ಸದಾಶಿವ ಆಯೋಗದ ವರದಿ ಮಂಡನೆಗೆ ಒತ್ತಾಯ

7

ಸದಾಶಿವ ಆಯೋಗದ ವರದಿ ಮಂಡನೆಗೆ ಒತ್ತಾಯ

Published:
Updated:

ಕೋಲಾರ: ‘ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮಂಡಿಸಿ ಸೂಕ್ತ ಶಿಫಾರಸುಗಳೊಂದಿಗೆ ಕೇಂದ್ರಕ್ಕೆ ಸಲ್ಲಿಸಬೇಕು’ ಎಂದು ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವೆಂಕಟೇಶಪ್ಪ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೀಸಲಾತಿ ವರ್ಗೀಕರಣಕ್ಕಾಗಿ 2 ದಶಕದಿಂದ ಹೋರಾಟ ನಡೆಸಿದ್ದರಿಂದ ಸರ್ಕಾರ ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗವು 2012ರ ಜೂನ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಮಾದಿಗ ಸಮಾಜಕ್ಕೆ ಶೇ 6ರಷ್ಟು ಮೀಸಲಾತಿ ನಿಗದಿಪಡಿಸುವಂತೆ ಶಿಫಾರಸು ಮಾಡಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಅಂಗೀಕರಿಸದೆ ವಿಳಂಬ ಮಾಡುತ್ತಿದೆ. ಬಂಜಾರ, ಭೋವಿ ಹಾಗೂ ಲಂಬಾಣಿ ಸಮುದಾಯವು ಆಯೋಗದ ವರದಿ ವಿರೋಧಿಸಿರುವುದು ಸರಿಯಲ್ಲ. ಈ ಸಮುದಾಯಗಳು ತಮ್ಮ ನಿಲುವು ಬದಲಿಸದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿಯವರು ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು. ಜತೆಗೆ ಬಡ್ತಿ ಮೀಸಲಾತಿಗೆ ಸುಗ್ರೀವಾಜ್ಞೆ ಹೊರಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಹಿತರಕ್ಷಣೆ ಮಾಡಬೇಕು. ಮಾದಿಗ ಸಮುದಾಯಕ್ಕೆ ಮಂಜೂರಾಗಿರುವ ಪ್ರತ್ಯೇಕ ಆದಿಜಾಂಭವ ಅಭಿವೃದ್ಧಿ ನಿಗಮವು ಶೀಘ್ರವೇ ಕಾರ್ಯಾರಂಭ ಮಾಡಬೇಕು’ ಎಂದು ಹೇಳಿದರು.

ಸಹಕಾರ ಆಗಿಲ್ಲ: ‘ರಾಜ್ಯದಲ್ಲಿನ ಆಡಳಿತಾರೂಢ ಮೈತ್ರಿ ಸರ್ಕಾರದಲ್ಲಿ ಮಾದಿಗ ಸಮುದಾಯದ ಒಬ್ಬರೇ ಶಾಸಕರಿದ್ದಾರೆ. ಸಮುದಾಯದ ಬಗ್ಗೆ ಧ್ವನಿ ಎತ್ತುವ ಜನಪ್ರತಿನಿಧಿಗಳಿಲ್ಲ. ಸಂಸದ ಕೆ.ಎಚ್.ಮುನಿಯಪ್ಪ ಅವರಿಂದ ಸಮುದಾಯಕ್ಕೆ ಯಾವುದೇ ಸಹಕಾರ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾ ಕೇಂದ್ರದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ 20 ಗುಂಟೆ ಜಮೀನು ಮಂಜೂರಾಗಿದೆ. ಆದರೆ, ಭವನಕ್ಕೆ ಇಷ್ಟು ಜಮೀನು ಸಾಕಾಗುವುದಿಲ್ಲ. ಆದ ಕಾರಣ ಜಿಲ್ಲಾಡಳಿತವು ಮತ್ತೊಂದು ನಿವೇಶನ ಮಂಜೂರು ಮಾಡಿ ಭವನ ನಿರ್ಮಿಸಬೇಕು’ ಎಂದು ಮನವಿ ಮಾಡಿದರು. ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವರಾಜ್, ಕಾರ್ಯಾಧ್ಯಕ್ಷ ಕೃಷ್ಣಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !