಪಟ ಹಾಗೂ ಡಾ. ಸಂಜೀವ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದಕ್ಕೂ ಮುನ್ನ ನಗರದ 28 ಶಾಲೆಗಳ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು